ನಾಪತ್ತೆಯಾಗಿದ್ದ ದಲಿತ ಮಹಿಳೆ ಮೂರು ದಿನದ ಬಳಿಕ ಶವವಾಗಿ ಪತ್ತೆ: ಸಾವಿನ ಸುತ್ತ ಹತ್ತಾರು ಅನುಮಾನ
ತುಮಕೂರಿನ ತಿಪಟೂರು ತಾಲೂಕಿನ ಮರಗೊಂಡನಹಳ್ಳಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ತೆಂಗಿನ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಕಂಡುಬಂದಿದೆ. ಕುಟುಂಬಸ್ಥರು ಇದೊಂದು ಉದ್ದೇಶಪೂರ್ವಕ ಕೊಲೆ ಎಂದು ಆರೋಪಿಸಿದ್ದು, ಗ್ರಾಮದಲ್ಲಿನ ಜಾತಿ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ದಲಿತ ಮಹಿಳೆಯಾಗಿದ್ದ ಈಕೆಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತುಮಕೂರು, ಮೇ 10: ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ತಿಪಟೂರು ತಾಲ್ಲೂಕಿನ ಮಾರಗೊಂಡನಹಳ್ಳಿ ನಿವಾಸಿ ಚೆನ್ನಮ್ಮ ಮೃತ ದುದೈವಿಯಾಗಿದ್ದು, ಗ್ರಾಮದ ವ್ಯಕ್ತಿಯೋರ್ವರ ತೆಂಗಿನ ತೋಟದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚೆನ್ನಮ್ಮರದ್ದು ಅಸಹಜ ಸಾವೋ ಅಥವಾ ಕೊಲೆಯೋ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಆ ಬಳಿಕವೇ ಸಾವಿನ ಹಿಂದಿನ ಸತ್ಯ ಬಯಲಾಗಬೇಕಿದೆ.
ಮುಖ್ಯಾಂಶಗಳು
- ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಶವವಾಗಿ ಪತ್ತೆ
- ತಿಪಟೂರಿನ ಮಾರಗೊಂಡನಹಳ್ಳಿ ನಿವಾಸಿ ಚೆನ್ನಮ್ಮ ಮೃತ ಮಹಿಳೆ
- ತೆಂಗಿನ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುಬ ಶವ
ಪತಿ ಹಾಗೂ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಿದ್ದ ಚೆನ್ನಮ್ಮ ಮೇ 7ರ ಸಂಜೆ 5.30ರ ವೇಳೆಗೆ ಮನೆಯಿಂದ ಹೊರ ಹೋಗಿದ್ದವಳು ಮರಳಿ ಬಂದಿರಲಿಲ್ಲ. ಆಕೆಗಾಗಿ ಮೂರು ದಿನಗಳ ಕಾಲ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಯಾರ ಸಹವಾಸಕ್ಕೂ ಹೊಗದ ಚೆನ್ನಮ್ಮ ಶವ ಪತ್ತೆಯಾಗಿರೋದು ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದೇಹದ ಮೇಲಿದ್ದ ಆಭರಣ ಕೂಡ ಹಾಗೆಯೇ ಇರೋದು ಕಂಡುಬಂದಿದೆ. ಹೀಗಿದ್ದರೂ ಈಕೆಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಇದೊಂದು ಉದ್ದೇಶ ಪೂರ್ವಕ ಕೊಲೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಅತ್ತೆ ಜೊತೆ ಅಳಿಯನ ಅಕ್ರಮ ಸಂಬಂಧಕ್ಕೆ ಹೋಗಿದ್ದು ಮೂರು ಜೀವ!; ತುಮಕೂರಲ್ಲಿ ದಾರುಣ ಘಟನೆ
ಅಸಲಿಗೆ ಕೆಲ ವರ್ಷಗಳಿಂದ ಊರಿನಲ್ಲಿ ದಲಿತರು ಹಾಗೂ ಸವರ್ಣೀಯರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದಕ್ಕೆ ಕಾರಣ ನಾಲ್ಕು ವರ್ಷದ ಹಿಂದೆ ಇದೇ ಊರಿನ ದೇವಸ್ಥಾನದೊಳಗೆ ದಲಿತರ ಪ್ರವೇಶ. ಇದಾದ ಬಳಿಕ ದಲಿತರ ಉದ್ದೇಶ ಪೂರ್ವಕವಾಗಿ ತುಳಿಯುವ ಪ್ರಯತ್ನ ಗ್ರಾಮದಲ್ಲಿ ಕೆಲವರಿಂದ ಆಗುತ್ತಿದೆ ಎಂದು ಆರೋಪ ಸಹ ಕೇಳಿ ಬಂದಿದೆ. ಮೃತ ಚೆನ್ನಮ್ಮ ದಲಿತ ಮಹಿಳೆಯಾಗಿದ್ದು, ಮೇಲ್ವರ್ಗದವರ ಜಮೀನಿನೊಳಗೆ ಬಂದಿದ್ದಾಳೆಂದು ಕೊಲೆ ಮಾಡಿರಬಹುದೆಂಬ ಆರೋಪ ಮಾಡಲಾಗಿದೆ. ಆದರೆ ಸ್ಥಳಕ್ಕೆ ಭೇಟಿ ನೀಡಿದ್ದ ಹೊನ್ನವಳ್ಳಿ ಪೊಲೀಸರ ಸಹಿತ ಮೇಲಾಧಿಕಾರಿಗಳು ಇದು ಅಸಹಜ ಸಾವೆಂದು ಅನುಮಾನಿಸಿದ್ದಾರೆ. ತೋಟಕ್ಕೆ ಬಂದ ಆಕೆ ಹಾವು ಕಚ್ಚಿಯೋ ಅಥವಾ ದಿಬ್ಬದಿಂದ ಕುಸಿದು ನೆಲಕ್ಕೆ ಬಿದ್ದೋ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆಯೂ ಕುಟುಂಬಸ್ಥರ ಆರೋಪ ಹಿನ್ನೆಲೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೊತ್ತರ ಪರಿಕ್ಷೆಗೆ ರವಾನಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



