ರಸ್ತೆಯುದ್ದಕ್ಕೂ ಮನುಷ್ಯನ ಕೈ, ಕಾಲುಗಳು ಪತ್ತೆ, 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ
ತುಮಕೂರಿನ ಕೊರಟಗೆರೆ ಮತ್ತು ಕೊಳಾಲ ವ್ಯಾಪ್ತಿಯಲ್ಲಿ ಗುರುವಾರ ಮೃತದೇಹದ ತುಂಡುಗಳು ಪತ್ತೆಯಾಗಿದ್ದವು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ರುಂಡ ಮತ್ತು ಮುಂಡವನ್ನು ಪತ್ತೆಯಾಗಿವೆ . ಮೊದಲು ಕೈ, ಕರುಳು ಮುಂತಾದ ಅಂಗಾಂಗಗಳು ಪತ್ತೆಯಾಗಿದ್ದವು. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ ಮತ್ತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಎಫ್‍ಎಸ್‍ಎಲ್ ವರದಿಯನ್ನು ಆಧರಿಸಿ ಮೃತಪಟ್ಟವರ ಗುರುತು ಪತ್ತೆಗೆ ಪ್ರಯತ್ನ ನಡೆಯುತ್ತಿದೆ.

ತುಮಕೂರು, ಆಗಸ್ಟ್ 08: ಕೊರಟಗೆರೆ (Koratgere) ಹಾಗೂ ಕೊಳಾಲ ವ್ಯಾಪ್ತಿಯಲ್ಲಿ ಮೃತದೇಹದ ತುಂಡುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ (Police) ಸತತ ಹುಡುಕಾಟದ ಬಳಿಕ ರುಂಡ ಹಾಗೂ ಮುಂಡ ಪತ್ತೆಯಾಗಿವೆ. ಗುರುವಾರ (ಆ.07) ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದಿಂದ ವೆಂಕಟಾಪುರದವರೆಗೆ ದೇಹದ ಕೈ ಹಾಗೂ ಕರುಳು ಪತ್ತೆಯಾಗಿತ್ತು. ಈಗ ಕೊರಟಗೆರೆಯ ಸಿದ್ದರ ಬೆಟ್ಟರಸ್ತೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರುಂಡ ಪತ್ತೆಯಾಗಿದೆ. ಸಿದ್ದರಬೆಟ್ಟದ ರಸ್ತೆಯ ಪಕ್ಕದಲ್ಲಿ ಕಾಲುಗಳು ಪತ್ತೆಯಾಗಿವೆ. ರುಂಡದ ಮುಡಿಗೆ ಹಾಕುವ ಕ್ಲಿಪ್ ಸಿಕ್ಕಿದೆ. ಪತ್ತೆಯಾದ ಮೃತದೇಹದ ಭಾಗಗಳು ಮಹಿಳೆಯದ್ದು ಎಂಬ ಅನುಮಾನ ವ್ಯಕ್ತವಾಗಿದೆ.
ಸರಿ ಸುಮಾರು 30 ಕಿ.ಮಿ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ದೇಹದ ತುಂಡುಗಳ ಪತ್ತೆಯಾಗಿವೆ. ಒಟ್ಟಾರೆಯಾಗಿ 8 ಕ್ಕೂ ಅಧಿಕ ಸ್ಥಳಗಳಲ್ಲಿ ದೇಹದ ವಿವಿಧ ಭಾಗಗಳು ಕವರ್ಗಳಲ್ಲಿ ಪತ್ತೆಯಾಗಿವೆ. ಕೊರಟಗೆರೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
4 ಕಡೆ ಪತ್ತೆಯಾಗಿದ್ದ ಭಾಗಗಳು
ತುಮಕೂರಿನ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ಹೊರ ವಲಯದ ಮುತ್ಯಲಮ್ಮ ದೇವಸ್ಥಾನದಿಂದ ಸರಿ ಸುಮಾರು 3 ಕಿ.ಮೀ ವ್ಯಾಪ್ತಿಯ ಒಂದೇ ರಸ್ತೆಯಲ್ಲಿ ಗುರುವಾರ (ಆ.08) ನಾಲ್ಕು ಕಡೆ ಮನುಷ್ಯನ ದೇಹದ ಕೆಲ ಭಾಗಗಳು ಸಿಕ್ಕಿದ್ದವು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಓರ್ವ ರೈತರು ಜಮೀನಿನ ಕಡೆ ಹೋಗುತ್ತಿದ್ದಾಗ ಕೈ ತುಂಡು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ ಕಪ್ಪು ಕವರ್ನಲ್ಲಿ ಕೈ ತುಂಡು ಪತ್ತೆಯಾಗಿತ್ತು. ಅದೇ ರಸ್ತೆಯಲ್ಲಿ ತಡಕಾಡಿದ ಪೊಲೀಸರಿಗೆ ಸರಿಸುಮಾರು 3 ಕಿ.ಮಿ ವ್ಯಾಪ್ತಿಯಲ್ಲಿ ಮತ್ತೊಂದು ಕೈ, ಹೊಟ್ಟೆಯ ಭಾಗದ ತುಂಡು ಹಾಗೂ ಕರುಳು ಪತ್ತೆಯಾಗಿತ್ತು. ಎಲ್ಲವನ್ನು ಹಳದಿ ಹಾಗೂ ಕಪ್ಪು ಕವರ್ನಲ್ಲಿಟ್ಟು ರಸ್ತೆಯ ಒಂದೇ ದಿಕ್ಕಿನ ಕಡೆ ಎಸೆದಿದ್ದು ಹಲವು ಅನುಮಾನ ಮೂಡಿಸಿತ್ತು.ಪ್ರಾಥಮಿಕವಾಗಿ ಕೈ ಮೇಲೆ ಕಂಡ ಟ್ಯಾಟುವಿನಿಂದ ಇದು ಮಹಿಳೆಯ ಶವ ಎಂಬ ಅನುಮಾನ ಮೂಡಿತ್ತು.
ಇದನ್ನೂ ಓದಿ: ಗೃಹ ಸಚಿವರ ಊರಲ್ಲೇ ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆ, ಬೆಚ್ಚಿಬಿದ್ದ ಗ್ರಾಮಸ್ಥರು!
ಪತ್ತೆಯಾದ ಮೃತದೇಹದ ಬಿಡಿ ಭಾಗಗಳನ್ನು ಪೊಲೀಸರು ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ವರದಿ ಆಧಾರದಲ್ಲಿ ಗುರುತು ಪತ್ತೆಗೆ ಮುಂದಾಗಿದ್ದಾರೆ. ಅಪರಿಚಿತ ಶವ ಗುರುತು ಪತ್ತೆ ಕಾರ್ಯ ಆರಂಭವಾಗಿದ್ದು, ಸ್ಥಳೀಯವಾಗಿ ಕಾಣೆಯಾದವರ ಬಗ್ಗೆ ಮಾಹಿತಿ ಪಡೆಯುವ ಮೂಲಕ ಗುರುತು ಪತ್ತೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಕೊರಟಗೆರೆ ತಾಲೂಕಿನಲ್ಲಿ ಸಿಕ್ಕ ಶವ ಆತಂಕ ಸೃಷ್ಟಿಸಿದ್ದು, ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Fri, 8 August 25



