ಎತ್ತಿನಹೊಳೆ ಯೋಜನೆ ನಾವೇ ಪೂರ್ಣಗೊಳಿಸುತ್ತೇವೆ: ಸಿಎಂ ಸಿದ್ದರಾಮಯ್ಯ ಭರವಸೆ

ತುಮಕೂರು ಜಿಲ್ಲೆಯ ಮಧುಗಿರಿ ರಾಜೀವ್​ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 1 ರೂ. ಸಹ ಬಂದಿಲ್ಲ. ಹಾಗಾಗಿ ಎತ್ತಿನಹೊಳೆ ಯೋಜನೆಗೆ ಒತ್ತುಕೊಟ್ಟು ನಾವೇ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.

Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 06, 2023 | 4:47 PM

ತುಮಕೂರು, ಸೆಪ್ಟೆಂಬರ್​ 6: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 1 ರೂ. ಸಹ ಬಂದಿಲ್ಲ.  ಎತ್ತಿನಹೊಳೆ ಯೋಜನೆ (yettinahole project)  ಗೆ ಒತ್ತುಕೊಟ್ಟು ನಾವೇ ಪೂರ್ಣಗೊಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಜಿಲ್ಲೆಯ ಮಧುಗಿರಿ ರಾಜೀವ್​ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡುವಂತೆ K.N.ರಾಜಣ್ಣ ಕೇಳಿದ್ದಾರೆ. ಈ ಕುರಿತಾಗಿ ಮಧುಗಿರಿ ಜಿಲ್ಲಾ ಕೇಂದ್ರ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ಮಾಡುತ್ತದೆ. ಮಧುಗಿರಿಯ ಏಕಶಿಲಾ ಬೆಟ್ಟಕ್ಕೆ ರೋಪ್​ವೇ ವ್ಯವಸ್ಥೆ ಕಲ್ಪಿಸುತ್ತೇವೆ. ತಾಯಿ ಮಕ್ಕಳ ಆಸ್ಪತ್ರೆಯನ್ನು ಮುಂದಿನ ವರ್ಷ ಮಂಜೂರು ಮಾಡುತ್ತೇವೆ ಎಂದು ಹೇಳಿದರು.

2013ರ ಆಗಸ್ಟ್ 1ರಂದು ಕ್ಷೀರಭಾಗ್ಯ ಯೋಜನೆಗೆ ನಾನೇ ಚಾಲನೆ ನೀಡಿದ್ದೆ. ಇಂದು ಯೋಜನೆ ದಶಮಾನೋತ್ಸವ ಕಾರ್ಯಕ್ರಮದಲ್ಲೂ ಸಿಎಂ ಆಗಿದ್ದೇನೆ. ಬಹಳಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶಾಲಾ ಮಕ್ಕಳಿಗೆ ಹಾಲು ಕೊಡುವುದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗುತ್ತದೆ. ಯೋಜನೆಯಿಂದ ಹಾಲು ಉತ್ಪಾದಕರು, ಕೆಎಂಎಫ್​ಗೂ ಅನುಕೂಲವಾಗುತ್ತಿದೆ. ಪ್ರತಿ ಮಗುವಿಗೂ 150 ಮಿಲಿಲೀಟರ್ ಹಾಲು ನೀಡುವಂತೆ ನಿರ್ಧರಿಸಿದ್ದೆವು  ರಾಜ್ಯದ 54 ಲಕ್ಷದ 68 ಸಾವಿರ ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ; ಡಿಕೆ ಶಿವಕುಮಾರ್ ವಿವಾದಿತ ಹೇಳಿಕೆ

ಕ್ಷೀರಭಾಗ್ಯ ಯೋಜನೆ 10 ವರ್ಷ ಯಶಸ್ವಿಯಾಗಿ 11ನೇ ವರ್ಷಕ್ಕೆ ಕಾಲಿಟ್ಟಿದೆ. ಶೂ ಭಾಗ್ಯ ಕಾರ್ಯಕ್ರಮ ಕೂಡ ಮಧುಗಿರಿಯಲ್ಲೇ ಉದ್ಘಾಟನೆ ಮಾಡಿದ್ದೆವು. ಕೆ.ಎನ್.ರಾಜಣ್ಣ ಹೇಳಿದ ಕೂಡಲೇ ನಾನು ಯೋಜನೆಯನ್ನು ಘೋಷಿಸಿದೆ. ನಾನು ಹೈಸ್ಕೂಲ್ ಬರೋವರೆಗೂ ಶೂ ಹಾಕಿರಲಿಲ್ಲ. ಬಡ ಮಕ್ಕಳ ದೃಷ್ಟಿಯಲ್ಲಿಟ್ಟುಕೊಂಡು ಶೂ ಭಾಗ್ಯ ಯೋಜನೆ ತಂದಿದ್ದೇವೆ ಎಂದು ಹೇಳಿದರು.

ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಕೇಂದ್ರದ ಎಫ್​ಸಿಐಗೆ ಪತ್ರ ಬರೆದ್ರೂ ಹೆಚ್ಚುವರಿ ಅಕ್ಕಿ ರಾಜ್ಯಕ್ಕೆ ಕೊಡಲಿಲ್ಲ. ಬಿಜೆಪಿಯವರು ಶ್ರೀಮಂತರ ಪರವಾಗಿದ್ದಾರೆ, ಅವರು ಬಡವರ ಪರ ಇಲ್ಲ. ರಾಜ್ಯಕ್ಕೆ ಅಕ್ಕಿ ನೀಡುವುದಾಗಿ ಹೇಳಿ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಇವರು ಬಡವರ ವಿರೋಧಿಗಳು, ಎಂತಹ ನೀಚರಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್

ಪಡಿತರ ಅಕ್ಕಿಯನ್ನು ಯಾರೂ ಮಾರಾಟ ಮಾಡದಂತೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಸಿಎಂ ಮನವಿ ಮಾಡಿದರು. ರಾಜ್ಯದಲ್ಲಿ 4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಪಡಿತರ ಅಕ್ಕಿ ನೀಡ್ತಿದ್ದೇವೆ. ಉಚಿತ ಯೋಜನೆ ನೀಡಿದ್ರೆ ರಾಜ್ಯ ದಿವಾಳಿಯಾಗುತ್ತೆ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ; ಸಚಿವ ಉದಯನಿಧಿ ಸ್ಟಾಲಿನ್ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು: ಮಾಜಿ ಶಾಸಕ ಸಿಟಿ ರವಿ ಕಿಡಿ

ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿ ತೋರಿಸುತ್ತೇವೆ. ಅದರಂತೆ ಇಂದು 5 ಗ್ಯಾರಂಟಿಗಳ ಪೈಕಿ 4 ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಉಚಿತ ಯೋಜನೆ ನೀಡಿದ್ದೇವೆ, ಕರ್ನಾಟಕವನ್ನು ನಾವು ದಿವಾಳಿಯಾಗಿ ಮಾಡಿಲ್ಲ ಎಂದು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ವೋಟ್ ಹಾಕಬೇಡಿ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಶಕ್ತಿ ಯೋಜನೆ ಶ್ಲಾಘಿಸಿ ಧರ್ಮಸ್ಥಳ ಧರ್ಮಾಧಿಕಾರಿ ಪತ್ರ ಬರೆದಿದ್ದರು. ಧರ್ಮಸ್ಥಳದ ಮಂಜುನಾಥನಿಗೆ ನನ್ನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ರಾಜ್ಯದ 7 ಕೋಟಿ ಕನ್ನಡಿಗರ ಹೆಸರಿನಲ್ಲಿ ಅರ್ಚನೆ ಮಾಡಿ ಎಂದು ಹೇಳಿದ್ದೆ. ಗೃಹಲಕ್ಷ್ಮೀ ಯೋಜನೆಯಡಿ 1 ಕೋಟಿ 10 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ. ಹಣ ನೀಡುತ್ತಿದ್ದೇವೆ.

ಉಚಿತ ಯೋಜನೆ ಕೊಟ್ಟರೇ ದಿವಾಳಿಯಾಗುತ್ತೆ ಅಂತಾ ಮೋದಿ ಹೇಳುತ್ತಾರೆ. ಅದಾನಿ, ಅಂಬಾನಿಗೆ ಕೇಂದ್ರದಿಂದ ನೆರವು ನೀಡಿದರೆ ದಿವಾಳಿ ಆಗಲ್ವಾ ಎಂದು ಪ್ರಶ್ನಿಸಿದರು. ಬಡವರು ಬಡವರಾಗಿಯೇ ಉಳಿಯಬೇಕೆಂಬುದು ಬಿಜೆಪಿಯವರ ಉದ್ದೇಶ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ವೋಟ್ ಹಾಕಬೇಡಿ ಎಂದು ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.