ಸಚಿವ ಉದಯನಿಧಿ ಸ್ಟಾಲಿನ್ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು: ಮಾಜಿ ಶಾಸಕ ಸಿಟಿ ರವಿ ಕಿಡಿ
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದು, ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆ, ಟೀಕೆಗೆ ಅವಕಾಶ ಇದೆ. ನೀನು ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು. ಈ ವಿಚಾರದಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಲಕ್ಕಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 6: ನಮ್ಮ ಸನಾತನ ಧರ್ಮದಲ್ಲಿ ಪ್ರಶ್ನೆ, ಟೀಕೆಗೆ ಅವಕಾಶ ಇದೆ. ನೀನು ಅರಬ್, ಸೌದಿ ಭಾಗದಲ್ಲಿ ಹುಟ್ಟಿದ್ದರೆ ಖೇಲ್ ಖತಂ ಆಗುತ್ತಿತ್ತು. ಈ ಕಾರಣಕ್ಕೆ ಸಚಿವ ಉದಯನಿಧಿ ಸ್ಟಾಲಿನ್ ಲಕ್ಕಿ ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ (CT Ravi) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ನೀನು ಹುಟ್ಟಿದ್ದೀಯಾ. ಒಂದು ವೇಳೆ ಬೇರೆ ಕಡೆ ಹುಟ್ಟಿದ್ದರೆ ಕಥೆ ಮುಗಿಯುತ್ತಿತ್ತು. ಆದರೂ ಯಾರೋ ತಲೆಗೆ ಬೆಲೆ ಕಟ್ಟಿದ್ದಾರೆ. ನಮ್ಮ ದೇಶದಲ್ಲಿ ಅಷ್ಟು ಬೇಗ ಯಾರೂ ತಲೆ ತೆಗೆಯುವುದಿಲ್ಲ ಎಂದು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಸಿ.ಟಿ.ರವಿ ತೀವ್ರ ವಾಗ್ದಾಳಿ
ಜಾತೀಯತೆ ತಪ್ಪು, ಹಾಗಂತ ಧರ್ಮವನ್ನು ದೂರ ಮಾಡಬೇಕಾ? ಧರ್ಮವನ್ನು ದೂರ ಮಾಡಿದರೆ ಅಧರ್ಮ ಹೆಚ್ಚಾಗುತ್ತದೆ. ಶಬರಿ ರಾಮನನ್ನು ಹುಡುಕಿ ಹೋಗಲಿಲ್ಲ. ರಾಮನೇ ಶಬರಿಯನ್ನು ಹುಡುಕಿ ಹೋದ. ಶಬರಿ ಬ್ರಾಹ್ಮಣೆ ಅಲ್ಲ, ಕೃಷ್ಣ ಗುರುತಿಸಿಕೊಂಡಿದ್ದು ಗೊಲ್ಲನಾಗಿ. ಅಂತಹ ಕೃಷ್ಣ ನಮಗೆ ಭಗವಂತ ಎಂದರು.
ಇದನ್ನೂ ಓದಿ: ಹಿಂದೂ ಧರ್ಮವನ್ನ ಯಾರು ಹುಟ್ಟಿಸಿದರೆಂದು ಪ್ರಶ್ನಿಸಿದ ಪರಮೇಶ್ವರ್ಗೆ ಅಜ್ಜ, ಮುತ್ತಜ್ಜನ ಹೆಸರೇಳುವಂತೆ ಈಶ್ವರಪ್ಪ ಸವಾಲ್
ಕಾಂಗ್ರೆಸ್‌ನವರು ತಮ್ಮ ಬೂಟಾಟಿಕೆಗಳನ್ನು ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಒಂದು ಕುಟುಂಬದ ಪ್ರಭಾವದಿಂದ ಹೊರಗೆ ಬರುವುದಿಲ್ಲ. ವೈಯಕ್ತಿಕ ಹಿತಾಸಕ್ತಿಯೇ ಒಂದು ಜಾತಿಯಾಗಿ ಕೆಲಸ ಮಾಡುತ್ತದೆ ಎಂದು ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಸಿ.ಟಿ.ರವಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಭಾರತ ಅನ್ನುವುದು ಅಸ್ವಿತ್ವ, ಆತ್ಮ
ಭಾರತ್ ಎಂದು ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಭಾರತ ಎನ್ನುವುದು ಅಸ್ತಿತ್ವ ಮತ್ತು ಆತ್ಮ. ವ್ಯಕ್ತಿ ಆತ್ಮಹೀನನಾದರೆ, ಏನೆಂದು ಕರೆಯುತ್ತೇವೋ, ಹಾಗೆ ಒಂದು ದೇಶ ತನ್ನ ಅಸ್ಮಿತೆಯನ್ನು ಕಳೆದುಕೊಂಡರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿದೆ. ವಿಷ್ಣು ಪುರಾಣದಲ್ಲಿ ಭಾರತ ಎಂಬುದರ ಬಗ್ಗೆ ಚರ್ಚೆಯಾಗಿದೆ.
ಇದನ್ನೂ ಓದಿ: ಪಕ್ಷ ವಿರೋಧ ಚಟುವಟಿಕೆ: ಮಾಜಿ ಶಾಸಕ ಮತ್ತು ಮೂವರು ಪುತ್ರರು ಬಿಜೆಪಿಯಿಂದ ಉಚ್ಚಾಟನೆ
ಮಹಾತ್ಮ ಗಾಂಧಿಯವರ ಜೀವನ ಚರಿತ್ರೆಯಲ್ಲೂ ಭಾರತ ಇದೆ. ಹೋರಾಟ ಮಾಡುವವರಿಗೆ ಮಂತ್ರವಾಗಿದ್ದೇ ಭಾರತ ಮಾತಾ ಕೀ ಜೈ. ಇಂಡಿಯಾ ಅನ್ನೋದು ವ್ಯವಹಾರಿಕ ದೃಷ್ಟಿಯಿಂದ ಬಂದಿದೆ ಅಷ್ಟೇ. ಪರಕೀಯರ ಆಕ್ರಮಣವಾದಾಗ ಇಂಡಿಯಾ ಆಗಿದೆ ಅಷ್ಟೇ.
ದೇಶದ ಯಾವ ಸಾಹಿತ್ಯದಲ್ಲೂ ಇಂಡಿಯಾ ಅನ್ನೋ ಹೆಸರಿಲ್ಲ. ಕಾಂಗ್ರೆಸ್ಸಿಗರು ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ ಬಂದಿದ್ದಾರೆ. ಬಹುಶಃ ಇದಕ್ಕಾಗಿ ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜಿಸಿದರು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.