Tv9 Digital Live: ಕೊರೊನಾ ಸಂಕಷ್ಟದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಕಾಳಜಿ ಹೇಗೆ? ಬಂಧುಗಳ, ಸರ್ಕಾರದ ಜವಾವ್ದಾರಿ ಏನು?

‘ಸರ್ಕಾರಕ್ಕೆ ಮಾಹಿತಿ ನೀಡದೇ ಮಕ್ಕಳನ್ನು ಸಾಕುವುದು ಅಪರಾಧವಾಗುತ್ತೆ. ಮಕ್ಕಳು ಅಂದ್ರೆ ಕಮಾಡಿಟಿ (ಉತ್ಪನ್ನ) ಅಲ್ಲ. ಹಲವು ಸೂಕ್ಷ್ಮಗಳು ಇರುವ ಪ್ರಶ್ನೆ ಇದು’ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತವಾಯಿತು. ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆ ಬಗ್ಗೆ ನಡೆದ ಅರ್ಥಪೂರ್ಣ ಸಂವಾದದ ಅಕ್ಷರ ರೂಪ ಇಲ್ಲಿದೆ.

Tv9 Digital Live: ಕೊರೊನಾ ಸಂಕಷ್ಟದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಕಾಳಜಿ ಹೇಗೆ? ಬಂಧುಗಳ, ಸರ್ಕಾರದ ಜವಾವ್ದಾರಿ ಏನು?
ಆ್ಯಂಕರ್ ಹರಿಪ್ರಸಾದ್ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 28, 2021 | 9:44 PM

ಕೊರೊನಾ ಮಹಾಪಿಡುಗಿನ 2ನೇ ಅಲೆ ದೇಶವನ್ನು ವ್ಯಾಪಿಸಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಳ್ಳುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಇಂಥ ಮಕ್ಕಳ ಕಾಳಜಿ ಹೇಗೆ? ಸರ್ಕಾರದ ಮತ್ತು ಆ ಮಕ್ಕಳ ಬಂಧುಗಳ ಜವಾಬ್ದಾರಿ ಏನು? ಸರ್ಕಾರೇತರ ಸಂಸ್ಥೆಗಳು, ಮಕ್ಕಳ ಕಲ್ಯಾಣ ಸಮಿತಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಶುಕ್ರವಾರ ನಡೆದ ಟಿವಿ9 ಕನ್ನಡ ಡಿಜಿಟಲ್ ಲೈವ್ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಿತು. ಟಿವಿ9 ಆ್ಯಂಕರ್ ಹರಿಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ ಮತ್ತು ಮಕ್ಕಳ ಕಾಳಜಿ ಕೇಂದ್ರದ ಮುಖ್ಯಸ್ಥೆ ಮಾಲತಿ ಮೋಹನ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಚಾಮರಾಜನಗರದಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗುವೊಂದನ್ನು ಸಾಕುತ್ತಿರುವ ಗುರು ಎಂಬ ಪೋಷಕರು ಸಹ ತಮ್ಮ ಪರಿಸ್ಥಿತಿ ವಿವರಿಸಿದರು.

ಸಂವಾದ ಆರಂಭಿಸಿದ ಟಿವಿ9 ಆ್ಯಂಕರ್ ಹರಿಪ್ರಸಾದ್, ‘ಅಪ್ಪ-ಅಮ್ಮ ಕೊರೊನಾದಿಂದ ಮೃತಪಟ್ಟು ಮಕ್ಕಳು ಅನಾಥರಾಗುತ್ತಿರುವ ಹಲವು ಉದಾಹರಣೆಗಳು ನಮ್ಮೆದುರು ಇವೆ. ಚಾಮರಾಜಗರದಲ್ಲಿ ಅಪ್ಪ ಮೃತಪಟ್ಟ ಒಂದು ವಾರದಲ್ಲಿ 4 ವರ್ಷದ ಬಾಲಕಿ ಅಮ್ಮನನ್ನೂ ಕಳೆದುಕೊಂಡಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ ಮಗುವಿಗೆ ಜನ್ಮನೀಡಿದ ತಾಯಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅದಕ್ಕೂ ಮೊದಲು ಆ ಮಗು ತಂದೆಯನ್ನು ಕಳೆದುಕೊಂಡಿತ್ತು. ಕೊರೊನಾ ಸಂದರ್ಭದಲ್ಲಿ ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಮಕ್ಕಳ ಭವಿಷ್ಯದ ಸುರಕ್ಷೆ ಖಾತ್ರಿಪಡಿಸುವುದು ಹೇಗೆ? ಮಗುವಿಗೆ ಕೇವಲ ರಕ್ಷಣೆ ನೀಡಿದರೆ ಸಾಕಾಗುವುದಿಲ್ಲ. ಅದಕ್ಕೆ ಪೋಷಕರ ಪ್ರೀತಿಯೂ ಸಿಗಬೇಕು. ಅನಾಥ ಮಕ್ಕಳನ್ನು ದತ್ತು ತಗೊಳ್ಳೋಕೆ ಯಾರಿಗೂ ಬಿಡಬೇಡಿ ಅಂತ ಸರ್ಕಾರ ಹೇಳಿದೆ. ಹಾಗಿದ್ದರೆ ಆ ಮಗುವಿನ ವ್ಯವಸ್ಥೆ ಹೇಗೆ ಮಾಡುತ್ತೆ? ಸರ್ಕಾರ, ಜಿಲ್ಲಾಡಳಿತಗಳು ಹೇಗೆ ನೆರವಿಗೆ ಬರುತ್ತವೆ’ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗಳಿಗೆ ಮೊದಲು ಮುಖಾಮುಖಿಯಾದವರು ಮಕ್ಕಳ ಹಕ್ಕುಗಳ ಹೋರಾಟಗಾರ ವಾಸುದೇವ ಶರ್ಮಾ. ‘ಸರ್ಕಾರಕ್ಕೆ ಮಾಹಿತಿ ನೀಡದೇ ಮಕ್ಕಳನ್ನು ಸಾಕುವುದು ಅಪರಾಧವಾಗುತ್ತೆ. ಮಕ್ಕಳು ಅಂದ್ರೆ ಕಮಾಡಿಟಿ (ಉತ್ಪನ್ನ) ಅಲ್ಲ. ಹಲವು ಸೂಕ್ಷ್ಮಗಳು ಇರುವ ಪ್ರಶ್ನೆ ಇದು’ ಎಂಬ ಎಚ್ಚರಿಕೆ ಹೇಳಿದ ವಾಸುದೇವ ಶರ್ಮಾ ಅವರ ಮಾತುಗಳ ಅಕ್ಷರ ರೂಪ ಇಲ್ಲಿದೆ.

‘ಸುಮಾರು ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾಗಳಲ್ಲಿ ಅನಾಥ ಮಕ್ಕಳ ಪಾಲನೆ ವಿಚಾರದ ಬಗ್ಗೆ ಚರ್ಚೆಯಾಗ್ತಿದೆ. 3 ತಿಂಗಳ ಅಥವಾ 3 ವರ್ಷದ ಮಗುವಿನ ಅಪ್ಪ-ಅಮ್ಮ ಸತ್ತಿದ್ದಾರೆ. ದತ್ತು ತಗೊಳಿ ಅಂತ ನಂಬರ್ ಕೊಡೋದು. ಮಠ-ಮಂದಿರಗಳು ಮಕ್ಕಳನ್ನು ನೋಡಿಕೊಳ್ಳು ಸಿದ್ಧವಿದ್ದೇವೆ ಆಂತ ಹೇಳುವುದು ಸಾಮಾನ್ಯವಾಗಿದೆ. ಇಂಥವರ ಉದ್ದೇಶ ಒಳ್ಳೆಯದೇ ಇರಬಹುದು, ನಾನು ಅವನ್ನು ಅಲ್ಲಗಳೆಯುತ್ತಲೂ ಇಲ್ಲ. ಆದರೆ ಮಕ್ಕಳ ರಕ್ಷಣೆ ಕಾಯ್ದೆ ಅಂತ ಒಂದು ಇದೆ. ಎಲ್ಲವೂ ಮಕ್ಕಳ ಹಿತದೃಷ್ಟಿಯಿಂದ ಆಗಬೇಕು ಅನ್ನೋದು ಕಾಯ್ದೆಯ ಗುರಿ. ಇದರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಿದೆ.

‘ಯಾವುದೇ ಮಗುವನ್ನು ಸರ್ಕಾರ ಅಥವಾ ಜಿಲ್ಲಾಡಳಿತ ಸುಮ್ಮಸುಮ್ಮನೆ ಅನಾಥ ಅಂತ ಘೋಷಿಸಲು ಆಗುವುದಿಲ್ಲ. ಹಾಗೆ ಘೋಷಿಸುವ ಅಧಿಕಾರ ಇರುವುದು ಎಲ್ಲ ಜಿಲ್ಲೆಗಳಲ್ಲಿ ಇರುವ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಮಾತ್ರ. ಪ್ರತಿ ಮಗುವಿನ ಬಗ್ಗೆ ಈ ಸಮಿತಿಯು ಪರಿಶೀಲನೆ ಮಾಡುತ್ತದೆ. ಮಕ್ಕಳನ್ನು ನೋಡಿಕೊಳ್ಳಲು ಯಾರಿದ್ದಾರೆ ಅಂತ ವಿಚಾರಣೆ ನಡೆಸುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಮಗುವೊಂದು ಹಲವು ಸಂಬಂಧಗಳೊಂದಿಗೇ ಹುಟ್ಟುತ್ತದೆ. ಯಾವುದಾದರೂ ಮಗುವಿನ ತಂದೆ-ತಾಯಿ ಇಬ್ಬರೂ ತೀರಿ ಹೋದರೂ ಅದು ಆ ಕಾರಣಕ್ಕೆ ಅನಾಥ ಆಗುವುದಿಲ್ಲ. ಅದರ ಪಾಲನೆಯ ಮೊದಲ ಅವಕಾಶ ಸಿಗುವುದು ಹತ್ತಿರದ ಬಂಧುಗಳಿಗೆ. ಅಂಥವರು ಇಲ್ಲದಿದ್ದರೆ, ಇದ್ದರೂ ಅಂಥವರು ಜವಾಬ್ದಾರಿ ತಗೊಳ್ಳೋಕೆ ಆಗಲ್ಲ ಅಂದ್ರೆ ಮಾತ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆ. ಹತ್ತಿರದ ಬಂಧುಗಳು ಜವಾಬ್ದಾರಿ ಹೊತ್ತುಕೊಳ್ಳುವಂತಿದ್ದರೆ ಅದು ಕುಟುಂಬದ ವ್ಯವಹಾರ ಎನಿಸಿಕೊಳ್ಳುತ್ತೆ. ಒಂದಿಷ್ಟು ಕಾಗದ-ಪತ್ರ ಹಾಗೂ ಸಹಕಾರ ನೀಡುವುದು ಹೊರತುಪಡಿಸಿ ಇಂಥ ಸಂದರ್ಭಗಳಲ್ಲಿ ಸರ್ಕಾರದ ಪಾತ್ರ ಏನೂ ಇರುವುದಿಲ್ಲ.

‘ಚಾಮರಾಜನಗರದಲ್ಲಿ 4 ವರ್ಷದ ಮಗುವನ್ನು ಸಂಬಂಧಿಗಳೇ ಸಾಕುತ್ತಿದ್ದಾರೆ. ಆದರೂ ಇಂಥ ಪ್ರಕರಣಗಳಲ್ಲಿ ದತ್ತು ಪಡೆಯುವ ಪ್ರಶ್ನೆ ಬರುತ್ತೆ. ಮಗುವನ್ನು ಯಾರೇ ಸಾಕಿಕೊಂಡರೂ ಅದು ಒಂದು ಕಾನೂನು ಪ್ರಕ್ರಿಯೆ ಆಗಿರುತ್ತೆ. ಪೋಷಕರ ಆಸ್ತಿಗೆ ಮಗು ವಾರಸುದಾರ ಆಗುತ್ತೆ. ಪೋಷಕರ ವಿಮಾ ಹಣ ಇರಬಹುದು, ಠೇವಣಿ ಇರಬಹುದು ಅಥವಾ ಸ್ಥಿರಾಸ್ತಿ ಇರಬಹುದು ಅವು ಮುಂದಿನ ದಿನಗಳಲ್ಲಿ ವಾರಸುದಾರರಿಗೆ ಸಿಗಬೇಕು. ಮಗುವೊಂದನ್ನು ಸಾಕಿದ ತಕ್ಷಣ ಇವೆಲ್ಲವೂ ಸ್ವಾಭಾವಿಕವಾಗಿ ಬಂದುಬಿಡುತ್ತೆ ಅಂತ ಹೇಳಲು ಆಗುವುದಿಲ್ಲ. ರಕ್ತಸಂಬಧಿಯ ಮಕ್ಕಳೇ ಆಗಿದ್ದರೂ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿಕೊಟ್ಟು ಈ ಬಗ್ಗೆ ದಾಖಲೆ ಮಾಡಿಕೊಳ್ಳಬೇಕು.

‘ಸರ್ಕಾರವು ಇಂಥ ಕ್ರಮಗಳಿಗೆ ತಾಕೀತು ಮಾಡುವುದರ ಹಿಂದೆ ಕೆಲವು ಕಾರಣಗಳಿವೆ. ಮುಂದಿನ ದಿನಗಳಲ್ಲಿ ಮಗುವಿಗೆ ಮಾನಸಿಕ ಹಿಂಸೆ ಆಗಬಹುದು. ಅದನ್ನು ತಡೆಯಲು ಪೋಷಕರಿಗೆ ಬದ್ಧತೆ ಬೇಕು. ಮಗುವೊಂದನ್ನು ಸಾಕುವುದು ಒಂದು ದಿನದ ಭಾವುಕ ನಿರ್ಧಾರವಲ್ಲ. ಅದು ಜೀವನಪೂರ್ತಿ ತೆಗೆದುಕೊಳ್ಳಬೇಕಾದ ಬದ್ಧತೆ. ಹಿಂದೆ ಬೇರೆಬೇರೆ ದುರಂತ, ಅಪಘಾತಗಳು ಆಗಿದ್ದಾಗಲೂ ಯಾರೋ ನಾನು ನೋಡಿಕೊಳ್ತೀನಿ ಅಂತ ಮಕ್ಕಳನ್ನು ಕರೆದುಕೊಂಡು ಹೋದ ಬಗ್ಗೆ ಕೇಳಿದ್ದೇವೆ. ಮಕ್ಕಳು ಬೆಳೀತಾಬೆಳೀತಾ ನಿರ್ಲಕ್ಷ್ಯಕ್ಕೀಡಾಗಬಹುದು. ಹೀಗಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಗುತ್ತೆ. ಸರ್ಕಾರದ ಬಳಿ ಮಕ್ಕಳ ಮಾಹಿತಿ ಇದ್ದರೆ ಹಲವು ಪ್ರಯೋಜನಗಳಿವೆ.

‘ಹಿಂದೆ ತಮಿಳುನಾಡಿನಲ್ಲಿ ಸುನಾಮಿಯಿಂದ ನೂರಾರು ಮಕ್ಕಳು ಅನಾಥರಾದರು. ತಮಿಳುನಾಡಿನಿಂದ ಮಕ್ಕಳು ಬರಬಹುದು, ನಾವು ನೋಡಿಕೊಳ್ಳಲು ವ್ಯವಸ್ಥೆ ಮಾಡಬೇಕು ಅಂತ ಬೆಂಗಳೂರಿನಲ್ಲಿ ಪ್ರಯತ್ನ ಮಾಡಿದ್ದೆವು. ಆದರೆ ಯಾವುದೇ ಮಗು ತಮಿಳುನಾಡು ಬಿಟ್ಟು ಹೋಗಲ್ಲ, ಹೋಗಬಾರದು ಅಂತ ಜಯಲಲಿತಾ ಘೋಷಿಸಿದರು. ಅನಾಥರಾದ ಮಕ್ಕಳ ಬಗ್ಗೆ ಸರಿಯಾದ ವೆರಿಫಿಕೇಶನ್, ಚೈಲ್ಡ್​ ಕೇರ್​ ಪ್ಲಾನ್ ಮಾಡಿ ಪ್ರತಿ ಮಗುವಿನ ಹೆಸರಿನಲ್ಲಿ 5 ಲಕ್ಷ ಠೇವಣಿ ಇಟ್ರು. ಮಕ್ಕಳಿಗೆ 18 ವರ್ಷಗಳಾದಾಗ ಆ ಹಣ ಸಿಗುತ್ತೆ ಅಂತ ಘೋಷಿಸಿದರು. ಅದೇ ಥರ ಈಗ ಕೇರಳ ಮತ್ತು ತೆಲಂಗಾಣ ಸರ್ಕಾರಗಳು ಅನಾಥ ಮಕ್ಕಳಿಗಾಗಿ ಪರಿಹಾರ ಘೋಷಿಸಿವೆ. ಕೇರಳ ಸರ್ಕಾರದವರು ಪ್ರತಿ ತಿಂಗಳು ಹಣ ಕೊಡ್ತೀವಿ ಅಂತ ಹೇಳಿದ್ದಾರೆ. ಮಕ್ಕಳನ್ನು ಯಾರು ನೋಡಿಕೊಳ್ತಾರೆ ಅವರಿಗೆ ಈ ಹಣ ಸಿಗಬೇಕು. ಹೀಗಾಗಿ ನೋಂದಣಿ ಪ್ರಕ್ರಿಯೆ ಬಹಳ ಮುಖ್ಯ. ಪ್ರತಿ ಮಗುವಿನ ಹೆಸರಿನಲ್ಲೂ ಚೈಲ್ಡ್​ ಕೇರ್ ಪ್ಲಾನ್ ಆಗಬೇಕು. ಜಿಲ್ಲಾ ಮಟ್ಟದಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯನ್ನು ಗ್ರಾಮ ಪಂಚಾಯಿತಿ, ನಗರಸಭೆಗಳ ಮಟ್ಟಕ್ಕೂ ತರಬೇಕು.

‘ಇಂಥ ಮಕ್ಕಳ ರಕ್ಷಣೆಗೆ ಕರ್ನಾಟಕ ಸರ್ಕಾರವೂ ಚಿಂತನೆ ಮಾಡಿದೆ. ಮೋಹನ್ ರಾಜ್ ಅವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ನೇತೃತ್ವದಲ್ಲಿ ಹಲವು ಎನ್​ಜಿಒಗಳು, ಇಲಾಖೆಗಳು ಚರ್ಚೆ ಮಾಡ್ತಿವಿ. ಇಲ್ಲಿ ಕೇವಲ ಅನಾಥ ಮಕ್ಕಳ ಬಗ್ಗೆ ಮಾತ್ರವಲ್ಲ. ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಅರೆ ಅನಾಥರಿಗೂ ಸಹಾಯ ಆಗಬೇಕು ಎಂದು ಸರ್ಕಾರ ಯೋಚಿಸುತ್ತಿದೆ. ಮಕ್ಕಳು ತೊಂದರೆಯಲ್ಲಿರುವುದು ಗೊತ್ತಾದಾಗ ಸರ್ಕಾರಕ್ಕೆ ವರದಿ ಮಾಡಬೇಕು. ಸೆಕ್ಷನ್ 33-34ರ ಪ್ರಕಾರ ಹೀಗೆ ಸರ್ಕಾರದ ಗಮನಕ್ಕೆ ತರದೆ ಮಕ್ಕಳನ್ನು ಸಾಕುವುದು ಅಪರಾಧಿಕ ಕೃತ್ಯವಾಗುತ್ತೆ. ಇಂಥ ಸಂದರ್ಭದಲ್ಲಿ ದಂಡ ಹಾಕಬಹುದು. ಮಕ್ಕಳು ಅಂದ್ರೆ ಕಮಾಡಿಟಿ ಅಲ್ಲ. ಅವರು ಈ ದೇಶದ ಪ್ರಜೆಗಳು, ಅವರ ರಕ್ಷಣೆ ಸರ್ಕಾರದ ಜವಾಬ್ದಾರಿ.

‘ಇಂಥ ಮಕ್ಕಳ ಸ್ಥಿತಿಗತಿ ಬಗ್ಗೆ ಗ್ರಾಮ ಪಂಚಾಯಿತಿ, ನಗರಸಭೆ, ಮಹಾನಗರಪಾಲಿಕೆ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ದಾಖಲೆ ಪುಸ್ತಕಗಳನ್ನು ನಿರ್ವಹಿಸಬೇಕು. ಅನಾಥ ಮಕ್ಕಳ ಬಗ್ಗೆ ವರದಿ ಬಂದ ನಂತರ ಜಿಲ್ಲಾ ಮಟ್ಟದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮಗುವಿನ ಸ್ಥಿತಿಗತಿ ಅಧ್ಯಯನ ಮಾಡ್ತಾರೆ (ಸ್ಟೇಟಸ್ ಸ್ಟಡಿ). ಆ ಮಗುವಿಗೆ ಹತ್ತಿರದ ಬಂಧುಗಳಿದ್ದಾರಾ? ಅವರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಹೇಗಿದೆ? ಮಗುವನ್ನು ಸಾಕಲು ಅವರಿಗೆ ಆಸಕ್ತಿಯಿದೆಯೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಬಂಧುಗಳು ಆಸಕ್ತಿ ತೋರಿಸಿದರೆ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಲು ಮಕ್ಕಳ ಸಮಿತಿ ಆದ್ಯತೆ ನೀಡುತ್ತದೆ. ಮಗುವನ್ನು ಸಾಕಲು ಆಸಕ್ತಿ ತೋರಿಸುವ ಬಂಧುಗಳು ಆರ್ಥಿಕವಾಗಿ ಹಿಂದುಳಿದಿದ್ದರೆ ಸಮಿತಿಯ ಮೂಲಕ ರಾಜ್ಯ ಸರ್ಕಾರದ ನೆರವು ಕೇಳಬಹುದು. ಬಂಧುತ್ವದಲ್ಲಿ ಮಗುವನ್ನು ಸಾಕಲು ಮುಂದಾಗುವವರು ಸಹ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸ್ಟೇಟಸ್ ಸ್ಟಡಿಗೆ ಒಳಪಟ್ಟು ‘ಅರ್ಹ ವ್ಯಕ್ತಿ’ (ಫಿಟ್ ಪರ್ಸನ್) ಎನಿಸಿಕೊಳ್ಳುವುದು ಮುಖ್ಯ.

‘ಇದೀಗ ಕೊರೊನಾ ಪಿಡುಗಿನಿಂದ ಅನಾಥವಾಗುವ ಮಗುವಿಗಾಗಿ ಸರ್ಕಾರ ಒಂದು ಇಡಗಂಟು ಇಡಬೇಕು ಎಂದು ನಾವು ಸಲಹೆ ಮಾಡಿದ್ದೇವೆ. ಆ ಮಗುವಿಗೆ 18 ವರ್ಷ ಆಗುವ ಹೊತ್ತಿಗೆ ಮಗುವಿಗೆ ಹಣ ಸಿಗುವಂತೆ ಆಗಬೇಕು. ಮುಂದಿನ ದಿನಗಳಲ್ಲಿ ಇಂತ ಮಕ್ಕಳಿಗೆ ಶಿಕ್ಷಣ ಚಟುವಟಿಕೆಗಳಲ್ಲಿ ಮೀಸಲಾತಿ ಬೇಕು. ಉದ್ಯೋಗದಲ್ಲಿಯೂ ಮೀಸಲಾತಿ ನೀಡುವ ಬಗ್ಗೆ ಯೋಚಿಸಬೇಕು. ಇಂಥ ಮಕ್ಕಳ ಬಗ್ಗೆ ಜಿಲ್ಲಾಡಳಿತ ಹೆಚ್ಚು ಗಮನ ನೀಡಬೇಕು. ಅನೌಪಚಾರಿಕವಾಗಿ ನಿಗಾ ವಹಿಸುವ ವ್ಯವಸ್ಥೆ ಮಾಡಬೇಕು. ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವವರು ಆತುರಪಡಬೇಡಿ. CARA ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಿ. ಚೈಲ್ಡ್​ ವೆಲ್​ಫೇರ್ ಸಂಸ್ಥೆಯ ಮೂಲಕ ಕಾನೂನು ಪ್ರಕಾರವೇ ದತ್ತು ತೆಗೆದುಕೊಳ್ಳಿ. ಕೊರೊನಾ ಪಿಡುಗಿನ ಕಾರಣದಿಂದ ಇಂದು ಭಾರತದಲ್ಲಿ ಸುಮಾರು 600 ಮಕ್ಕಳು ಅನಾಥರಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಸಂಖ್ಯೆಯು ಮುಂದಿನ ದಿನಗಳಲ್ಲಿ ಜಾಸ್ತಿ ಆಗಬಹುದು. ಹಾಗಂತ ಈ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವವರು ಯಾರೂ ಇಲ್ಲ ಎಂದು ಭಾವಿಸಬೇಡಿ’ ಎಂದು ವಾಸುದೇವ ಶರ್ಮಾ ತಮ್ಮ ಮಾತು ಮುಗಿಸಿದರು.

ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಮಾಲತಿ ಮೋಹನ್ ಸಂವಾದದಲ್ಲಿ ಮಾತನಾಡಿದ ಚೈಲ್ಡ್​ಕೇರ್​ ಸಂಸ್ಥೆಯೊಂದರ ಮುಖ್ಯಸ್ಥರಾದ ಮಾಲತಿ ಮೋಹನ್, ‘ನಾನು ದತ್ತುಸಂಸ್ಥೆಯೊಂದರಲ್ಲಿ ವೆಲ್​ಫೇರ್ ಆಫೀಸರ್ ಆಗಿ ಕೆಲಸ ಮಾಡ್ತಿದ್ದೀನಿ. ದತ್ತು ಪಡೆಯಬೇಕೆಂದು ಯಾರೊಬ್ಬರೂ ನಮ್ಮನ್ನು ಈವರೆಗೆ ಸಂಪರ್ಕಿಸಿಲ್ಲ. ಆದರೆ ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಹರಿದುಬರುತ್ತಲೇ ಇದೆ. ಅನಾಥ ಮಗುವಿನ ಬಗ್ಗೆ 1098 ಸಂಖ್ಯೆ ಕರೆ ಮಾಡುವ ಮೂಲಕ ಸಹಾಯವಾಣಿ ಗಮನಕ್ಕೆ ತರಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ತಕ್ಷಣ ಸ್ಥಳೀಯ ಪೊಲೀಸರ, ಅಂಗನವಾಡಿ ಕಾರ್ಯಕರ್ತೆಯ ಗಮನಕ್ಕೆ ತರಬಹುದು’ ಎನ್ನುತ್ತಾರೆ ಅವರು.

ಮಗುವಿನ ಶಿಕ್ಷಣಕ್ಕೆ ನೆರವು ಬೇಕಿದೆ ಚಾಮರಾಜನಗರದಲ್ಲಿ ಈಚೆಗೆ ಕೊರೊನಾ ಸೋಂಕಿಗೆ ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡ ನಾಲ್ಕು ವರ್ಷದ ಮಗುವನ್ನು ಸಾಕುತ್ತಿರುವ ಚಾಮರಾಜನಗರದ ಗುರು ಮಾತನಾಡಿ, ‘ಅಪ್ಪ-ಅಮ್ಮ ತೀರಿಹೋಗಿದ್ದಾರೆ ಅಂತ ಮಗುವಿಗೆ ಗೊತ್ತಾಗಿದೆ. ಮಲಗುವಾಗ ಅಮ್ಮನನ್ನು ನೆನಪಿಸಿಕೊಳ್ಳುತ್ತೆ. ಅವರು ದೇವರ ಹತ್ತಿರಕ್ಕೆ ಹೋಗಿದ್ದಾರೆ ಅಂತ ಹೇಳ್ತೀವಿ, ಸುಮ್ಮನಾಗುತ್ತೆ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾನೇ ಒಪ್ಪಿಕೊಂಡಿದ್ದೇನೆ. ಮಗುವೂ ನನಗೆ, ನನ್ನ ಮನೆಗೆ ಒಗ್ಗಿಕೊಂಡಿದೆ. ಮಗುವನ್ನು ಬೇರೆಯರಿಗೆ ದತ್ತು ನೀಡುವ ಅಥವಾ ಸರ್ಕಾರದ ವಶಕ್ಕೆ ಒಪ್ಪಿಸುವ ಯಾವುದೇ ಆಲೋಚನೆ ನನಗಿಲ್ಲ. ನಾನೊಬ್ಬ ಆಟೊ ಡ್ರೈವರ್​. ನನ್ನ ಹೆಂಡತಿಯೂ ಈಗ ಗರ್ಭಿಣಿ. ಅಣ್ಣನ ಮಗುವಿನ ಶಿಕ್ಷಣಕ್ಕೆ ಸರ್ಕಾರದಿಂದ ಏನಾದರೂ ನೆರವು ಸಿಕ್ಕರೆ ಒಳ್ಳೇದು. ಸರ್ಕಾರ ನಮಗೆ ಸಹಾಯ ಮಾಡಿದರೂ ಸರಿ, ಬಿಟ್ಟರೂ ಸರಿ; ಅಣ್ಣನ ಮಗುವನ್ನು ನಾವೇ ಸಾಕ್ತೀವಿ. ಯಾರಿಗೂ ಕೊಡಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

(Tv9 Digiltal Live Discussion on Responsibility of Karnataka Government and society about Orphan Children in Coronavirus Pandemic Time)

ಇದನ್ನೂ ಓದಿ: ಆಗಸ್ಟ್ 31ರವರೆಗೆ ಕೊವಿಡ್ ಚಿಕಿತ್ಸೆಯ ಉಪಕರಣಗಳ ಮೇಲೆ ಜಿಎಸ್​ಟಿ ವಿನಾಯತಿ

ಇದನ್ನೂ ಓದಿ: ಹಳ್ಳಿಗಳಲ್ಲಿ ಕೊವಿಡ್ ಕಡಿಮೆ ಮಾಡಲು ಹೆಚ್ಚಿನ ಗಮನ ಕೊಡಿ; ಸಿಎಂ ಯಡಿಯೂರಪ್ಪ ಸೂಚನೆ

Published On - 9:43 pm, Fri, 28 May 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್