ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣ; ಇನ್ನೂ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು
ಮೇಟಗಳ್ಳಿಯ ಬಾಬು, ಸರಸ್ವತಿಪುರಂನ ರಮೇಶ್ ಎಂಬುವವರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಈ ಘಟನೆಯಲ್ಲಿ ಒಟ್ಟು 15 ಜನರನ್ನು ಬಂಧಿಸಿದಂತಾಗಿದೆ.
ಮೈಸೂರು: ಕೆಲ ದಿನಗಳ ಹಿಂದಷ್ಟೇ ತಪಾಸಣೆಯಲ್ಲಿ ಅಪಘಾತದಿಂದ ಬೈಕ್ ಸವಾರ ಮೃತಪಟ್ಟ ಘಟನೆಗೆ ಸಂಬಂಧಿಸಿ ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೇಟಗಳ್ಳಿಯ ಬಾಬು, ಸರಸ್ವತಿಪುರಂನ ರಮೇಶ್ ಎಂಬುವವರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಈವರೆಗೆ ಈ ಘಟನೆಯಲ್ಲಿ ಒಟ್ಟು 15 ಜನರನ್ನು ಬಂಧಿಸಿದಂತಾಗಿದೆ.
ಈಗಾಗಲೇ 13 ಜನರನ್ನು ಬಂಧಿಸಿದ್ದರು ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ ದೃಶ್ಯಗಳನ್ನು ಆಧಾರಿಸಿ 15 ಜನರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಅದರಲ್ಲಿ 13 ಜನರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಮುಂದುವರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಪೊಲೀಸ್ ಗರುಡ ವಾಹನವನ್ನು ಜಖಂಗೊಳಿಸಿದ್ರು. ಇನ್ನು ಆ ಗರುಡ ವಾಹನದ ಬಗ್ಗೆಯೂ ಹಲವು ವದಂತಿಗಳು ಹರಿದಾಡುತ್ತಿದ್ದವು. ಪರಿವಾಹನ್ ಆ್ಯಪ್‌ನಲ್ಲೂ ಗೊಂದಲವಿತ್ತು. ಹೀಗಾಗಿ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ಶೂರೆನ್ಸ್ ಇಲ್ಲದ ಗಾಡಿ ಓಡಿಸ್ತೀರಾ ಅಂತಾ ಪ್ರಶ್ನೆ ಮಾಡಿದ್ರು. ಇದೀಗ ಪೊಲೀಸರು ಅದಕ್ಕೂ ಸ್ಪಷ್ಟನೆ ನೀಡಿದ್ದಾರೆ. ಇನ್ಶೂರೆನ್ಸ್ ಪ್ರತಿಯನ್ನ ಬಿಡುಗಡೆಗೊಳಿಸಿರುವ ಪೊಲೀಸರು. 2021ರ ಡಿಸೆಂಬರ್‌ವರೆಗೂ ಇನ್ಶೂರೆನ್ಸ್ ಇದೆ ಅಂತಾ ತಿಳಿಸಿದ್ದಾರೆ.
ಮಾರ್ಚ್ 22ರಂದು ನಗರದಲ್ಲಿ ಸಂಚಾರ ಪೊಲೀಸ್ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿತ್ತು. ಸಂಚಾರ ಪೊಲೀಸರು ಹಿನಕಲ್ ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದರು. ಆ ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಆಯತಪ್ಪಿ ಬಿದ್ದಿದ್ದ. ಕೆಳಬಿದ್ದ ಸವಾರನ ಮೇಲೆ ಹಿಂಬದಿಯಿಂದ ಬಂದ ವ್ಯಾನ್ ಹರಿದಿತ್ತು.
ಈ ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲೇ ಮರಣಿಸಿದ್ದರು. ಮೃತ ದುರ್ದೈವಿ ಎಚ್.ಡಿ.ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ, ಸಿವಿಲ್ ಇಂಜಿನಿಯರ್ ದೇವರಾಜು(46) ಎಂದು ತಿಳಿದುಬಂದಿತ್ತು. ಘಟನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರನ್ನು ಕಂಡು ಗಾಬರಿಯಾಗಿದ್ದ ದೇವರಾಜು, ಪೇದೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಈ ಅಪಘಾತ ಸಂಭವಿಸಿತ್ತು. ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದರು. ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.