ತಪಾಸಣೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವು ಪ್ರಕರಣ; ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅರೆಸ್ಟ್
ಮೈಸೂರಿನಲ್ಲಿ ನಡೆದ ಬೈಕ್ ಸವಾರನ ಸಾವಿನ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದವರು ಅರೆಸ್ಟ್ ಆಗಿದ್ದಾರೆ. ಇನ್ಶೂರೆನ್ಸ್ ವದಂತಿಗೆ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ.
ಮೈಸೂರಿನ ಹಿನಕಲ್ ರಿಂಗ್ ರಸ್ತೆ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಬೈಕ್ ಸವಾರ ದೇವರಾಜ್ ಅನ್ನೋರು ಅಪಘಾತಕ್ಕೆ ಬಲಿಯಾಗ್ತಿದ್ದಂತೆ ಅಲ್ಲಿದ್ದ ವಾಹನ ಸವಾರರು ರೊಚ್ಚಿಗೆದ್ದಿದ್ರು. ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ಮಾಡೋ ವೇಳೆ ತಪ್ಪಿಸಿಕೊಳ್ಳೋ ಭರದಲ್ಲಿ ಬೈಕ್ ಸವಾರ ದೇವರಾಜ್ ಅಪಘಾತಕ್ಕೆ ಬಲಿಯಾಗಿದ್ದಾನೆ ಅಂತಾ ಆರೋಪಿಸಿ ಪೊಲೀಸರ ಮೇಲೆ ಎರಗಿದ್ರು. ಈ ಅಪಘಾತಕ್ಕೆ ಪೊಲೀಸರೇ ಕಾರಣ ಅಂತ ರೊಚ್ಚಿಗೆದ್ದಿದ್ದರು. ಅಲ್ಲಿದ್ದ ಪೊಲೀಸರಿಗೆ ಏನಾಗುತ್ತಿದೆ ಅಂತಾ ಗೊತ್ತಾಗುವಷ್ಟರಲ್ಲಿ ಸಾರ್ವಜನಿಕರೆಲ್ಲ ಸೇರಿ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಮುಗಿಬಿದ್ದಿದ್ದರು. ಅವರು ಹೇಳುವುದನ್ನು ಕೇಳದೆ ಅವರ ಮೇಲೆ ಹಲ್ಲೆ ನಡೆಸಿದ್ದರು.
ಪೊಲೀಸ್ ಪೆಟ್ರೋಲಿಂಗ್ ವಾಹನಕ್ಕೆ ವಿಮೆ ಇದೆ: ಮೈಸೂರು ಪೊಲೀಸರ ಸ್ಪಷ್ಟನೆ ಇನ್ನು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಹಲ್ಲೆ ಮಾಡಿದ ದೃಶ್ಯಗಳನ್ನು ಆಧಾರಿಸಿ 15 ಜನರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲ ಅದರಲ್ಲಿ 13 ಜನರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಮುಂದುವರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ಪೊಲೀಸ್ ಗರುಡ ವಾಹನವನ್ನು ಜಖಂಗೊಳಿಸಿದ್ರು. ಇನ್ನು ಆ ಗರುಡ ವಾಹನದ ಬಗ್ಗೆಯೂ ಹಲವು ವದಂತಿಗಳು ಹರಿದಾಡುತ್ತಿದ್ದವು. ಪರಿವಾಹನ್ ಆ್ಯಪ್‌ನಲ್ಲೂ ಗೊಂದಲವಿತ್ತು. ಹೀಗಾಗಿ ಜನರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ಶೂರೆನ್ಸ್ ಇಲ್ಲದ ಗಾಡಿ ಓಡಿಸ್ತೀರಾ ಅಂತಾ ಪ್ರಶ್ನೆ ಮಾಡಿದ್ರು. ಇದೀಗ ಪೊಲೀಸರು ಅದಕ್ಕೂ ಸ್ಪಷ್ಟನೆ ನೀಡಿದ್ದಾರೆ. ಇನ್ಶೂರೆನ್ಸ್ ಪ್ರತಿಯನ್ನ ಬಿಡುಗಡೆಗೊಳಿಸಿರುವ ಪೊಲೀಸರು. 2021ರ ಡಿಸೆಂಬರ್‌ವರೆಗೂ ಇನ್ಶೂರೆನ್ಸ್ ಇದೆ ಅಂತಾ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿ ಯಾವುದೇ ತಪ್ಪು ಮಾಡಿಲ್ಲ ಅವರ ಕೆಲಸ ಮಾಡಿದ್ದಾರೆ ಅಂತಾನೂ ತಿಳಿಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ತಪಾಸಣೆ ನಿಲ್ಲಿಸುವುದಿಲ್ಲ ಅಂತಲೂ ಹೇಳಿದ್ದಾರೆ. ಹೀಗಾಗಿ ಸದ್ಯ ಪೊಲೀಸರ ವಿರುದ್ಧ ಸಮರ ಸಾರಿರುವ ಜನರು ಯಾವ ರೀತಿ ಇದಕ್ಕೆ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.
Published On - 7:21 am, Wed, 24 March 21