ಉಡುಪಿ: ದುಬೈನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ತನ್ನೂರಿಗೆ ಮರಳಿದ್ದ 35 ವರ್ಷದ ವಿಶಾಲಾ ಗಾಣಿಗ (Vishala Ganiga) ಎಂಬ ಮಹಿಳೆಯನ್ನು ಕಳೆದ ವಾರ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಪಾರ್ಟ್ಮೆಂಟ್ನಲ್ಲಿ ಒಂಟಿಯಾಗಿದ್ದ ವಿಶಾಲಾ ಅವರ ಕತ್ತಿಗೆ ವೈರ್ನಿಂದ ಬಿಗಿದು ಕೊಲೆ ಮಾಡಲಾಗಿದ್ದು, ಮನೆಯಲ್ಲಿದ್ದ ಎಲ್ಲ ಆಭರಣಗಳೂ ನಾಪತ್ತೆಯಾಗಿತ್ತು. ಬ್ರಹ್ಮಾವರದ (Brahmavar) ಕುಮ್ರಗೋಡು ಎಂಬಲ್ಲಿ ಮಧ್ಯಾಹ್ನದ ಹೊತ್ತಿನಲ್ಲೇ ನಡೆದ ಈ ಕೊಲೆಗೆ ಇಡೀ ಕರಾವಳಿಯೇ ಬೆಚ್ಚಿಬಿದ್ದಿತ್ತು. ಈ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ವಿಶಾಲಾ ಗಾಣಿಗ ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿದ್ದುಕೊಂಡೇ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದನು ಎನ್ನಲಾಗಿದೆ.
ಹಂತಕರಿಗೆ ಸುಪಾರಿ ನೀಡಿದ್ದ ರಾಮಕೃಷ್ಣ ದುಬೈನಿಂದ ಬ್ರಹ್ಮಾವರಕ್ಕೆ ಬಂದಿದ್ದ ತನ್ನ ಹೆಂಡತಿಯನ್ನು ಕೊಲೆ ಮಾಡಲು ಸೂಚಿಸಿದ್ದ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದುಬೈನಲ್ಲಿರುವ ರಾಮಕೃಷ್ಣ ಗಾಣಿಗ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ವಿಶಾಲಾ ಗಾಣಿಗ ಇದ್ದ ಫ್ಲಾಟ್ಗೆ ಬಂದಿದ್ದ ಹಂತಕರು ಆಕೆಯನ್ನು ಕೊಲೆ ಮಾಡಿ ಹೋಗಿದ್ದಾರೆ. ವಿಶಾಲಾ ಅವರ ಕೊಲೆಯಾದಾಗ ಅವರ ಮನೆಯ ಟೀಪಾಯಿ ಮೇಲೆ ಎರಡು ಟೀ ಕಪ್ ಇದ್ದುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಯಾರೋ ಪರಿಚಿತರು ಮನೆಗೆ ಬಂದು, ಆಕೆಯೊಂದಿಗೆ ಮಾತುಕತೆ ನಡೆಸಿ, ನಂತರ ಕೊಲೆ ಮಾಡಿರಬಹುದು ಎನ್ನಲಾಗಿತ್ತು. ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಯಾವುದೇ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ, ಆಕೆಯ ಗಂಡನ ಮೇಲೆ ಅನುಮಾನ ಬಂದಿದ್ದರಿಂದ ಪೊಲೀಸರು ಆ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ಮೈಮೇಲೆ ಮತ್ತು ಮನೆಯಲ್ಲಿರುವ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋದರೆ ದರೋಡೆ ಮಾಡಿ ಕೊಲೆ ಮಾಡಿದ್ದಾರೆಂದು ಪೊಲೀಸರು ನಂಬುತ್ತಾರೆಂದು ಈ ರೀತಿ ದಾರಿ ತಪ್ಪಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಗಾಣಿಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೊಬೈಲ್ ಚಾರ್ಜಿಂಗ್ ವೈರ್ ಅನ್ನು ಕುತ್ತಿಗೆಗೆ ಬಿಗಿದು ವಿಶಾಲಾ ಅವರನ್ನು ಕೊಲೆ ಮಾಡಲಾಗಿದೆ. ಈ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಭೇದಿಸಲು 4 ತನಿಖಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ವಿಶಾಲಾ ಗಾಣಿಗ ಅವರಿಗೆ 7 ವರ್ಷದ ಮಗಳಿದ್ದು, ಅವರ ಗಂಡ ರಾಮಕೃಷ್ಣ ಗಾಣಿಗ ದುಬೈನಲ್ಲಿ ಉದ್ಯಮಿಯೊಬ್ಬರ ಆಪ್ತಸಹಾಯಕರಾಗಿದ್ದರು. ಶ್ರೀಮಂತ ಕುಟುಂಬದ ಹಿನ್ನೆಲೆಯ ವಿಶಾಲಾ ಗಾಣಿಗ ಕೂಡ ದುಬೈನಲ್ಲಿ ಗಂಡನ ಜೊತೆ ನೆಲೆಸಿದ್ದರು. ಕುಮ್ರಗೋಡುವಿನಲ್ಲಿ ಅವರದ್ದು ಒಂದು ಫ್ಲಾಟ್ ಕೂಡ ಇತ್ತು. ಅಪ್ಪನ ಮನೆಯ ಆಸ್ತಿ ವಿಚಾರಕ್ಕೆ ಸಂಬಂಧಿಸದಂತೆ ಕೆಲವು ದಾಖಲೆಗಳಿಗೆ ಸಹಿ ಹಾಕಬೇಕಾಗಿದ್ದರಿಂದ ಅವರನ್ನು ದುಬೈನಿಂದ ಕರೆಸಲಾಗಿತ್ತು. ಕೊಲೆಗೂ 10 ದಿನ ಮೊದಲು ದುಬೈನಿಂದ ವಾಪಾಸ್ ಬಂದಿದ್ದ ವಿಶಾಲಾ ಇನ್ನೇನು ಕೆಲವೇ ದಿನಗಳಲ್ಲಿ ದುಬೈಗೆ ವಾಪಾಸ್ ಹೊರಡಬೇಕಾಗಿತ್ತು.
ಕಳೆದ ಸೋಮವಾರ ತಮ್ಮ ಮಗಳನ್ನು ಕುಂದಾಪುರದಲ್ಲಿದ್ದ ಅಜ್ಜ-ಅಜ್ಜಿಯ ಮನೆಗೆ ಕಳುಹಿಸಿದ್ದ ವಿಶಾಲಾ ಮನೆಯಲ್ಲಿ ಒಂಟಿಯಾಗಿದ್ದರು. ಬ್ಯಾಂಕ್ನಲ್ಲಿ ಸ್ವಲ್ಪ ಕೆಲಸ ಇದ್ದುದರಿಂದ ಮಗಳು ವಾಪಾಸ್ ಬರುವುದರೊಳಗೆ ಅದನ್ನು ಮುಗಿಸಿಕೊಳ್ಳಬೇಕೆಂದು ಆಟೋ ಮಾಡಿಸಿಕೊಂಡು ಬ್ಯಾಂಕ್ಗೆ ಹೋಗಿದ್ದರು. ಬ್ಯಾಂಕ್ನ ಲಾಕರ್ನಲ್ಲಿದ್ದ ಚಿನ್ನ, ಹಣವನ್ನು ಡ್ರಾ ಮಾಡಿಕೊಂಡು ಅದೇ ಆಟೋದಲ್ಲಿ ವಾಪಾಸ್ ಫ್ಲಾಟ್ಗೆ ಬಂದಿದ್ದರು. ಆ ವೇಳೆ ತನ್ನ ಮನೆಯವರಿಗೆ ಫೋನ್ ಮಾಡಿದ್ದ ವಿಶಾಲಾ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಬ್ಯಾಂಕ್ ಕೆಲಸ ಮುಗಿದ ನಂತರ ಕುಂದಾಪುರದಲ್ಲಿರುವ ತಂದೆ-ತಾಯಿಯ ಮನೆಗೆ ಬಂದು ಮಗಳನ್ನು ಕರೆದುಕೊಂಡು ಹೋಗುವುದಾಗಿ ವಿಶಾಲಾ ಗಾಣಿಗ ಹೇಳಿದ್ದರು. ಆದರೆ, ರಾತ್ರಿಯಾದರೂ ಮಗಳು ಫೋನ್ ಮಾಡದಿದ್ದಾಗ ಆಕೆಯ ತಂದೆಗೆ ಆತಂಕವಾಗಿತ್ತು. ಅಳಿಯ ರಾಮಕೃಷ್ಣ ಗಾಣಿಗ ಅವರಿಗೆ ಫೋನ್ ಮಾಡಿದ ಅವರು ನಡೆದ ವಿಷಯವನ್ನು ತಿಳಿಸಿದ್ದರು. ಅವರು ತಕ್ಷಣ ಅಪಾರ್ಟ್ಮೆಂಟ್ಗೆ ಹೋಗಿ ನೋಡಿಕೊಂಡು ಬರಲು ಸೂಚಿಸಿದ್ದರು. ಹೀಗಾಗಿ, ವಿಶಾಲಾ ಅವರ ತಂದೆ ತಮ್ಮ ಮಗನೊಂದಿಗೆ ಕುಮ್ರಗೋಡಿನಲ್ಲಿರುವ ಅಪಾರ್ಟ್ಮೆಂಟ್ಗೆ ಬಂದಿದ್ದರು.
ರಾತ್ರಿ ಬಂದು ನೋಡಿದಾಗ ವಿಶಾಲಾ ಅವರ ಫ್ಲಾಟ್ಗೆ ಬೀಗ ಹಾಕಲಾಗಿತ್ತು. ತಮ್ಮ ಬಳಿಯಿದ್ದ ಮತ್ತೊಂದು ಕೀಯಿಂದ ಮನೆ ಬಾಗಿಲು ತೆಗೆದು ನೋಡಿದಾಗ ವಿಶಾಲಾ ಅವರು ಹಾಲ್ನಲ್ಲಿ ಶವವಾಗಿ ಬಿದ್ದಿದ್ದರು. ಬೆಡ್ರೂಂನ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ವಿಶಾಲಾ ಅವರ ಕತ್ತಿನಲ್ಲಿದ್ದ ತಾಳಿ, ಸರಗಳು, ಉಂಗುರ, ಬೀರಿನಲ್ಲಿದ್ದ ಚಿನ್ನಾಭರಣ, ಹಣವೆಲ್ಲ ನಾಪತ್ತೆಯಾಗಿತ್ತು. ಮನೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿವೆ. ಆಟೋದಲ್ಲಿ 2-3 ಬಾರಿ ಓಡಾಡಿದ್ದ ವಿಶಾಲಾ ಆ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಆಸ್ತಿ ವ್ಯವಹಾರ, ಬ್ಯಾಂಕ್ ಕೆಲಸ, ದುಬೈಗೆ ವಾಪಾಸ್ ತೆರಳುವ ಬಗ್ಗೆಯೆಲ್ಲ ಮಾತನಾಡಿದ್ದಾರೆ ಎನ್ನಲಾಗಿತ್ತು. ಅದನ್ನೆಲ್ಲ ಕೇಳಿಸಿಕೊಂಡ ಆಟೋ ಚಾಲಕನ ಕೈವಾಡವೂ ಈ ಕೊಲೆಯ ಹೊಂದಿರಬಹುದು ಎಂದು ಅಂದಾಜಿಸಲಾಗಿತ್ತು. ಈಗಾಗಲೇ ಆ ಆಟೋ ಚಾಲಕನನ್ನು ಕರೆದು ವಿಚಾರಣೆ ನಡೆಸಲಾಗಿತ್ತು. ಆದರೆ, ಆತ ಆಕೆಯನ್ನು ಫ್ಲಾಟ್ಗೆ ಬಿಟ್ಟು ವಾಪಾಸ್ ಹೋದಮೇಲೆ ಏನಾಯಿತೆಂದು ತಿಳಿದಿಲ್ಲ ಎಂದಿದ್ದ. ಇದೀಗ ದಿನದಿಂದ ದಿನಕ್ಕೆ ಈ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಗುತ್ತಿದೆ.
ಇದನ್ನೂ ಓದಿ: Udupi Murder: ಬ್ರಹ್ಮಾವರದ ಅಪಾರ್ಟ್ಮೆಂಟ್ನಲ್ಲಿ ಮಹಿಳೆಯ ಬರ್ಬರ ಹತ್ಯೆ; ಆಟೋದಲ್ಲಿ ಬ್ಯಾಂಕ್ಗೆ ಹೋಗಿದ್ದೇ ತಪ್ಪಾಯ್ತ?
(Brahmavar Vishala Ganiga Murder Case Heading Towards New Twists Police Detained her Husband)