ಉಡುಪಿಯ ಪ್ರತಿಷ್ಠಿತ ವಸತಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ
ಉಡುಪಿಯ ಪ್ರತಿಷ್ಠಿತ ಶಾರದಾ ವಸತಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಶಾಲಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಶ್ವಾನ ದಳ ಹುಡುಕಾಟ ನಡೆಸಿದೆ. ಬೆದರಿಕೆ ಸಂದೇಶದಿಂದಾಗಿ ಪೋಷಕರು ಆತಂಕಗೊಂಡಿದ್ದಾರೆ. ಶಾಲೆಯಲ್ಲಿ ರಾಜ್ಯ ಮತ್ತು ಅಂತರರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಡುಪಿ, ಜನವರಿ 27: ಉಡುಪಿಯ (Udupi) ಪ್ರತಿಷ್ಠಿತ ವಸತಿ ಶಾರದಾ ಶಾಲೆಗೆ (School) ಬಾಂಬ್ ಬೆದರಿಕೆ ಇ-ಮೇಲ್ (Bomb threat E-Mail) ಸಂದೇಶ ಬಂದಿದೆ. ಇದರಿಂದ ಉಡುಪಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮೇಲ್ ಸಂದೇಶ ಕಂಡು ಶಾಲೆಯ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಶ್ವಾನ ದಳ ಶಾಲೆಯ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಇನ್ನು, ಬಾಂಬ್ ಬೆದರಿಕೆ ಸಂದೇಶ ವಿಚಾರ ತಿಳಿದ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗ ಜಮಾಯಿಸಿದ್ದಾರೆ. ಇನ್ನು, ಶಾರದಾ ಶಾಲೆಯಲ್ಲಿ ರಾಜ್ಯದ ನಾನಾ ಭಾಗದ ಹಾಗೂ ಅಂತರರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕಳೆದ ವರ್ಷ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳು ಮತ್ತು ಹೊಟೇಲ್ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಅಲ್ಲದೇ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಮತ್ತು ಕೆಲ ವಿಮಾನಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸಿದ್ದರು.
ಬೆಂಗಳೂರು ಟು ಅಯೋಧ್ಯೆ ವಿಮಾನಕ್ಕೆ ಬಾಂಬ್ ಬೆದರಿಕೆ
2024ರ ಅಕ್ಟೋಬರ್ 27 ರಂದು ಬೆಂಗಳೂರಿನಿಂದ ಅಯೋಧ್ಯೆ ಮಧ್ಯೆ ಸಂಚರಿಸುವ ವಿಮಾನಕ್ಕೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದರು. ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಂತೆ ವಿಮಾನ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಗಿದೆ. ವಿಮಾನದಲ್ಲಿ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಖಾತರಿಯಾಗಿತ್ತು.
ಮುಂಬೈ ಬೆಂಗಳೂರು ವಿಮಾನಕ್ಕೆ ಬಾಂಬ್ ಬೆದರಿಕೆ
2024ರ ಅಕ್ಟೋಬರ್ 22 ರಂದು ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಮುಂಬೈ-ಬೆಂಗಳೂರು ವಿಮಾನ ಸೇರಿದಂತೆ ಇಂಡಿಗೋ, ವಿಸ್ತಾರ ಏರ್ಲೈನ್ಸ್, ಏರ್ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದವು. ಇದರಿಂದ ದೇಶದ ವಿಮಾನ ಪ್ರಯಾಣಿಕರಲ್ಲಿ ಕೆಲ ಕಾಲ ಆತಂಕ ಮೂಡಿತ್ತು.
ರಾಮೇಶ್ವರಂ ಕೆಫೆ ಸ್ಪೋಟ
ಕಳೆದ ವರ್ಷ 2024ರ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ 12:56ಕ್ಕೆ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಮೂವರು ಹೋಟೆಲ್ ಸಿಬ್ಬಂದಿ ಸೇರಿ ಹತ್ತು ಜನರಿಗೆ ಗಾಯವಾಗಿತ್ತು. ಆರಂಭದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ ನಡೆದಿದ್ದು, ಮಾರ್ಚ್ 3ರಂದು ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Mon, 27 January 25