ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋವಿಂದ ಬಾಬು ವಿರುದ್ಧ ಇಡಿಗೆ ಪತ್ರ ಬರೆದ ಚೈತ್ರಾ ಕುಂದಾಪುರ !

ಗೋವಿಂದಬಾಬು 5 ಕೋಟಿ ರೂ. ಹಣದ ಬಗ್ಗೆ ಚೈತ್ರಾ ಕುಂದಾಪುರ ಅವರಿಗೆ ಪ್ರಶ್ನೆ ಮಾಡಿದ ಬಳಿಕ, ಎಚ್ಚೆತ್ತ ಚೈತ್ರಾ ಕುಂದಾಪುರ ಌಂಡ್ ಗ್ಯಾಂಗ್​​ ಗೋವಿಂದ ಬಾಬು ವಿರುದ್ಧ ಖುದ್ದು ಇಡಿಗೆ ದೂರು ನೀಡಿದರು. 5 ಕೋಟಿ ರೂ. ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಇಡಿಗೆ ಪತ್ರ ಬರೆದರು.

ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋವಿಂದ ಬಾಬು ವಿರುದ್ಧ ಇಡಿಗೆ ಪತ್ರ ಬರೆದ ಚೈತ್ರಾ ಕುಂದಾಪುರ !
ಚೈತ್ರಾ ಕುಂದಾಪುರ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ

Updated on:Sep 18, 2023 | 9:56 AM

ಉಡುಪಿ ಸೆ.18: ಬಿಜೆಪಿ (BJP) ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಐದು ಕೋಟಿ ರೂ. ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಟಿಕೆಟ್​ ಆಕಾಂಕ್ಷಿ ಗೋವಿಂದಬಾಬು ಐದು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ (ED) ಪತ್ರ ಬರೆದಿದ್ದಾರೆ. ಗೋವಿಂದಬಾಬು 5 ಕೋಟಿ ರೂ. ಹಣದ ಬಗ್ಗೆ ಚೈತ್ರಾ ಕುಂದಾಪುರ ಅವರಿಗೆ ಪ್ರಶ್ನೆ ಮಾಡಿದ ಬಳಿಕ, ಎಚ್ಚೆತ್ತ ಚೈತ್ರಾ ಕುಂದಾಪುರ  ಮತ್ತು ಗ್ಯಾಂಗ್​​ ಗೋವಿಂದ ಬಾಬು ವಿರುದ್ಧ ಖುದ್ದು ಇಡಿಗೆ ದೂರು ನೀಡಿದ್ದಾರೆ. 5 ಕೋಟಿ ರೂ. ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಇಡಿಗೆ ಆಗ್ರಹಿಸಿದ್ದಾರೆ.

“ಐದು ಕೋಟಿ ರೂ. ಹಣದ ಬಗ್ಗೆ ಗೋವಿಂದಬಾಬು ಆಪ್ತನೇ ನನಗೆ ಮಾಹಿತಿ ನೀಡಿದ್ದಾನೆ. ಹಣ ನೀಡಿದ ಬಗ್ಗೆ ನನ್ನ ಜೊತೆಯೂ ಗೋವಿಂದ ಬಾಬು ಚರ್ಚಿಸಿದ್ದಾರೆ. ಚುನಾವಣಾ ಟಿಕೆಟ್​​​​ಗಾಗಿ ಹಣ ವರ್ಗಾಯಿಸಿದ್ದಾರೆ. ಮಂಜುನಾಥ್​ಗೆ 1 ಕೋಟಿ ರೂ., ಅಭಿಮವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ರೂ. ವಿಶ್ವನಾಥ್ ಜೀಗೆ 3 ಕೋಟಿ ರೂ. ಹಣ ನೀಡಿದ್ದಾಗಿ ಗೋವಿಂದಬಾಬು ನನಗೆ (ಚೈತ್ರಾ ಕುಂದಾಪುರ) ಹೇಳಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿ ಎಂದು ನಾನು, ಗೋವಿಂದಬಾಬುಗೆ ಹೇಳಿದ್ದೆ” ಎಂದು ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.

ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ ಬರೆದ ಪತ್ರದಲ್ಲಿ ಏನಿದೆ?

” ಚೈತ್ರಾ ಎನ್ನುವ ನಾನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು ಗೋವಿಂದ ಬಾಬು ಪೂಜಾರಿ ಎನ್ನುವ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಅಕ್ರಮವಾಗಿ ಹಣದ ವ್ಯವಹಾರ ನಡೆಸಿರುವ ಕುರಿತು ನನಗೆ ಖಚಿತ ಮಾಹಿತಿ ದೊರೆತಿರುತ್ತದೆ. ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿ ಮೂಲತಃ ಬೈಂದೂರಿನವರಾಗಿದ್ದು ಹಲವು ವರ್ಷಗಳ ಕಾಲ ಮುಂಬೈನಲ್ಲಿ ನೆಲೆಸಿ ವ್ಯವಹಾರಗಳನ್ನು ನಡೆಸಿದ್ದು, ಕೆಲವು ವರ್ಷಗಳಿಂದ ಈಚೆಗೆ ಬೆಂಗಳೂರಿನಲ್ಲಿ ಸ್ವಂತ ಕೇಟರಿಂಗ್ ಉದ್ಯಮ ನಡೆಸಿಕೊಂಡು ಬಂದಿರುತ್ತಾರೆ. ಜೊತೆಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಒಂದಷ್ಟು ಸಮಾಜ ಸೇವೆ ನಡೆಸಿಕೊಂಡು ಇಲ್ಲಿನ ಜನರ ನಡುವೆ ಸಮಾಜ ಸೇವಕ ಎಂದು ಗುರುತಿಸಿಕೊಂಡಿರುವುದರಿಂದ ಕಳೆದ ಒಂದು ವರ್ಷದಿಂದ ನನಗೆ ಅವರ ಆಪ್ತ ಸಹಾಯಕ ಪ್ರಸಾದ್ ಪೂಜಾರಿ ಎನ್ನುವ ವ್ಯಕ್ತಿಯ ಮೂಲಕ ಪರಿಚಿತರಾಗಿರುತ್ತಾರೆ”.

ಇದನ್ನೂ ಓದಿ: ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಪೋಲಿಸರ ಬಲೆಗೆ; ಆಕೆ ಓಡಾಡಿದ ಜಾಗವನ್ನ ತೀರ್ಥ ಹಾಕಿ ಶುದ್ಧ ಮಾಡಿದ ಗ್ರಾಮಸ್ಥರು

“ಹೀಗಿರುವಾಗ ಕಳೆದ 2-3 ವರ್ಷಗಳಿಂದ ಈಚೆಗೆ ಇವರು ಬೈಂದೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿಯ ಮೂಲಕ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯ ಆಕಾಂಕ್ಷಿಯಾಗಿರುತ್ತಾರೆ. ಈ ಕುರಿತು ಅವರು ಮಾಧ್ಯಮಗಳಲ್ಲಿ ಮಾತನಾಡಿರುವ ಲಿಂಕ್ ಅನ್ನು ನೀಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಟಿಕೆಟ್ ಪಡೆಯಲು ಪ್ರಯತ್ನ ಪಟ್ಟರೂ ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಯಾವುದೇ ಜವಾಬ್ದಾರಿಯುತ ಹುದೆಯಲ್ಲಿರದೆ ಇದ್ದರೂ ತಾನು ಬಿಜೆಪಿ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಇವರ ಕುರಿತು ನನಗೆ ಸಹಜವಾಗಿಯೇ ಅನುಮಾನ ಮತ್ತು ಕುತೂಹಲ ಹುಟ್ಟಿಕೊಳ್ಳುತ್ತದೆ”.

“ವೃತ್ತಿಯಲ್ಲಿ ಪತ್ರಕರ್ತೆಯಾಗಿರುವ ನನಗೆ ಚುನಾವಣೆ ಸಂದರ್ಭದಲ್ಲಿ ನಡೆಯುವ ಹಣದ ವಹಿವಾಟುಗಳ ಕುರಿತು ರಹಸ್ಯ ವರದಿ ಮಾಡುವ ಆಸಕ್ತಿ ಹಿಂದಿನಿಂದಲೂ ಇತ್ತು. ಹೀಗಾಗಿ ಗೋವಿಂದ ಬಾಬು ಪೂಜಾರಿಯವರು ಟಿಕೆಟ್​ಗಾಗಿ ಹೇಗೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲು ಅವರೊಂದಿಗೆ ಮತ್ತು ಅವರ ಆಪ್ತನಾಗಿದ್ದ ಪ್ರಸಾದ್ ಪೂಜಾರಿಯೊಂದಿಗೆ ಆಗಾಗ ಕರೆ ಮಾಡುತ್ತಾ ಮಾಹಿತಿ ಸಂಗ್ರಹಿಸುತ್ತಿದ್ದೆ.”

“ಒಂದೊಮ್ಮೆ ಗೋವಿಂದ ಪೂಜಾರಿಯವರು ಹಣ ನೀಡಿ ಅಕ್ರಮ ಮಾರ್ಗದಿಂದ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದಲ್ಲಿ ಅದನ್ನು ಕಾನೂನು ಮೂಲಕ ದೂರು ನೀಡಿ ತಡೆಯುವ ಮತ್ತು ಅದರ ಕುರಿತು ವರದಿ ಮಾಡುವ ಉದ್ದೇಶದಿಂದ ನಾನು ಅವರು ಟಿಕೆಟ್​ಗಾಗಿ ಯಾರೊಂದಿಗೆಲ್ಲ ಸಂಪರ್ಕದಲ್ಲಿದ್ದರೆ ಅವರೆಲ್ಲರೊಂದಿಗೂ ಹಾಗೂ ಅವರ ಆಪ್ತ ಬಳಗದ ಬಹುತೇಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದೆ. ಆದರೆ ಇವರು ಹಣ ನೀಡುವ ಅಥವಾ ಹಣದ ಮಾತುಕತೆಯಾಗುವ ಮತ್ತು ಯಾರೊಂದಿಗೆ, ಯಾವಾಗ, ಎಲ್ಲಿ ಹಣದ ವಿನಿಮಯ ನಡೆಯುತ್ತದೆ ಎನ್ನುವ ಯಾವುದೇ ಮಾಹಿತಿ ನನಗೆ ನೀಡದೆ ಇದ್ದ ಕಾರಣ ನನಗೆ ಇವರ ವ್ಯವಹಾರವನ್ನು ಕಾನೂನು ಮೂಲಕ ತಡೆಯಲು ಸಾಧ್ಯವಾಗಿರಲಿಲ್ಲ”.

ಇದನ್ನೂ ಓದಿ: ಚೈತ್ರಾ ಕುಂದಾಪುರ ಕಾರು ಬಾಗಲಕೋಟೆಯಲ್ಲಿ ಪತ್ತೆ, ಯಾರ ಮನೆಯಲ್ಲಿ ಗೊತ್ತಾ? ಇಲ್ಲಿವೆ ಫೋಟೋಸ್

“ಅದೃಷ್ಟವಶಾತ್ ಇವರಿಗೆ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಯಿಂದ ಇವರು ನಿರೀಕ್ಷೆ ಮಾಡಿದಂತೆ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗುವುದಿಲ್ಲ. ಸಾಮಾನ್ಯವಾಗಿ ಚುನಾವಣೆ ಘೋಷಣೆಯಾದ ಬಳಿಕ ಯಾವುದೇ ಪಕ್ಷಗಳು ಯಾರಿಗೂ ಹುದ್ದೆ, ಜವಾಬ್ದಾರಿ ನೀಡುವುದು ಬಹಳ ಕಡಿಮೆ. ಆದರೆ ಆಶ್ಚರ್ಯ ಎನ್ನುವಂತೆ ದಿಢೀರ್ ಆಗಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ಗೋವಿಂದ ಬಾಬು ಪೂಜಾರಿಯವರಿಗೆ ಜವಾಬ್ದಾರಿ ದೊರೆಯುತ್ತದೆ. ಈ ಜವಾಬ್ದಾರಿ ದೊರೆತ ಬಳಿಕ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಸ್ಥಳೀಯ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆಯವರ ಪರವಾಗಿ ಇವರು ಪ್ರಚಾರವನ್ನೂ ನಡೆಸಿರುತ್ತಾರೆ. ಹಾಗೂ ಚುನಾವಣಾ ಪ್ರಚಾರಕ್ಕೆ ಬೈಂದೂರಿಗೆ ಆಗಮಿಸಿದ್ದ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ನಡುವೆ ಇವರು ಗುರುತಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇದನ್ನೆಲ್ಲಾ ಗಮನಿಸಿದಾಗ ಈ ಪ್ರಕರಣದಲ್ಲಿ ಬಹುದೊಡ್ಡ ಪ್ರಭಾವಿಗಳು ಶಾಮೀಲಾಗಿರಬಹುದು ಎನ್ನುವ ಅನುಮಾನ ನನಗೆ ಬಲವಾಗ ತೊಡಗಿತು”.

“ಆದರೆ ಇದನ್ನೆಲ್ಲಾ ಸಾಭೀತು ಮಾಡಲು ನನ್ನ ಬಳಿ ಯಾವುದೇ ಸೂಕ್ತ ದಾಖಲೆಗಳು ಇರಲಿಲ್ಲ. ಚುನಾವಣೆ ಮುಗಿದ ಬಳಿಕ ಗೋವಿಂದ ಬಾಬು ಪೂಜಾರಿಯವರು ತಾನು ಬಿಜೆಪಿ ಟಿಕೆಟ್​ಗಾಗಿ 6 ಕೋಟಿ ರೂಪಾಯಿ ಹಣವನ್ನು ಅನಧಿಕೃತವಾಗಿ ನೀಡಿರುವ ಕುರಿತು ನನ್ನ ಬಳಿ ಹೇಳಿಕ್ಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ದಿನಾಂಕ 11/05/2023 ರಂದು ಅವರ ಅಧಿಕೃತ ಫೋನ್ ಸಂಖ್ಯೆಯಿಂದ ನನಗೆ ಕರೆ ಮಾಡಿ ತಾನು ಮಂಜುನಾಥ್ ಎನ್ನುವವರಿಗೆ 1 ಕೋಟಿ ರೂಪಾಯಿಯನ್ನು, ಅಭಿನವ ಹಾಲಾಶ್ರೀ ಸ್ವಾಮೀಜಿ ಅವರಿಗೆ 1.5 ಕೋಟಿ ರೂಪಾಯಿಯನ್ನು ಹಾಗೂ ವಿಶ್ವನಾಥ್ ಜೀ ಎನ್ನುವವರಿಗೆ 3 ಕೋಟಿ ರೂಪಾಯಿಯನ್ನೂ ನೀಡಿರುವುದಾಗಿ ನನ್ನೊಂದಿಗೆ ಚರ್ಚೆ ನಡೆಸಿರುತ್ತಾರೆ. ಈ ಕುರಿತು ತಾವು ಹಣ ನೀಡಿರುವುದನ್ನು ಸ್ವತಃ ಗೋವಿಂದ ಬಾಬು ಪೂಜಾರಿಯವರೇ ನನ್ನ ಬಳಿ ಹೇಳಿಕೊಂಡು, ಒಪ್ಪಿಕೊಂಡಿರುತ್ತಾರೆ. ಈ ಕುರಿತು ಅವರು ಮಾತನಾಡಿರುವ ಕರೆಯ ರೆಕಾರ್ಡ್ ಗಳನ್ನು ಲಗತ್ತಿಸಿರುತ್ತೇನೆ. ರೆಕಾರ್ಡ್ ನಲ್ಲಿ ಮೂರು ಕೋಟಿ ಮತ್ತು 50 ಲಕ್ಷ ಕೊಟ್ಟಿರುವ ಕುರಿತು ಅವರ ಮಾತುಗಳಲ್ಲೇ ಉಲ್ಲೇಖಿಸಿದ್ದಾರೆ. ಮತ್ತು ಸ್ವಾಮೀಜಿಯವರಿಗೆ ಹಣ ಕೊಟ್ಟಿರುವ ಬಗ್ಗೆಯೂ ಒಪ್ಪಿಕೊಂಡಿದ್ದಾರೆ”.

“ಇನ್ನು ಇವರು ಈ ವಿಷಯದ ಕುರಿತು ಅವರು ನನ್ನ ಬಳಿ ಮಾತನಾಡಿದಾಗ ನಾನು ಅವರಿಗೆ ಪೊಲೀಸ್ ಕೇಸ್ ದಾಖಲಿಸಲು ಸಲಹೆ ನೀಡಿರುತ್ತೇನೆ. ಆದರೆ ಅವರು ಈ ವರೆಗೂ ಪೊಲೀಸ್ ಕೇಸ್ ದಾಖಲಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಇವರ ಈ ನಡೆ ನನಗೆ ಅನುಮಾನಾಸ್ಪದವಾಗಿ ಕಂಡು ಬಂದಿರುತ್ತದೆ. ಇದರೊಂದಿಗೆ ಅವರ ಆಪ್ತ ಸಹಾಯಕ ಪ್ರಸಾದ್ ಪೂಜಾರಿಯವರು ಕೂಡ 2023, ಮೇ 11 ನೇ ತಾರೀಕು ನನಗೆ ಕರೆ ಮಾಡಿ ಗೋವಿಂದ ಬಾಬು ಪೂಜಾರಿಯವರು ಟಿಕೆಟ್ ಗಾಗಿ ಕೋಟಿಗಟ್ಟಲೆ ಹಣ ನೀಡಿ ಕಳೆದುಕೊಂಡಿರುವ ಕುರಿತು ಮಾತನಾಡಿರುತ್ತಾನೆ. ಇದು ನಡೆದು ಸುಮಾರು 2 ತಿಂಗಳ ಬಳಿಕ ನನಗೆ ಕೃಷ್ಣ ಪೂಜಾರಿ ಎಂದು ಪರಿಚಯಿಸಕೊಂಡ ವ್ಯಕ್ತಿಯಿಂದ ಜುಲೈ 21, 2023 ರಂದು ಬೆಳಗ್ಗೆ 10:22 ಕ್ಕೆ ಹಲವರ ಬಳಿ ಚರ್ಚೆ ನಡೆಸಿ, ಬಳಿಕ ನನಗೆ ಕರೆ ಮಾಡಿ ಗೋವಿಂದಬಾಬು ಪೂಜಾರಿ ಅವರು ಚುನಾವಣೆ ಟಿಕೆಟ್​ಗಾಗಿ 5 ಕೋಟಿ ರೂಪಾಯಿ ಕೊಟ್ಟಿರುವ ಕುರಿತು ನನ್ನನ್ನು ಪ್ರಶ್ನಿಸಿರುತ್ತಾರೆ. ಈ ಕುರಿತು ನಾನು ಅವರ ಬಳಿ ನನ್ನ ಅಭಿಪ್ರಾಯವನ್ನು ಹಂಚಿಕೊಂಡು ಪೊಲೀಸ್ ಕೇಸ್ ದಾಖಲಿಸುವಂತೆ ಸಲಹೆ ನೀಡಿರುತ್ತೇನೆ”.

“ತದ ನಂತರ ಪುನಃ ಜುಲೈ 29 ರಂದು ಮಧ್ಯಾಹ್ನ 12:43 ಕ್ಕೆ ನನಗೆ ಪರಿಚಿತರಾಗಿರುವ ರಾಜಶೇಖರಾನಂದ ಸ್ವಾಮೀಜಿಯವರ ಫೋನ್ ನಂಬರ್ ಕರೆ ಬಂದಿದ್ದು, ಅದರಲ್ಲಿ ಅವರು ಗೋವಿಂದ ಬಾಬು ಪೂಜಾರಿಯವರು ಬಿಜೆಪಿ ಟಿಕೆಟ್​ಗಾಗಿ 5 ಕೋಟಿ ರೂಪಾಯಿಯನ್ನು ನೀಡಿರುವ ಕುರಿತು ಅವರ ಆಪ್ತರೊಬ್ಬರು ಅವರಿಗೆ ಮಾಹಿತಿ ನೀಡಿರುವ ಬಗ್ಗೆ ನನ್ನ ಬಳಿ ಚರ್ಚಿಸುತ್ತಾರೆ. ಅದಾದ ಬಳಿಕ ಮತ್ತೆ ಜುಲೈ 30 ರಂದು ನನಗೆ ಪರಿಚಿತರರಾದ ಸಂತೋಷ್ ಕೆಲ್ಲೋಜಿ ಎನ್ನುವವರು ಮಧ್ಯಾಹ್ನ 2:05 ಕ್ಕೆ ಕರೆಯಲ್ಲಿ ನನ್ನೊಂದಿಗೆ ಮಾತನಾಡಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಹಣ ನೀಡಿರುವ ಸುದ್ದಿಯೊಂದು ವಾಟ್ಸಾಪ್​ಗಳಲ್ಲಿ ಶೇರ್ ಆಗಿರುವ ಕುರಿತು ನನ್ನ ಬಳಿ ವಿಚಾರಿಸಿರುತ್ತಾರೆ. ಈ ಎಲ್ಲಾ ಕರೆಗಳಿಗೆ ಸಂಬಂಧಿಸಿದಂತೆ ಕರೆಗಳನ್ನು ನಾನು ರೆಕಾರ್ಡ್ ಮಾಡಿ ಕೊಂಡಿದ್ದು. ಅದನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ”.

“ಈ ಎಲ್ಲಾ ವಿಚಾರಗಳೂ ನಡೆಯುವಾಗಲೇ ವಾಟ್ಸಾಪ್​ನಲ್ಲಿ ಗೋವಿಂದ ಬಾಬು ಪೂಜಾರಿಯವರಿಗೆ ಸಂಬಂಧಿಸಿದಂತೆ ಪತ್ರವೊಂದು ಹರಿದಾಡಲು ಪ್ರಾರಂಭವಾಗಿದ್ದು, ಆ ಪತ್ರದಲ್ಲಿ ಸ್ವತಃ ಗೋವಿಂದ ಬಾಬು ಪೂಜಾರಿಯವರೇ ಹೇಳಿಕೊಂಡಿರುವಂತೆ ಬರೆಯಲಾಗಿದ್ದು ಅವರ ವ್ಯವಹಾರಗಳ ಪರಿಚಯವಿದ್ದು ಸ್ವತಃ ಅವರು ಚುನಾವಣೆ ಟಿಕೆಟ್​ಗಾಗಿ 5 ಕೋಟಿ ರೂಗಳನ್ನು ಕಳೆದುಕೊಂಡಿರುವ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ. ಮೇಲ್ನೋಟಕ್ಕೆ ನೋಡುವಾಗ ಆ ಪತ್ರವನ್ನು ಸ್ವತ: ಗೋವಿಂದ ಬಾಬು ಪೂಜಾರಿಯವರೇ ಅಥವಾ ಅವರ ಅತ್ಯಂತ ಆಪ್ತ ಬಳಗವೇ ಬರೆದಿರುವಂತೆ ಕಂಡು ಬರುತ್ತದೆ. ಕಾರಣ 4 ಪುಟಗಳ ಈ ಪತ್ರದಲ್ಲಿ ಗೋವಿಂದ ಬಾಬು ಪೂಜಾರಿಯವರ ವೈಯಕ್ತಿಕ ಬದುಕು ಮತ್ತು ವ್ಯವಹಾರಗಳ ಬಗ್ಗೆ ನಿಖರವಾಗಿ ಉಲ್ಲೇಖಿಸಲಾಗಿದೆ. ಮತ್ತು ನನಗೆ ಬಂದಿರುವ ಕರೆಗಳ ರೆಕಾರ್ಡ್​ಗಳನ್ನು ಪರಿಶೀಲಿಸಿದರೆ ಅದರಲ್ಲಿ ಮೇಲ್ಕಂಡ ಎಲ್ಲಾ ವ್ಯಕ್ತಿಗಳೂ ಮಾತನಾಡಿರುವ ವಿಷಯ ಮತ್ತು ಈ ಪತ್ರದಲ್ಲಿ ಉಲ್ಲೇಖವಾಗಿರುವ ವಿಷಯಗಳಲ್ಲಿ ಸಾಮ್ಯತೆ ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.”

“ಹೀಗಿರುವಾಗ ಈ ಪತ್ರ ನಿಜವಾಗಿಯೂ ಗೋವಿಂದ ಬಾಬು ಪೂಜಾರಿಯವರಿಂದಲೇ ಬಂದಿರುವುದು ನಿಜವಾಗಿದ್ದಲ್ಲಿ ಅವರೇ ಹೇಳಿಕೊಂಡಿರುವಂತೆ ಅವರಿಗೆ 5 ಕೋಟಿ ರೂ. ವಂಚನೆಯಾಗಿದ್ದಲ್ಲಿ ಇದುವರೆಗೂ ಅವರು ಪೊಲೀಸ್ ಕೇಸು ದಾಖಲಿಸದೆ ಇರಲು ಕಾರಣವೇನು?? ಅವರು ನಡೆಸಿದ್ದೇನೆ ಎಂದು ಹೇಳಿಕೊಂಡಿರುವ ಹಣಕಾಸಿನ ಮೂಲ ಯಾವುದು? ಅವರು ಹಣ ವರ್ಗಾವಣೆ ಮಾಡಿರುವ ಬ್ಯಾಂಕ್ ಖಾತೆಗಳ ವಿವರಗಳ ಕುರಿತು ವಿಚಾರಣೆ ನಡೆಯಬೇಕಿದೆ. Prevention Of Money Laundering Act 2002 ರ ಪ್ರಕಾರ ಇವರು ನಡೆಸಿರುವ ಹಣಕಾಸಿನ ವ್ಯವಹಾರ ಕಾನೂನು ಬದ್ಧವಾಗಿದೆಯೇ? ಮತ್ತು ಈ ವ್ಯವಹಾರದಲ್ಲಿ ತೊಡಗಿಕೊಂಡಿರುವಂತೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿರುವ ಗೋವಿಂದ ಬಾಬು ಪೂಜಾರಿಯವರ ದಾಖಲಿತ ಬ್ಯಾಂಕ್ ವ್ಯವಹಾರಗಳು ಮತ್ತು ಇವರು ಪತ್ರದಲ್ಲಿ ಉಲ್ಲೇಖಿಸಿರುವಂತೆ ಗಗನ್ ಕಡೂರ್ ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹಣ ನೀಡಿರುವುದು ನಿಜವೇ ಆಗಿದ್ದಲ್ಲಿ ಅವರ ದಾಖಲಿತ ಬ್ಯಾಂಕ್ ವ್ಯವಹಾರಗಳು, ಆದಾಯದ ಮೂಲ ಮತ್ತು ಸ್ಥಿರ ಹಾಗೂ ಚರ ಆಸ್ತಿ -ಪಾಸ್ತಿಗಳ ಕುರಿತು ತನಿಖೆ ನಡೆಸಬೇಕು”.

“ಗೋವಿಂದ ಬಾಬು ಪೂಜಾರಿಯವರು ಕಾನೂನು ಬದ್ಧವಾಗಿ ಹಣಕಾಸು ವ್ಯವಹಾರ ನಡೆಸಿದ್ದಲ್ಲಿ 2022-23 ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಗಡುವು ಜುಲೈ 31 ಕ್ಕೆ ಮುಗಿದಿರುವುದರಿಂದ ಇವರು ಹೇಳಿಕೊಂಡಿರುವ 5 ಕೋಟಿ ರೂ. ಸಾಲವನ್ನು ಈ ITR return’s ನಲ್ಲಿ ನಮೂದು ಮಾಡಿದ್ದಾರಾ?? ಒಂದೊಮ್ಮೆ ಇವರು ಕಾನೂನು ಬದ್ಧವಾಗಿ ವ್ಯವಹಾರ ನಡೆಸಿದ್ದು ಈ ವಿಷಯದಲ್ಲಿ ಅವರಿಗೆ ವಂಚನೆ ನಡೆದಿರುವುದು ಸಾಕ್ಷಿ ಸಮೇತ ಸಾಭೀತಾದಲ್ಲಿ ಅವರಿಗೆ ಅವರ ಹಣವನ್ನು ನ್ಯಾಯಬದ್ಧವಾಗಿ ಮರಳಿಸುವಲ್ಲಿ ತಮ್ಮ ಇಲಾಖೆ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವೈಯಕ್ತಿಕವಾಗಿ ಯಾವುದೇ ತೆರನಾದ ತನಿಖೆಗೆ ಸಂಪೂರ್ಣವಾಗಿ ಸಹಕರಿಸಲು ಸಿದ್ಧಳಿದ್ದೇನೆ ಹಾಗೂ ಇದಕ್ಕೆ ನಾನು ನೀಡಿರುವ ಕಾಲ್ ರೆಕಾರ್ಡ್ ದಾಖಲೆಗಳಿಗೆ ಪೂರಕವಾಗಿ ನನ್ನ ಮೊಬೈಲ್ ಸೇರಿದಂತೆ ಯಾವುದೇ ಯಂತ್ರೋಪಕರಣಗಳನ್ನು ಇಲಾಖೆಗೆ ನೀಡಲು ನಾನು ಸದಾ ಸಿದ್ಧಳಾಗಿದ್ದೇನೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ. ಈ ಪ್ರಕರಣ ಕಾನೂನು ಮೂಲಕ ಬಗೆಹರಿದು ಯಾರೇ ಕಾನೂನನ್ನು ಮೀರಿ ವ್ಯವಹಾರ ನಡೆಸಿದ್ದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಕೋರಿಕೊಳ್ಳುತ್ತೇನೆ” ಎಂದು ಚೈತ್ರಾ ಕುಂದಾಪುರ ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Mon, 18 September 23