ಉಡುಪಿ: ಅನ್ಯಮತೀಯ ಯುವಕ-ಯುವತಿ ವಿಡಿಯೋ ವೈರಲ್, 10 ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲು
ಅನ್ಯ ಮತೀಯ ಯುವಕ ಯುವತಿಯನ್ನು ತಡೆದು ವಿಚಾರಣೆ ನಡೆಸಿ ಬಳಿಕ ಇಬ್ಬರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಈ ಬಗ್ಗೆ ವಿಡಿಯೋ ಮಾಡಿದ್ದ ಹತ್ತು ಹಿಂದೂ ಕಾರ್ಯಕರ್ತರ ವಿರುದ್ಧ ಉಡುಪಿಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, (ಸೆಪ್ಟೆಂಬರ್ 22): ಅನ್ಯ ಮತೀಯ ಯುವಕ ಯುವತಿಯನ್ನು ತಡೆದು ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರ(Hindu Activists )ವಿರುದ್ಧ ದೂರು ದಾಖಲಾಗಿದೆ. ಕಳೆದ ತಿಂಗಳು 22 ರಂದು ಆಗುಂಬೆ(Agumbe) ಸಮೀಪದ ಸಿರಿಮನೆ ಫಾಲ್ಸ್ ಗೆ ಹೋಗಿ ವಾಪಸ್ ಬರುವಾಗ ಅನ್ಯಮತೀಯ ಜೋಡಿಯನ್ನು ಹಿಂದೂ ಕಾರ್ಯಕರ್ತರು ತಡೆದು ವಿಚಾರಣೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಹಿಂದೂ ಕಾರ್ಯಕರ್ತರ ವಿರುದ್ಧ ಉಡುಪಿ(Udupi) ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಚಾರಣೆಯ ವೇಳೆ ವಿಡಿಯೋ ಮಾಡದಂತೆ ಯುವತಿ ಮನವಿ ಮಾಡಿದ್ದಳು. ಆದರೂ ಸಹ ಹಿಂದೂ ಕಾರ್ಯಕರ್ತರು ವಿಡಿಯೋ ಮಾಡಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಆಗುಂಬೆ ಪೊಲೀಸರು ಯುವತಿ ಹಾಗೂ ಯುವಕನ ಮನೆಯವರನ್ನು ಠಾಣೆಗೆ ಕರೆಸಿದ್ದರು. ಆದ್ರೆ, ಇಬ್ಬರ ಮನೆಯವರು ಪರಿಚಯಸ್ಥರಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು.
ಆದ್ರೆ, ಘಟನೆಯ ವೇಳೆ ಮಾಡಿದ್ದ ವಿಡಿಯೋವನ್ನು ಕಿಡಿಗೇಡಿಗಳು ತಿಂಗಳ ಬಳಿಕ ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಹಿಂದೂ ಧರ್ಮ 006 ಎನ್ನುವ ಫೇಸ್ ಬುಕ್ ಪೇಜ್ನಿಂದ ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದೀಗ ಇನ್ಸ್ಸ್ಟಾಗ್ರಾಂ, ವಾಟ್ಸಾಪ್ ನಲ್ಲಿ ಯುವಕ, ಯುವತಿಯ ಫೋಟೋ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಯುವತಿಯ ಸಹೋದರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಮಾಡಬೇಡಿ, ನನ್ನ ಜೀವನ ಹಾಳಾಗುತ್ತೆ, ಕಾಲಿಗೆ ಬೀಳುತ್ತೇನೆ ಎಂದು ಯುವತಿ ಪರಿಪರಿಯಾಗಿ ಬೇಡಿಕೊಂಡರೂ ಸಹ ಪುಂಡದ ಗುಂಪು ವಿಡಿಯೋ ಮಾಡಿದೆ.
ಇನ್ನಷ್ಟು ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ