ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಮಾರಾಮಾರಿ: ಆಂಧ್ರದ ಪ್ರವಾಸಿಗರು, ಸ್ಥಳೀಯ ವ್ಯಕ್ತಿ ನಡುವೆ ಗಲಾಟೆ!

ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಹೈದರಾಬಾದ್‌ನ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿ ಸುಪ್ರೀತ್ ನಡುವೆ ತಡರಾತ್ರಿ ಮಾರಾಮಾರಿ ನಡೆದಿದೆ. ಕಾರು ಹಾಯಿಸಲು ಯತ್ನ ಹಾಗೂ ಕಂಬಳದ ಕೋಲಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಇಬ್ಬರ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಮಾರಾಮಾರಿ: ಆಂಧ್ರದ ಪ್ರವಾಸಿಗರು, ಸ್ಥಳೀಯ ವ್ಯಕ್ತಿ ನಡುವೆ ಗಲಾಟೆ!
ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ರಾತ್ರಿ ಮಾರಾಮಾರಿ
Edited By:

Updated on: Jun 10, 2026 | 10:31 AM

ಉಡುಪಿ, ಜೂನ್ 10: ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದ (Udupi Krishna Math) ಪಾರ್ಕಿಂಗ್ ಪ್ರದೇಶದಲ್ಲಿ ತಡರಾತ್ರಿ ಪ್ರವಾಸಿಗರು ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ನಡುವೆ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಭೀಕರ ಮಾರಾಮಾರಿ ನಡೆದಿದೆ. ಆಂಧ್ರಪ್ರದೇಶದ ಹೈದರಾಬಾದ್ ಮೂಲದ ಪ್ರವಾಸಿಗರು ಹಾಗೂ ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಎಂಬುವರ ನಡುವೆ ಈ ಘರ್ಷಣೆ ಸಂಭವಿಸಿದೆ.

ಮುಖ್ಯಾಂಶಗಳು

  • ಉಡುಪಿ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಸೈಡ್ ಕೊಡುವ ವಿಚಾರಕ್ಕೆ ತಡರಾತ್ರಿ ಭೀಕರ ಗಲಾಟೆ.
  • ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿ, ಕಂಬಳದ ಕೋಲಿನಿಂದ ಹಲ್ಲೆ ನಡೆಸಿದ ಸ್ಥಳೀಯ ವ್ಯಕ್ತಿ.
  • ಹೈದರಾಬಾದ್‌ನ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರಿಂದಲೂ ಉಡುಪಿ ನಗರ ಠಾಣೆಯಲ್ಲಿ ದೂರು.

ಕಾರು ಹಾಯಿಸಲು ಯತ್ನ, ಕಂಬಳದ ಕೋಲಿನಿಂದ ಹಲ್ಲೆ!

ಮಹಿಳೆಯರು ಹಾಗೂ ಮಕ್ಕಳೊಂದಿಗೆ ಕೃಷ್ಣ ಮಠದ ದರ್ಶನಕ್ಕೆ ಬಂದಿದ್ದ ಪ್ರವಾಸಿಗರು, ಸುಪ್ರೀತ್‌ಗೆ ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ಕೆರಳಿದ ಸುಪ್ರೀತ್, ನಾನು ಲೋಕಲ್ ವ್ಯಕ್ತಿ, ಕಾರು ಚಲಾಯಿಸುವುದೇ ಹೀಗೆ ಎಂದು ಧಮ್ಕಿ ಹಾಕಿದ್ದಲ್ಲದೆ, ಪ್ರವಾಸಿಗರ ಮೇಲೆ ಕಾರು ಹಾಯಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದೆ, ತನ್ನ ಕಾರಿನಲ್ಲಿದ್ದ ಕಂಬಳದ ಕೋಲನ್ನು ತೆಗೆದು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದಾಗಿ ಆಂಧ್ರದ ಪ್ರವಾಸಿಗರು ಗಾಯಗೊಂಡಿದ್ದಾರೆ.

ಪರಸ್ಪರ ದೂರು ದಾಖಲು

ಸ್ಥಳೀಯ ವ್ಯಕ್ತಿಯ ದರ್ಪದಿಂದ ಆಕ್ರೋಶಗೊಂಡ ಪ್ರವಾಸಿಗರು ಸುಪ್ರೀತ್ ಕಾರಿನ ಗ್ಲಾಸ್ ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಸುಪ್ರೀತ್ ಕೂಡ ಪ್ರತಿದೂರು ನೀಡಿದ್ದು, ತಾವು ಪತ್ನಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಪ್ರವಾಸಿಗರು ಗಲಾಟೆ ಮಾಡಿ, ತಮ್ಮ ಮೇಲೆ ಚೇರ್ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ತೀವ್ರತೆಗೆ ತಮಗೆ ಬಾಯಿಯಿಂದ ರಕ್ತಸ್ರಾವವಾಗಿದೆ ಎಂದು ಸುಪ್ರೀತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ ಗರ್ಭಕೋಶದಿಂದ 8 ಕೆಜಿ ಗಡ್ಡೆ ಹೊರತೆಗೆದ ಸರ್ಕಾರಿ ಆಸ್ಪತ್ರೆ ವೈದ್ಯರು: ಮಹಿಳೆಗೆ ಮರುಜನ್ಮ

ಸ್ಥಳದಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಗಲಾಟೆಯನ್ನು ತಿಳಿಗೊಳಿಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ಪವನ್ ಹಾಗೂ ಸ್ಥಳೀಯ ಸುಪ್ರೀತ್ ಇಬ್ಬರ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಜ್ವಲ್ ಅಮೀನ್​, ಉಡುಪಿ

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us