ಮತ್ಸ್ಯಪ್ರಿಯರಿಗೆ ಸುಗ್ಗಿ; ತಾಜಾ ಮೀನು ತಿನ್ನುವ ಸಂಭ್ರಮಕ್ಕೆ ಮೀನಿನ ದರ ಇಳಿಕೆ ಸಾಥ್

ಹೆಚ್ಚಾಗಿ 550 ರಿಂದ 600 ರೂಪಾಯಿ ಕೆಜಿಗೆ ಮಾರಾಟವಾಗುವ ಮಾಂಜಿ ಮೀನು ಕನಿಷ್ಟ ಅಂದ್ರೆ 350 ರೂಪಾಯಿಗೆ ಕೆಲವೆಡೆ ಮಾರಾಟವಾಗುತ್ತಿದೆ. ಬಹುತೇಖ ಎಲ್ಲಾ ಮೀನಿನ ದರದಲ್ಲಿ ಶೇ.25 ರಷ್ಟು ಇಳಿಕೆಯಾಗಿದೆ ಎಂದು ಮೀನುಗಾರ ಮಹಿಳೆ ರತ್ನ ತಿಳಿಸಿದ್ದಾರೆ.

ಮತ್ಸ್ಯಪ್ರಿಯರಿಗೆ ಸುಗ್ಗಿ; ತಾಜಾ ಮೀನು ತಿನ್ನುವ ಸಂಭ್ರಮಕ್ಕೆ ಮೀನಿನ ದರ ಇಳಿಕೆ ಸಾಥ್
ಮತ್ಸ್ಯಪ್ರಿಯರಿಗೆ ಸುಗ್ಗಿ
Follow us
| Updated By: preethi shettigar

Updated on:Sep 08, 2021 | 9:44 AM

ಉಡುಪಿ: ಮತ್ಸ್ಯಪ್ರಿಯರಿಗೆ ಈಗ ಸುಗ್ಗಿ. ಈಗಷ್ಟೇ ಕಡಲಿನಿಂದ ಬಲೆಹಾಕಿ ಎಳೆದು ತಂದ ತಾಜಾ ತಾಜಾ ಮೀನು ತಿನ್ನಲು ಇದು ಸಕಾಲ. ಒಂದು ಕಡೆ ಜಡಿ ಮಳೆ ಸುರಿಯುತ್ತಿದ್ದರೆ, ಮಸಾಲೆ ಹಚ್ಚಿದ ಮೀನಿನ ಘಮ ಎಲ್ಲಾ ಮನೆಗಳಲ್ಲೂ ಮೂಗಿಗೆ ಹೊಡೆಯುತ್ತಿದೆ. ಹೌದು, ಸದ್ಯ ಪರ್ಸೀನ್ ಬೋಟುಗಳಿಗೆ ಉತ್ತಮ ಸಂಖ್ಯೆಯ ಮೀನುಗಳು ಲಭ್ಯವಾಗುತ್ತಿದ್ದು, ಮೀನಿನ ದರವೂ ಇಳಿಕೆಯಾಗಿದೆ.

ಕಡಲ ಬದಿಯಲ್ಲಿದ್ದರೂ ಉಡುಪಿ ಜಿಲ್ಲೆಯ ಜನರು ಐಸ್​ನಲ್ಲಿ ಹಾಕಿಟ್ಟ ಮೀನು ತಿಂದು ರೋಸಿ ಹೋಗಿದ್ದರು. ಕೊರೊನಾ ಕಾರಣಕ್ಕೆ ಒಂದಿಷ್ಟು ಸಮಯ ಮೀನುಗಾರಿಕೆ ನಡೆಯಲಿಲ್ಲ. ನಂತರ ಪ್ರಕೃತಿ ವಿಕೋಪದಿಂದ ಸಾಕಷ್ಟು ಸಮಯ ಬೋಟುಗಳು ಕಡಲಿಗೆ ಇಳಿಯಲಿಲ್ಲ. ಹಾಗಾಗಿ ಮಂಜುಗೆಡ್ಡೆಯೊಳಗೆ ಹುದುಗಿಸಿಟ್ಟ ಚಪ್ಪೆ ಮೀನು ತಿಂದು ಬೇಜಾರಾಗಿದ್ದ ಜನರಿಗೆ ಈಗ ತಾಜಾ ಮೀನು ತಿನ್ನುವ ಸಂಭ್ರಮ.

ಉತ್ತಮ ಮಳೆಯಾದ ನಂತರ ಕಡಲು ಅಡಿಮೇಲಾಗಿದೆ. ಹಾಗಾಗಿ ರುಚಿಕರ ತಳಿಯ ಮೀನುಗಳು ಹೇರಳವಾಗಿ ಸಿಗುತ್ತಿದೆ. ಅದರಲ್ಲೂ ಬಂಗುಡೆ, ಬೊಂಡಾಸ್, ಪಾಂಪ್ಲೆಟ್ ಅಂದರೆ ಮಾಂಜಿ ಮೀನು ಮಾರುಕಟ್ಟೆಗೆ ಹೇರಳವಾಗಿ ಸರಭರಾಜಾಗುತ್ತಿದೆ. ಕಿಸೆ ಖಾಲಿ ಮಾಡಿಕೊಳ್ಳದೆ, ಚೀಲ ತುಂಬಾ ಮೀನು ಖರೀದಿಸಿ ಮಸಾಲೆ ಅರೆಯಲು ಕರಾವಳಿ ಮಂದಿ ಮಾರುಕಟ್ಟೆಗೆ ಮುಗಿಬೀಳುತ್ತಿದ್ದಾರೆ.

ಮೀನಿನ ದರದಲ್ಲೂ ಸಾಕಷ್ಟು ಇಳಿಕೆಯಾಗಿದೆ. ಕೆಜಿಗೆ 180 ರೂಪಾಯಿಗಳಷ್ಟಿದ್ದ ಬಂಗುಡೆಯ ದರ 120 ಕ್ಕಿಳಿದಿದೆ. ಇನ್ನು ಸಣ್ಣ ಬಂಗುಡೆ 20 ರೂಪಾಯಿಗೆ ಸಿಗುತ್ತದೆ. ಬಹುತೇಖ ಕಳೆದ ಭಾನುವಾರವಂತೂ ಮಂಗಳೂರು ಮಾರುಕಟ್ಟೆಯಲ್ಲಿ 350 ರೂಪಾಯಿಯ ಬಂಗುಡೆ ಕೇವಲ 55 ರೂಪಾಯಿಗೆ ಸಿಕ್ಕಿತ್ತು.

ಹೆಚ್ಚಾಗಿ 550 ರಿಂದ 600 ರೂಪಾಯಿ ಕೆಜಿಗೆ ಮಾರಾಟವಾಗುವ ಮಾಂಜಿ ಮೀನು ಕನಿಷ್ಟ ಅಂದ್ರೆ 350 ರೂಪಾಯಿಗೆ ಕೆಲವೆಡೆ ಮಾರಾಟವಾಗುತ್ತಿದೆ. ಬಹುತೇಖ ಎಲ್ಲಾ ಮೀನಿನ ದರದಲ್ಲಿ ಶೇ.25 ರಷ್ಟು ಇಳಿಕೆಯಾಗಿದೆ ಎಂದು ಮೀನುಗಾರ ಮಹಿಳೆ ರತ್ನ ತಿಳಿಸಿದ್ದಾರೆ.

ದರ ಕುಸಿತಕ್ಕೆ ಹಲವು ಕಾರಣಗಳು ಸದ್ಯ ಉತ್ತಮ ಮೀನುಗಾರಿಕೆ ಆಗುತ್ತಿರುವುದು ಒಂದು ಕಾರಣವಾದರೆ, ಕೇರಳದಲ್ಲಿ ನಮ್ಮ ಕರಾವಳಿಯ ಮೀನು ಖರೀದಿ ನಿಂತಿದೆ. ಅಲ್ಲಿನ ಜನರು ಸೆಪ್ಟೆಂಬರ್ 17 ರವೆರಗೂ ವೃತಾಚರಣೆ ಮಾಡುವುದರಿಂದ ಮೀನು ಸೇವನೆ ಮಾಡಲ್ಲ. ಇದರಿಂದ ನಮ್ಮ ಮೀನಿನ ಆಮದು ನಿಂತಿದೆ. ಜೊತೆಗೆ ಕೇರಳ, ಆಂಧ್ರ ಪ್ರದೇಶಗಳಲ್ಲೂ ಹೇರಳವಾಗಿ ಬಂಗುಡೆ ಮೀನು ಲಭ್ಯವಾಗುತ್ತಿದೆ. ಈ ನಡುವೆ ಆಸೆಗೆ ಬಿದ್ದ ಕೆಲ ಮೀನುಗಾರರು ದುಬಾರಿ ಮೀನುಗಳನ್ನು ಸಣ್ಣದಿರುವಾಗಲೇ ಬಾಚಿ ತಂದು ಲಾಸ್ ಮಾಡಿಕೊಳ್ಳುತ್ತಿದ್ದಾರೆ.

ಮತ್ತೆ ಮಳೆ ಆರಂಭವಾಗಿದೆ, ಆರಂಜ್, ಎಲ್ಲೋ ಅಲರ್ಟ್ ಗಳು ಘೋಷಣೆಯಾಗುತ್ತಿದೆ. ಸಾಕಷ್ಟು ಬೋಟುಗಳು ಇನ್ನೂ ಕಡಲಿಗಿಳಿದಿಲ್ಲ, ಪ್ರಕೃತಿಯ ಅಸಹಕಾರ ಎದುರಾದರೆ ಮತ್ತೆ ಬೋಟುಗಳು ದಡ ಸೇರುತ್ತದೆ, ಮೀನಿನ ದರ ಹೆಚ್ಚಾಗುತ್ತದೆ. ಈಗ ತಾಜಾ ಮೀನು ತಿನ್ನುವ ಅವಕಾಶ ಸಿಕ್ಕಿದೆ. ಹೀಗಾಗಿ ತಾಜಾ ಮೀನು ತಿಂದು ಸಂಭ್ರಮಿಸುವುದು ಉತ್ತಮ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ: ಮೀನುಗಾರರಿಗೆ ಇನ್ಮುಂದೆ ಸಮುದ್ರದಲ್ಲೇ ಸಿಗಲಿದೆ ಸಿಹಿ ನೀರು; ಆಸ್ಟ್ರೇಲಿಯಾದ ತಂತ್ರಜ್ಞಾನ ಭಾರತದಲ್ಲಿ ಮೊದಲ ಬಾರಿಗೆ ಬಳಕೆ

ಅದೃಷ್ಟ ಅಂದ್ರೆ ಇದಪ್ಪಾ! ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಧೀಶನಾದ ಮಹಾರಾಷ್ಟ್ರದ ಮೀನುಗಾರ

Published On - 9:41 am, Wed, 8 September 21