ಉಡುಪಿ, ಮಾ.31: ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಮಕ್ಕಳ ವಿರುದ್ಧ ತೊಡೆತಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಸ್ ಈಶ್ವರಪ್ಪ (KS Eshwarappa) ಅವರು ಇಂದು ಉಡುಪಿ (Udupi) ಜಿಲ್ಲೆಯ ಬೈಂದೂರಿನ ಉಪ್ಪಂದದಲ್ಲಿ ಸಮಾವೇಶ ನಡೆಸಿದರು. ಕಾರ್ಯಕರ್ತರಿಗಾಗಿ ಬಿರಿಯಾನಿ ಕೂಡ ಸಿದ್ಧಪಡಿಸಲಾಗುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಫ್ಲೈಯಿಂಗ್ ಸ್ಕ್ವಾಡ್ (Flying Squad) ಸಮಾವೇಶದ ಮೇಲೆ ದಾಳಿ ನಡೆಸಿ ಬಿರಿಯಾನಿ ಹಂಚದಂತೆ ಎಚ್ಚರಿಕೆ ನೀಡಿದೆ.
ಈಶ್ವರಪ್ಪ ಸಮಾವೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕರ್ತರಿಗೆ ಮಧ್ಯಾಹ್ನದ ಊಟಕ್ಕೆಂದು ಬಿರಿಯಾನಿ ಕೂಡ ಸಿದ್ಧಪಡಿಸಲಾಗಿತ್ತು. ಆದರೆ, ಸಮಾವೇಶ ನಡೆಯುತ್ತಿದ್ದ ಸಭಾಂಗಣಕ್ಕೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿದ್ದು, ಬಿರಿಯಾನಿ ಸಪ್ಲೈ ಮಾಡಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ತಯಾರಿಸುತ್ತಿದ್ದ ಬಿರಿಯಾನಿ ಅಲ್ಲೇ ಬಾಕಿಯಾಗಿದ್ದು, ಬಿರಿಯಾನಿಗಾಗಿ ಕಾದು ಸುಸ್ತಾದ ಕಾರ್ಯಕರ್ತರು, ಬಿರಿಯಾನಿ ತಿನ್ನದೇ ವಾಪಸಾದರು.
ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ರೀತಿಯಲ್ಲಿ ರಾಜ್ಯದಲ್ಲೂ ಕುಟುಂಬ ರಾಜಕಾರಣ ಇದೆ. ಬಿಜೆಪಿ 28 ಸ್ಥಾನ ಗೆಲ್ಲುವುದು ಮುಖ್ಯ ಅಲ್ಲ, ವಿಜಯೇಂದ್ರ ಮುಖ್ಯಮಂತ್ರಿ ಆಗುವುದು ಯಡಿಯೂರಪ್ಪನಿಗೆ ಮುಖ್ಯವಾಗಿದೆ. ಆದರೆ, ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿ ರಾಘವೇಂದ್ರ ಸೋಲುತ್ತಾನೆ, ವಿಜಯೇಂದ್ರ ರಾಜೀನಾಮೆ ಕೊಡುತ್ತಾನೆ. ರಾಜ್ಯದಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದರು.
ಇದನ್ನೂ ಓದಿ: ಬಂಡಾಯ ಸ್ಪರ್ಧೆಗೆ ಪ್ರಧಾನಿ ಮೋದಿ, ಅಮಿತ್ ಶಾ ಕಾರಣವೇ? ಈಶ್ವರಪ್ಪ ಸ್ಫೋಟಕ ಹೇಳಿಕೆ
ಚುನಾವಣೆಗೆ ಮುನ್ನ ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಗೆದ್ದು ಬಂದು ಎಲ್ಲಾ ಕೆಲಸವನ್ನು ಮಾಡುತ್ತೇನೆ. ಶಿವಮೊಗ್ಗದಲ್ಲೂ ಬೈಂದೂರಲ್ಲಿ ಯಾರು ಲೀಡ್ ನೋಡೋಣ. ನಾಮಪತ್ರ ಸಲ್ಲಿಕೆ ದಿನ ಯಡಿಯೂರಪ್ಪ ರಾಘವೇಂದ್ರನಿಗೆ ನಡುಕ ಆಗಬೇಕು. ರಾಷ್ಟ್ರಭಕ್ತ ಬಳಗ ನಾಮಪತ್ರ ದಿನ ಶಿವಮೊಗ್ಗದಲ್ಲಿ ಜಾತ್ರೆ ಮಾಡುತ್ತದೆ ಎಂದರು.
ಕಾಂಗ್ರೆಸ್ ಜೊತೆ ಬಿಜೆಪಿ ಕೈಜೋಡಿಸಿದ್ದು, ಒಪ್ಪಂದ ಮಾಡಿದ್ದು ದುರ್ದೈವ ಎಂದು ಆಕ್ರೋಶ ಹೊರಹಾಕಿದ ಈಶ್ವರಪ್ಪ, ಈ ಬಾರಿಯ ಶಿವಮೊಗ್ಗದ ಲೋಕಸಭೆ ಚುನಾವಣೆ ದುಡ್ಡು ಮತ್ತು ಹಿಂದುತ್ವದ ಕಾರ್ಯಕರ್ತರ ನಡುವಿನ ಚುನಾವಣೆಯಾಗಿದೆ. ಗೀತಾ ಶಿವರಾಜ್ ಕುಮಾರ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಸಿದ್ದಾರೆ. ಯಡಿಯೂರಪ್ಪನ ದುಡ್ಡು, ಜಾತಿ ಮೀರಿ ಲೋಕಸಭೆಗೆ ಹೋಗುತ್ತೇನೆ ಎಂದರು.
ಹಿಂದುತ್ವ ನಾಯಕರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಈಶ್ವರಪ್ಪ, ಹಿಂದೂ, ರಾಮ ಮಂದಿರ, ಗೋವು ಬಗ್ಗೆ ಮಾತಾಡುವವರು ಪಕ್ಷದಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಸಿ.ಟಿ ರವಿಯನ್ನು ರಾಜೀನಾಮೆ ಕೊಡಿಸಿದರು. ಪಕ್ಷ ಸಂಘಟನೆ ಬಗ್ಗೆ ಇಡೀ ದೇಶ ಸುತ್ತಿಸಿದರೂ ಅವರಿಗೆ ಎಂಪಿ ಟಿಕೆಟ್ ಕೊಡಲಿಲ್ಲ. ನಮ್ಮ ಹಿಂದೂ ಕಾರ್ಯಕರ್ತರು ಕೂಲಿಯಾಳುಗಳಲ್ಲ. ಹಿಂದುತ್ವ ಬಗ್ಗೆ ಮಾತಾಡುವವರನ್ನು ಪಕ್ಷದಲ್ಲಿ ಪಕ್ಕಕ್ಕಿಡುತ್ತಿದ್ದಾರೆ. ಸದಾನಂದ ಗೌಡ, ಯತ್ನಾಳ್, ಪ್ರತಾಪ್ ಸಿಂಹನಿಗೆ ಮೋಸವಾಗುತ್ತಿದೆ ಎಂದರು.
ಕೆಜೆಪಿ ಕಟ್ಟಿದ ಯಡಿಯೂರಪ್ಪಗೆ ಸಿಕ್ಕಿದ್ದು 6 ಸೀಟು ಮಾತ್ರ. ಶಿಕಾರಿಪುರದಲ್ಲಿ ಬಿಜೆಪಿ ಅಂತರ 60 ಸಾವಿರದಿಂದ 10 ಸಾವಿರಕ್ಕೆ ಇಳಿದಿದೆ. ಈಶ್ವರಪ್ಪ ಯಾವತ್ತಿದ್ದರೂ ಬಿಜೆಪಿಯೇ, ಮತ್ತೆ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಎಂಪಿಯಾಗಿ ಗೆದ್ದು ಮೋದಿಯನ್ನು ಪ್ರಧಾನಿ ಮಾಡಲು ಕೈ ಎತ್ತುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ