ಬಂಡಾಯ ಸ್ಪರ್ಧೆಗೆ ಪ್ರಧಾನಿ ಮೋದಿ, ಅಮಿತ್ ಶಾ ಕಾರಣವೇ? ಈಶ್ವರಪ್ಪ ಸ್ಫೋಟಕ ಹೇಳಿಕೆ
ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಾವು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾಗೂ ಇಷ್ಟ ಇರಬಹುದು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈಶ್ವರಪ್ಪ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ, ಮಾರ್ಚ್ 30: ‘ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಂಡಾಯ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಇಷ್ಟ ಇರಬಹುದು’ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarapp) ಶನಿವಾರ ಹೇಳಿದ್ದಾರೆ. ನಾನು ಸ್ಪರ್ಧೆ ಮಾಡುತ್ತಿರುವುದು ಅವರಿಗೂ ಇಷ್ಟ ಇರಬಹುದು. ಇಲ್ಲವೆಂದಾದರೆ ನನ್ನನ್ನು ಯಾಕೆ ಪಕ್ಷದಿಂದ ಈವರೆಗೆ ತೆಗೆದು ಹಾಕಿಲ್ಲ? ಗೊತ್ತಿಲ್ಲ, ‘ಮೋದಿ, ಅಮಿತ್ ಶಾ ಹೇಳಿದರೆ ಈಶ್ವರಪ್ಪ ಹಿಂದೆ ಸರಿಯಬಹುದು’ ಎಂದು ಅವರು (ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಉದ್ದೇಶಿಸಿ) ಹೇಳುತ್ತಿದ್ದಾರೆ. ಅಮಿತ್ ಶಾ ಇನ್ನು ದೂರವಾಣಿ ಕರೆ ಮಾಡುವುದಿಲ್ಲ. ಅಪ್ಪ ಮಕ್ಕಳ ಕೈಯಿಂದ ಪಕ್ಷ ಬಿಡಿಸುವ ಉದ್ದೇಶ ಅವರದ್ದಿರಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ.
ಇದರಿಂದಾಗಿ ಇದೀಗ ಈಶ್ವರಪ್ಪರನ್ನು ವರಿಷ್ಠರೇ ಚುನಾವಣೆಗೆ ನಿಲ್ಲಿಸಿದರೇ ಎಂಬ ಅನುಮಾನ ಮೂಡಿದೆ.
‘ನನ್ನ ಸ್ಪರ್ಧೆ ಮೋದಿ, ಅಮಿತ್ ಶಾ ಅವರಿಗೂ ಒಪ್ಪಿಗೆ ಇರಬಹುದು. ಯಾಕೆಂದರೆ, ಅಪ್ಪ ಮಕ್ಕಳ ಕೈಯಿಂದ ಪಕ್ಷ ಬಿಡಿಸಬೇಕು ಎಂಬ ಉದ್ದೇಶ ಅವರದ್ದು ಇರಬಹುದು. ಮೋದಿ, ಅಮಿತ್ ಶಾ ಅವರೇ ಈಶ್ವರಪ್ಪ ಅವರನ್ನು ನಿಲ್ಲಿಸಿರಬಹುದು ಎಂಬ ಅಭಿಪ್ರಾಯ ಜನರದ್ದಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
‘ಯಾವ ಮುಖ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ?’
ಯಡಿಯೂರಪ್ಪ ಅವರು ಅಷ್ಟು ಮೋಸ ಮಾಡಿದ್ದಾರೆ. ಯಾವ ಮುಖ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ? ಯಾವ ಯಾವ ಪಕ್ಷಕ್ಕೆ ಹೋಗಿ ಬಂದವರು ಅವರು. ಅಧಿಕಾರಕ್ಕಾಗಿ ಕೆಜೆಪಿ ಕಟ್ಟಿದರು. ನಾನು ಅವರ ಬಳಿ ಕೆಜೆಪಿ ಬೇಡ ಅಂದಿದ್ದೆ. ನಾನೇ ಮತ್ತೆ ವಾಪಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆ ತಂದೆ. ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಅಂದರೂ ಅವರಿಗೆ ಟಿಕೇಟ್ ಕೊಡಿಸಿದರು ಎಂದು ವಾಗ್ದಾಳಿ ನಡೆಸಿದರು.
ಶಿಕಾರಿಪುರದಲ್ಲಿ ದುಡ್ಡು ಸುರಿದಿದ್ದರು: ಈಶ್ವರಪ್ಪ
ನನ್ನನ್ನು ಪಕ್ಷದಿಂದ ತೆಗೆದರೆ ಮತ್ತೆ ನಾನು ಬಿಜೆಪಿಗೆ ಹೋಗುವವನೇ. ಶಿಕಾರಿಪುರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭ ದುಡ್ಡು ಸುರಿದಷ್ಟು ದುಡ್ಡನ್ನು ಎಲ್ಲಿಯೂ ಸುರಿದಿಲ್ಲ. ಅಷ್ಟೊಂದು ಹಣವನ್ನು ಶಿಕಾರಿಪುರ ಕ್ಷೇತ್ರದಲ್ಲಿ ಸುರಿದರು. ಅಷ್ಟೊಂದು ಹಣ ಸುರಿದರೂ ಕೇವಲ 11 ಸಾವಿರ ಮತಗಳ ಅಂತರದಿಂದ ವಿಜಯೇಂದ್ರ ಗೆದ್ದಿದ್ದು. ಈ ಬಾರಿಯೂ ಅತಿ ಹೆಚ್ಚು ಹಣ ಸುರಿಯುವ ನಿರೀಕ್ಷೆ ಇದೆ ಎಂದು ಈಶ್ವರಪ್ಪ ಕಿಡಿಕಾರಿದರು.
ಈ ಚುನಾವಣೆ ಧರ್ಮ ಅಧರ್ಮದ ನಡುವಿನ ಚುನಾವಣೆ. ಈ ಬಾರಿ ಕಾರ್ಯಕರ್ತರು ಅಧರ್ಮ ಸೋಲಿಸಿ, ಧರ್ಮಕ್ಕೆ ಜಯ ಕೊಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಿಂತ ನಾನು ಮುಂದೆ ಇದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಅಖಿಲೇಶ್ ಯಾದವ್ ಕರೆ ಮಾಡಿದ್ದು ನಿಜ: ಈಶ್ವರಪ್ಪ
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ದೂರವಾಣಿ ಕರೆ ಮಾಡಿದ್ದರು. ಆದರೆ ನಾನು ಸ್ವೀಕರಿಸಲಿಲ್ಲ. ‘ಕಾಲ್ ಮೀ ಅರ್ಜೆಂಟ್’ ಅಂತಾ ಮೆಸೇಜ್ ಮಾಡಿದ್ದರು. ನಾನು ಪ್ರತಿಕ್ರಿಯೆ ಕೊಡಲಿಲ್ಲ. ಬಹುಶಃ ಅವರ ಪಕ್ಷದಿಂದ ಟಿಕೆಟ್ಗಾಗಿ ಕರೆ ಮಾಡಿರಬಹುದು. ನಾನು ಹಿಂದುತ್ವ ನನ್ನ ತಾಯಿ ಅಂದುಕೊಂಡಿರುವವನು. ಹಿಂದುತ್ವಕ್ಕೆ ಮೋಸ ಮಾಡಲ್ಲ ಎಂದು ಈಶ್ವರಪ್ಪ ಹೇಳಿದರು. ಟಿಕೆಟ್ ಕೊಡಲು ಅಖಿಲೇಶ್ ಯಾದವ್ ಪೋನ್ ಮಾಡಿದರೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಮತ್ತೆ ಏನು ಹೆಣ್ಣು ಕೊಟ್ಟು ಮದುವೆ ಮಾಡಲು ಮಾಡಿದರಾ ಎಂದು ನಗಾಡಿದರು.
ಇದನ್ನೂ ಓದಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ
ದೇವೇಗೌಡರು ಕರೆ ಮಾಡಿಲ್ಲ. ನಾನು ಕುಮಾರಸ್ವಾಮಿ ಅವರಿಗೆ ಮೊದಲಿನಿಂದ ಹೇಳ್ತಿದ್ದೆ. ನಿಮ್ಮ ಪಕ್ಷ ನಮ್ಮ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಜೆಡಿಎಸ್ ಮತವನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ ಅಂದಿದ್ದೆ. ಅದಕ್ಕೆ ದೆಹಲಿಗೆ ಹೋದಾಗ ಕುಮಾರಸ್ವಾಮಿ ಪೋನ್ ಮಾಡಿದ್ದರು. ನೀವು ಹೇಳಿದಾಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡುತ್ತಿದ್ದೇನೆ ಎಂದು ಪೋನ್ ಮಾಡಿದ್ದರು ಎಂದು ಈಶ್ವರಪ್ಪ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ