ಯಕ್ಷಗಾನ ಕಲಿಕೆಗೆ ಹೊರ ರಾಜ್ಯದಿಂದ ಆಗಮಿಸಿದ ತಾರಾ ಬಳಗ; ಕರಾವಳಿ ಕಲೆಗೆ ಮನಸೋತ ಹಿಂದಿ ಕಿರುತೆರೆ ಕಲಾವಿದರು
ನಾವು ಯಕ್ಷಗಾನ ಅಂದ ಕೂಡಲೆ ಕರಾವಳಿಯ ಕಲೆ ಅಂತೇವೆ. ಆದರೆ ದೇಶ ವಿದೇಶಗಳಲ್ಲೂ ಯಕ್ಷಗಾನ ಬಲು ಜನಪ್ರಿಯವಾಗಿದೆ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹೀಗಾಗಿಯೇ ಹಿಂದಿ ರಂಗಭೂಮಿ ಹಾಗೂ ಕಿರುತೆರೆಯ ನಟ-ನಟಿಯರು, ಹಿಂದಿ ಚಲನಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಪೋಷಕ ನಟರು ಯಕ್ಷಗಾನ ಕಲಿಯುತ್ತಿದ್ದಾರೆ.
ಉಡುಪಿ: ಕಲೆಗೆ ದೇಶ ಭಾಷೆಯ ಹಂಗಿಲ್ಲ ಎನ್ನುವ ಮಾತಿದೆ. ಈ ಮಾತು ಕರಾವಳಿ ಭಾಗದಲ್ಲಿ ನಿಜ ಆಗಿದೆ. ಯಕ್ಷಗಾನ (Yakshagana) ಒಂದು ಸಮಗ್ರ ಕಲೆ. ಕನ್ನಡ ನೆಲದ ಈ ಕಲೆಯ ಬಗ್ಗೆ ಅಪಾರ ಗೌರವ ಇದೆ. ಹೀಗಾಗಿ ದೊಡ್ಡ ಪರದೆ ಮೇಲೆ ಮಿಂಚಲು ಸಿದ್ದರಾದವರು, ಹಿಂದಿ ಧಾರವಾಹಿಗಳಲ್ಲಿ ಹೆಸರು ಮಾಡಿದವರು, ಹಿಂದಿ ನಾಟಕಗಳ ಜನಪ್ರಿಯ ತಾರೆಯರು ಇದೀಗ ಯಕ್ಷಗಾನ ಅಭ್ಯಾಸಕ್ಕೆ ಮುಂದಾಗಿದ್ದಾರೆ. ಅವರಲ್ಲಿನ ಕಲಾಸಕ್ತಿ ಕರಾವಳಿಗೆ ಕರೆ ತಂದಿದೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ನಡೆಯುತ್ತಿರುವ ತರಬೇತಿಗೆ ಹೊರರಾಜ್ಯಗಳಿಂದ ಅನೇಕರು ಆಗಮಿಸಿದ್ದಾರೆ.
ನಾವು ಯಕ್ಷಗಾನ ಅಂದ ಕೂಡಲೆ ಕರಾವಳಿಯ ಕಲೆ ಅಂತೇವೆ. ಆದರೆ ದೇಶ ವಿದೇಶಗಳಲ್ಲೂ ಯಕ್ಷಗಾನ ಬಲು ಜನಪ್ರಿಯವಾಗಿದೆ ಎನ್ನುವುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹೀಗಾಗಿಯೇ ಹಿಂದಿ ರಂಗಭೂಮಿ ಹಾಗೂ ಕಿರುತೆರೆಯ ನಟ-ನಟಿಯರು, ಹಿಂದಿ ಚಲನಚಿತ್ರಗಳಲ್ಲೂ ಕಾಣಿಸಿಕೊಳ್ಳುವ ಪೋಷಕ ನಟರು ಯಕ್ಷಗಾನ ಕಲಿಯುತ್ತಿದ್ದಾರೆ. ಇವರೆಲ್ಲಾ ಮೂಲತಃ ರಂಗ ನಟರು. ಇವರಲ್ಲಿ ಎನ್ಎಸ್ಡಿ ಕಲಾವಿದರೂ ಇದ್ದಾರೆ. ತಾವು ನಟಿಸುವ ಹಿಂದಿ ನಾಟಕಗಳಲ್ಲಿ ಯಕ್ಷಗಾನವನ್ನು ಇವರು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಂತಲೇ ಯಕ್ಷಗಾನ ಕೇಂದ್ರದಲ್ಲಿ ತರಬೇತಿಗೆ ಆಗಮಿಸಿದ್ದಾರೆ.
ಉಡುಪಿಯ ಯಕ್ಷಗಾನ ಕೇಂದ್ರ ಬಡಗುತಿಟ್ಟು ಯಕ್ಷಗಾನವನ್ನು ಶಿವರಾಮ ಕಾರಂತರ ಕಾಲದಿಂದ ಕಲಿಸಿಕೊಂಡು ಬರುತ್ತಿದೆ. ದೇಶ ಮಾತ್ರವಲ್ಲ ವಿದೇಶಗಳಿಂದಲೂ ಕಲಾವಿದರು ಬಂದು ಅಭ್ಯಾಸ ಮಾಡುತ್ತಾರೆ. ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಮುತುವರ್ಜಿಯಲ್ಲಿ ಈ ತಂಡಕ್ಕೆ ಯಕ್ಷಗಾನ ಅಭ್ಯಾಸ ಮಾಡಲಾಗುತ್ತಿದೆ. ದಿನವಿಡೀ ಸುಮಾರು 14 ತಾಸುಗಳ ಕಾಲ ಅಭ್ಯಾಸ ಮಾಡುತ್ತಿರುವ ಈ ತಂಡ ಯಕ್ಷಗಾನದ ನಡೆ-ನೃತ್ಯವನ್ನು ಚೆನ್ನಾಗಿ ಪ್ರಸ್ತುತ ಪಡಿಸುತ್ತಿದೆ. ಈ ಅಪೂರ್ವ ಕಲೆಯ ಮೋಡಿಗೆ ಒಳಗಾದಂತೆ ಕಂಡು ಬರುತ್ತಿರುವ ತಂಡ ಮತ್ತೆ ಮತ್ತೆ ಇಲ್ಲಿಗೆ ಬಂದು ಯಕ್ಷಗಾನ ಅಭ್ಯಾಸ ಮಾಡು ಉತ್ಸುಕತೆ ತೋರಿದೆ.
ಕನ್ನಡದ ಕಲೆಯೊಂದು ರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಈ ಮೂಲಕ ಮತ್ತೆ ತನ್ನ ಸೌಂದರ್ಯವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಯಕ್ಷಗಾನ ಮತ್ತೆ ಕನ್ನಡದ ಸತ್ವವನ್ನು ಹೊರನಾಡುಗಳಲ್ಲಿ ಹಂಚುವ ಕೆಲಸ ಮಾಡುತ್ತಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಕಲಾವಿದ ಮಂಜು ಹೇಳಿದ್ದಾರೆ.
ಇದನ್ನೂ ಓದಿ: ವಂದೇ ಮಾತರಂ ಗೀತೆಗೆ ಅಮ್ಮ ಮತ್ತು ಮಗನ ಯಕ್ಷಗಾನ ಕುಣಿತ; ವಿಡಿಯೋ ವೈರಲ್
Published On - 12:04 pm, Sun, 28 November 21