AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಕಳ ಯುವಕನ ಹನಿಟ್ರ್ಯಾಪ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಉಡುಪಿ ಎಸ್​​​​ಪಿ

ಉಡುಪಿಯ ಬೆಳ್ಮಣ್‌ನಲ್ಲಿ ಅಭಿಷೇಕ್ ಎಂಬ ಯುವಕ ಹನಿಟ್ರ್ಯಾಪ್‌ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರ ಸೂಸೈಡ್ ನೋಟ್ ಆಧರಿಸಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬ್ಲಾಕ್‌ಮೇಲ್ ಮತ್ತು ಹಣ ವಸೂಲಿಯ ಆರೋಪಗಳಿದ್ದು, ಈ ಬಗ್ಗೆ ಎಸ್‌ಪಿ ಕೆಲವೊಂದು ಮಾಹಿತಿ ನೀಡಿದ್ದಾರೆ, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣದ ಹಿಂದಿರುವ ಜಾಲದ ಬಗ್ಗೆಯೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on:Oct 18, 2025 | 6:00 PM

Share

ಉಡುಪಿ, ಅ.18: ಉಡುಪಿ ಜಿಲ್ಲೆಯ ಬೆಳ್ಮಣ್‌ನ ಸೂರಜ್ ಕಂಫರ್ಟ್ಸ್ ಲಾಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಒಂದು ದುರದೃಷ್ಟಕರ ಘಟನೆಯಲ್ಲಿ 25 ವರ್ಷದ ಅಭಿಷೇಕ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಟ್ಟೆ ಗ್ರಾಮದವರಾದ ಅಭಿಷೇಕ್, ಲೇಡಿಘೋಶನ್ ಆಸ್ಪತ್ರೆಯಲ್ಲಿ ಕೆಎಂಸಿ ಗುತ್ತಿಗೆ ಆಧಾರದ ಮೇಲೆ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಆತ್ಮಹತ್ಯೆಯ ಹಿಂದೆ ಹನಿಟ್ರ್ಯಾಪ್ ಇದೆ ಎಂಬ ಶಂಕೆ ಇದೆ(Udupi honeytrap case), ಅಭಿಷೇಕ್ ಸಾವಿಗೆ ಮುನ್ನ ಲೇಡಿಘೋಶನ್ ಆಸ್ಪತ್ರೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಕೆಲವು ಧ್ವನಿ ಸಂದೇಶಗಳು, ಪಠ್ಯ ಸಂದೇಶಗಳು, ಸೂಸೈಡ್ ನೋಟ್ ಮತ್ತು ಒಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಾಟ್ಸಾಪ್ ಗ್ರೂಪ್ ಸದಸ್ಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು  ಪರಿಶೀಲಿಸಿದ್ದಾರೆ. ಅಭಿಷೇಕ್ ಬರೆದಿದ್ದ ಸೂಸೈಡ್ ನೋಟ್‌ನಲ್ಲಿ ಆಘಾತಕಾರಿ ವಿಷಯಗಳು ಬಹಿರಂಗವಾಗಿವೆ. ಅದರಲ್ಲಿ, ಒಬ್ಬಳು ಯುವತಿ ಮತ್ತು ಆಕೆಯ ಸ್ನೇಹಿತರು, ಖಾಸಗಿ ಸಮಯದ ವಿಡಿಯೋಗಳನ್ನು ಮಾಡಿ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು, ಇದರ ಒತ್ತಡವನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಾಲಾಗಿದೆ.

ಇದೀಗ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ (abetment to suicide section) ನಾಲ್ವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ನಾಲ್ವರ ಪೈಕಿ ಈಗಾಗಲೇ ಮೂವರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಅಭಿಷೇಕ್​​ನ  ಫೋನ್ ಕೂಡ ವಶಪಡಿಸಿಕೊಂಡಿದ್ದು, ಅದರಲ್ಲಿರುವ ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಸಾಕ್ಷ್ಯವಾಗಿ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ವೈಜ್ಞಾನಿಕ ಸಾಕ್ಷ್ಯಗಳಿಗಾಗಿ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಪ್ರಕರಣದ ತನಿಖೆಯ ನೇತೃತ್ವವನ್ನು ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಮದ ಅವರು ವಹಿಸಿದ್ದು, ಅಭಿಷೇಕ್ ಪೋಷಕರನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಸೂಸೈಡ್ ನೋಟ್‌ನಲ್ಲಿ ಉಲ್ಲೇಖಿಸಿರುವ ಇತರ ವ್ಯಕ್ತಿಗಳು, ಮೃತರೊಂದಿಗೆ ಕೆಲಸ ಮಾಡಿದ್ದವರು, ಮತ್ತು ಆರೋಪಿ ಯುವತಿಯ ಸ್ನೇಹಿತರು ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.ಈ ಪ್ರಕರಣದ ಗಂಭೀರತೆಯನ್ನು ಮನಗಂಡ ವಿಶ್ವಕರ್ಮ ಒಕ್ಕೂಟ, ರಾಜಕೀಯ ಮುಖಂಡರು ಮತ್ತು ಇತರ ಸಂಘಟನೆಗಳು ಸಮಗ್ರ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಇದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣವಲ್ಲ, ಬದಲಿಗೆ ಇದೊಂದು ಜಾಲ ಇರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾರ್ಕಳ ಯುವಕನ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ? ಡೆತ್ ನೋಟ್​​ನಿಂದ ಸ್ಪೋಟಕ ಅಂಶ ಬಯಲು

ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆರಂಭಿಕವಾಗಿ ಇದು ಪ್ರೀತಿ ವೈಫಲ್ಯದ ಪ್ರಕರಣವೆಂದು ಕಂಡುಬಂದರೂ, ಸೂಸೈಡ್ ನೋಟ್‌ನಲ್ಲಿರುವ ವಿಷಯಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆತ್ಮಹತ್ಯೆಯ ಹಿಂದಿರುವ ನೈಜತೆಯನ್ನು ಪತ್ತೆಹಚ್ಚುವತ್ತ ಗಮನಹರಿಸಲಾಗಿದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ, ಆತ್ಮಹತ್ಯೆಗೆ ಪ್ರಚೋದನೆ ನೀಡಿದವರು ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Sat, 18 October 25