AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಆರೋಪ

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಊರಿಗೆ ಊರೇ ಅಸ್ವಸ್ಥಗೊಂಡು ದಾಖಲಾದ ಘಟನೆ ಉಡುಪಿಯಲ್ಲಿ ನಡೆದಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸುಮಾರು 500ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಇನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ನೀರು ಕುಡಿದ ಪ್ರತಿಯೊಬ್ಬರಿಗೂ ಕೂಡ ವಾಂತಿ ಭೇದಿ ಪ್ರಾರಂಭವಾಗಿದ್ದು, ವಯೋವೃದ್ಧರೋರ್ವರು ಗಂಭೀರ ಪರಿಸ್ಥಿತಿಗೆ ತಲುಪಿದ ಘಟನೆಯೂ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಆರೋಪ
ಉಡುಪಿಯಲ್ಲಿ ಕಲುಷಿತ ನೀರು ಕುಡಿದು 500ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 05, 2024 | 4:50 PM

Share

ಉಡುಪಿ, ಅ.05: ಗ್ರಾಮ ಪಂಚಾಯತಿ ನಿರ್ಲಕ್ಷ್ಯದಿಂದಾಗಿ ಕಲುಷಿತ ನೀರು ಕುಡಿದ ಎರಡು ವಾರ್ಡ್​ಗಳ 500ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮಡಿಕಲ್ ಮತ್ತು ಕರ್ಕಿಕಳಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಬೆಳಕಿಗೆ ಬರದಂತೆ ತಾಲೂಕು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಮುನ್ನೆಚ್ಚರಿಕೆ ವಹಿಸಿದ್ದಾಗ್ಯೂ ಸ್ಥಳೀಯರ ಆಕ್ರೋಶದಿಂದ ಪ್ರಕರಣ ಬಯಲಾಗಿದೆ. ಕಲುಷಿತ ನೀರು ಕುಡಿದ ಗ್ರಾಮಸ್ಥರ ಪೈಕಿ ಕರ್ಕಿಕಳಿ ಮತ್ತು ಕಾಸನಾಡಿ ಪ್ರದೆಶದ ವಾರ್ಡ್ 6 ಮತ್ತು 7ರಲ್ಲಿ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ನೀರನ್ನು ಕುದಿಸಿ ಕುಡಿದವರು ಮಾತ್ರ ಕಾಯಿಲೆಯಿಂದ ಬಚಾವಾಗಿದ್ದು, ಕಲುಷಿತ ನೀರಿನಿಂದಾಗಿಯೇ ಕಾಯಿಲೆಗಳು ಶುರುವಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ದೃಢಪಡಿಸಿದೆ ಎಂದು ತಿಳಿದು ಬಂದಿದೆ.  6 ಮತ್ತು 7ನೇ ವಾರ್ಡ್​ನ ಪ್ರತಿ ಮನೆಯಲ್ಲೂ 3 ಕ್ಕೂ ಅಧಿಕ ಮಂದಿಗೆ ವಾಂತಿ, ಭೇದಿಯಿಂದ ಬಳಲುತ್ತಿದ್ದು, 80 ವರ್ಷದ ವಯೋವೃದ್ಧರಿಗೆ ರಕ್ತಭೇದಿ ಆರಂಭಗೊಂಡಿದೆ. ನೂರಾರು ಜನ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಹಾಸನ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಸನಾಡಿ ಎಂಬಲ್ಲಿ ಇರುವ ಬೃಹತ್ ಗಾತ್ರದ ನೀರಿನ ಟ್ಯಾಂಕಿನಿಂದ ಕಾಸನಾಡಿ ಮತ್ತು ಕರ್ಕಿಕಳಿ ಪ್ರದೇಶಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಳೆದ ಆರೇಳು ವರ್ಷಗಳಿಂದ ಟ್ಯಾಂಕ್ ಸ್ವಚ್ಚತೆ ಮಾಡಿಲ್ಲದೇ ಇರುವುದು ಮತ್ತು ನೀರು ಸರಬರಾಜಿನ ಪೈಪುಗಳು ಲೀಕೇಜ್ ಆಗುತ್ತಿದ್ದು, ಕೆಲವು ಕಡೆ ಒಳಚರಂಡಿ ಪೈಪ್ ಲೈನ್ ಮತ್ತು ನೀರಿನ ಪೈಪ್ ಲೈನ್ ಜೋಡಿಕೆಯಿಂದಾಗಿ ನೀರು ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆಯೂ ನಡೆದಿದೆ.

ಒಟ್ಟಾರೆಯಾಗಿ, ಇಲ್ಲಿ ಜೀವಜಲ ಎಂದು ಕರೆಯಲ್ಪಡುವ ಕುಡಿಯುವ ನೀರು, ಕಲುಷಿತಗೊಂಡು ಜನರ ಪ್ರಾಣಕ್ಕೆ ಕಂಟಕವಾಗಿದೆ. ಇನ್ನಾದರೂ ಗ್ರಾಮ ಪಂಚಾಯತ್ ಜವಾಬ್ದಾರಿಯುತವಾಗಿ ನಡೆದುಕೊಂಡು ಗ್ರಾಮಸ್ಥರ ಪ್ರಾಣದ ಜೊತೆ ಚೆಲ್ಲಾಟವಾಡದೆ, ಯಾವುದೇ ನಿರ್ಲಕ್ಷಕ್ಕೆ ಎಡೆ ಮಾಡದೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎನ್ನುವುದು ನಮ್ಮ ಆಶಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ