ಉಡುಪಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಗೋ ಬ್ಯಾಕ್: ಸಚಿವ ಪರಮೇಶ್ವರ ಅಚ್ಚರಿಯ ಹೇಳಿಕೆ
ಲೋಕಸಭೆ ಚುನಾವಣೆ ಸೋಲಿನ ಬಳಿಕ ಉಡುಪಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದರು. ಈ ಬಗ್ಗೆ ಇದೀಗ ಉಡುಪಿ ಭೇಟಿಯಲ್ಲಿರುವ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ವಿವರಗಳಿಗೆ ಮುಂದೆ ಓದಿ.
ಉಡುಪಿ, ಜೂನ್ 6: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ಉಡುಪಿಯಲ್ಲಿ ಕಾಂಗ್ರೆಸ್ (Congress) ಕಾರ್ಯಕರ್ತರಿಂದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ. ಈ ಬಗ್ಗೆ ಉಡುಪಿ ಪ್ರವಾಸದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ (G Parameshwara) ಇದೀಗ ಪ್ರತಿಕ್ರಿಯಿಸಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ ಆಗಿದೆ. ಕರಾವಳಿಯಲ್ಲಿ ಪಕ್ಷ ಸಂಘಟನೆ ಕೆಲಸ ಆಗಬೇಕು. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡುತ್ತೇವೆ. ಕರಾವಳಿಯ ಮೂರೂ ಜಿಲ್ಲೆಯಲ್ಲಿ ಹೆಚ್ಚಿನ ತಯಾರಿ ಮಾಡಬೇಕು ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಗೋ ಬ್ಯಾಕ್ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ, ಜಿಲ್ಲಾ ಸಚಿವರ ನೇಮಕ ಮಾಡುವುದು ಆಡಳಿತದ ದೃಷ್ಟಿಯಿಂದಲೇ ವಿನಃ ರಾಜಕೀಯದ ದೃಷ್ಟಿಯಿಂದ ಅಲ್ಲ. ಪಕ್ಷ ಸಂಘಟನೆಗೆ ನಮ್ಮಲ್ಲಿ ಅಧ್ಯಕ್ಷರು ಇದ್ದಾರೆ. ಪ್ರತಿಯೊಂದು ಜಿಲ್ಲೆಗೂ ಪಕ್ಷ ಸಂಘಟನೆಗೆ ಉಸ್ತುವಾರಿಗಳು ಬೇರೆ ಇರುತ್ತಾರೆ. ಜಿಲ್ಲೆಯ ಆಡಳಿತ ಚುರುಕುಗೊಳಿಸುವುದು ಉಸ್ತುವಾರಿ ಸಚಿವರ ಕೆಲಸ. ಕಾರ್ಯಕ್ರಮ ಅನುಷ್ಠಾನ ಆಗುವಂತೆ ನೋಡಿಕೊಳ್ಳುವುದು ಅವರ ಕೆಲಸ. ಅವರಲ್ಲಿ ಏನಾದರೂ ತಪ್ಪಿದ್ದರೆ, ಕಾರ್ಯಕರ್ತರು ಹೇಳಿದರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾವ ಕಾನೂನು ಸುವ್ಯವಸ್ಥೆಯೂ ಹಾಳಾಗಿಲ್ಲ. ಕೊಲೆ ಆಗಿದೆ, ಆಗಬಾರದಿತ್ತು. ಕೊಲೆ ಯಾಕಾಗಿದೆ ಅನ್ನೋದನ್ನ ಎಲ್ಲರೂ ಗಮನಿಸಿದ್ದಾರೆ. ಎಲ್ಲಾದರೂ ಕೋಮು ಗಲಭೆ ಆಗಿದೆಯಾ? ಗಣೇಶ ಹಬ್ಬ, ರಂಜಾನ್ ಎಲ್ಲವೂ ಶಾಂತಿಯುತವಾಗಿ ಮುಗಿದಿದೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದವು. ರಾಜಕೀಯ ದೃಷ್ಟಿಯಿಂದ ಯಾವುದೇ ಕೊಲೆ ಆಗಿಲ್ಲ. ಬಿಜೆಪಿ ಆಡಳಿತ ಇದ್ದಾಗ ಕೊಲೆ ಆಗಲೇ ಇಲ್ಲವೇ ಎಂದು ಪ್ರಶ್ನಿಸಿದರು.
ಒತ್ತಾಯಿಸಿ ರಾಜೀನಾಮೆ ಪಡೆಯಲಾಗದು: ಪರಮೇಶ್ವರ
ವಾಲ್ಮೀಕಿ ನಿಗಮ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಈ ಬಗ್ಗೆ ಅವರೇ (ನಾಗೇಂದ್ರ) ತೀರ್ಮಾನ ತೆಗೆದುಕೊಳ್ಳಬೇಕು. ಯಾರು ಕೂಡ ಒತ್ತಾಯ ಮಾಡಿ ರಾಜೀನಾಮೆ ಕೊಡಿ ಎಂದು ಹೇಳಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಕೂಡ ರಾಜೀನಾಮೆಗೆ ಒತ್ತಾಯ ಮಾಡಿಲ್ಲ. ನಾವು ತನಿಖೆ ಪ್ರಾರಂಭ ಮಾಡಿದ್ದೇವೆ, ಎಸ್ಐಟಿ ರಚನೆ ಮಾಡಿದ್ದೇವೆ. ಇದು ಬ್ಯಾಂಕ್ ಫ್ರಾಡ್ ಆಗಿರುವುದರಿಂದ, ಮೂರು ಕೋಟಿಗೂ ಅಧಿಕ ವಂಚನೆ ಆಗಿರುವುದರಿಂದ ಸ್ವಾಭಾವಿಕವಾಗಿ ಸಿಬಿಐ ತನಿಖೆ ಆಗುತ್ತೆ. ತನಿಖೆಯಲ್ಲಿ ಏನು ಸತ್ಯಾಂಶ ಹೊರಬರುತ್ತದೆ ಕಾದು ನೋಡೋಣ ಎಂದರು.
ಇದನ್ನೂ ಓದಿ: ಶಾಲಾ ಬಸ್ ಚಲಿಸುತ್ತಿರುವಾಗಲೇ ಹೃದಯಘಾತ: ಚಾಲಕನ ಸಮಯಪ್ರಜ್ಞೆಯಿಂದ ಉಳಿತು ವಿದ್ಯಾರ್ಥಿಗಳ ಜೀವ
ಭೋವಿ ನಿಗಮದಲ್ಲಿ 100 ಕೋಟಿ ಹಗರಣ ನಡೆದಿರುವ ಬಗ್ಗೆ ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಯಾರಾದರೂ ನಮಗೆ ದೂರು ಕೊಡಬೇಕು. ದೂರು ನೀಡಿದರೆ ಖಂಡಿತವಾಗಿಯೂ ಈ ಬಗ್ಗೆ ತನಿಖೆ ಮಾಡುತ್ತೇವೆ. ಸರ್ಕಾರದ ಅವಧಿಯಲ್ಲಿ ಆಗಿದೆ ಅಂತ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈ ಪ್ರಕರಣದಲ್ಲಿ ಸಂತ್ರಸ್ತ ಸ್ತ್ರೀಯರಿಗೆ ನಾವು ಧೈರ್ಯ ನೀಡಿದ್ದೇವೆ. ತನಿಖಾ ಸಂಸ್ಥೆಗಳ ಮುಂದೆ ಬಂದು ಹೇಳಿಕೆ ನೀಡಲು ಹೇಳಿದ್ದೇವೆ. ನಾನು ಮತ್ತು ಮುಖ್ಯಮಂತ್ರಿಗಳು ರಕ್ಷಣೆಯ ಭರವಸೆ ಕೊಟ್ಟಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ