AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್! ಇಬ್ಬರು ಸಾವು

ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಬಳಿ ಪ್ರವಾಸಿ ದೋಣಿ ಮಗುಚಿ ಬಿದ್ದಿದ್ದು, ಮೈಸೂರಿನ 28 ಬಿಪಿಒ ಉದ್ಯೋಗಿಗಳ ಪೈಕಿ ನಾಲ್ವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಆ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿದ ಪ್ರವಾಸಿಗರನ್ನು ರಕ್ಷಿಸಲಾಗಿದೆ. ಲೈಫ್ ಜಾಕೆಟ್‌ಗಳ ಕೊರತೆ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಯಿಂದಲೇ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಉಡುಪಿ ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್!  ಇಬ್ಬರು ಸಾವು
ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್! ನಾಲ್ವರ ಸ್ಥಿತಿ ಗಂಭೀರ
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Jan 26, 2026 | 3:05 PM

Share

ಉಡುಪಿ, ಜನವರಿ 26: ಜಿಲ್ಲೆಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದಿದ್ದು (Boat Overturn) , ನಾಲ್ವರು ಪ್ರವಾಸಿಗರ ಸ್ಥಿತಿ ಗಂಭೀರವಾಗಿತ್ತು.  ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  ಈ ಅಪಘಾತದಲ್ಲಿ ಹಲವರು ಅಸ್ವಸ್ಥಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಿಂದ ಬಂದಿದ್ದ ಬಿಪಿಓ ಉದ್ಯೋಗಿಗಳು

ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡವು ಎರಡು ಪ್ರವಾಸಿ ಬೋಟ್‌ಗಳಲ್ಲಿ ವಿಹಾರಕ್ಕೆ ತೆರಳಿತ್ತು. ಒಂದೊಂದು ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ಕಾಗಿ ಮಗುಚಿ ಬಿದ್ದಿದೆ. ಅಪಘಾತದ ವೇಳೆ ಪ್ರವಾಸಿಗರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ, ಎಲ್ಲರನ್ನು ಸುರಕ್ಷಿತವಾಗಿ ಸಮುದ್ರದಿಂದ ಹೊರತೆಗೆದಿದ್ದಾರೆ.  ಈ ಅವಘಡದಲ್ಲಿ ಶಂಕರಪ್ಪ (22), ಸಿಂಧು (23), ಧರ್ಮರಾಜ್​ (26) ದಿಶಾ (26) ಇವರುಗಳ ಸ್ಥಿತಿ ಗಂಭೀರವಾಗಿತ್ತು. ಅದರಲ್ಲಿ  ಶಂಕರಪ್ಪ ಮತ್ತು ಸಿಂಧು ಸಾವನ್ನಪಿದ್ದರೆ,  ಉಳಿದವರ ಸ್ಥಿತಿ ಚಿಂತಾಜನಕವಾಗಿದೆ.

ಲೈಫ್ ಜಾಕೆಟ್ ಇಲ್ಲದೆ ಬೋಟ್ ರೈಡ್?

ನೀರಿನಲ್ಲಿ ಮುಳುಗಿದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಏಟಾಗಿರುವುದಾಗಿ ತಿಳಿದುಬಂದಿದೆ. ಡೆಲ್ಟಾ ಬೀಚ್ ನಿಂದ ಪ್ರವಾಸಿ ಬೋಟ್​ನಲ್ಲಿ ತೆರಳಿದ್ದ 14 ಮಂದಿಗೆ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರೂ, ಕೆಲ ಪ್ರವಾಸಿಗರು ಜಾಕೇಟ್ ಧರಿಸಿರಲಿಲ್ಲ ಎಂದು ತಿಳಿದಿದೆ. ಅಪಘಾತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಾರಣವಾಗಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುಹಾನ್ ಮತ್ತು ಸೂಫಿಯಾನ ಮಾಲೀಕತ್ವದ ಟೂರಿಸ್ಟ್ ಬೋಟ್‌ಗಳು ಈ ಪ್ರವಾಸಕ್ಕೆ ಬಳಸಲಾಗಿದ್ದವು. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:29 pm, Mon, 26 January 26