ವೋಟಿನ ಜತೆ ನೂರರ ನೋಟು ಕೊಡಿ ಎಂದಿದ್ದ ಮುತಾಲಿಕ್ಗೆ ತಿರುಗೇಟು ನೀಡಿದ ವಿ. ಸುನೀಲ್ ಕುಮಾರ್
ನಿಮ್ಮ ನಡೆ ಬಗ್ಗೆ ನಮಗೆ ಮೊದಲೇ ಅನುಮಾವಿತ್ತು, ಈಗ ನಿಜವಾಗಿದೆ ಎಂದು ಕಾರ್ಕಳ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ ವಿಚಾರವಾಗಿ ಸಚಿವ ವಿ.ಸುನಿಲ್ ಕುಮಾರ್ ತಿರುಗೇಟು ನೀಡಿದರು.
ಉಡುಪಿ: ನೀವು ಆಮಿಷಕ್ಕೆ ಒಳಗಾಗಿ ಚುನಾವಣೆಯಲ್ಲಿ ಸ್ಪರ್ಧೆಗೆ ಬಯಸಿದ್ದೀರಿ. ನಿಮ್ಮ ನಡೆ ಬಗ್ಗೆ ನಮಗೆ ಮೊದಲೇ ಅನುಮಾವಿತ್ತು, ಈಗ ನಿಜವಾಗಿದೆ ಎಂದು ಕಾರ್ಕಳ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ (Pramod Muthalik) ಸ್ಪರ್ಧೆ ವಿಚಾರವಾಗಿ ಸಚಿವ ವಿ.ಸುನಿಲ್ ಕುಮಾರ್ ತಿರುಗೇಟು ನೀಡಿದರು. ನೀವು ಸ್ವಂತಬುದ್ಧಿಯಿಂದ ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕಾರ್ಕಳ ಕ್ಷೇತ್ರದಿಂದ ನಿಮ್ಮ ಸರ್ಧೆಯನ್ನು ನಾನು ಮೊದಲೇ ಸ್ವಗಾತಿಸಿದ್ದೆ. ಈಗಲೂ ನಿಮಗೆ ತನು ಮನ ಧನ ಸಹಾಯ ಮಾಡುವವರು ಬರಲಿ. ಕಾರ್ಕಳ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಲಿ ಎಂದು ಹೇಳಿದರು.
ಈಗ ತನು ಮನ ಧನದ ಅಗತ್ಯವಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಸ್ಪರ್ಧೆಯ ಉದ್ದೇಶ ಕಾರ್ಕಳ ಕ್ಷೇತ್ರದ ಹಿತವಲ್ಲ, ಹಿಂದುತ್ವದ ಹಿತ ಅಲ್ಲ, ಜನತೆಯ ಹಿತವಲ್ಲ, ನಿಮ್ಮ ಸ್ಪರ್ಧೆ ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಿಂದ ಸ್ಪಷ್ಪವಾಯಿತು ಸಾಮಾಜಿಕ ಜಾಲತಾಣದ ಮೂಲಕ ವಿ.ಸುನಿಲ್ ಕುಮಾರ್ ಟಾಂಗ್ ನೀಡಿದರು.
ಇದನ್ನೂ ಓದಿ: ಕಟುಕರಿಗೆ ದನ ಕೊಡಬಾರದು: ಕಾರ್ಕಳದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಮಾತಾನಾಡಿದ ಪ್ರಮೋದ್ ಮುತಾಲಿಕ್
ಸುನೀಲ್ ಕುಮಾರ್ ಏನೆಂಬುದು ಕಾರ್ಕಳ ಕ್ಷೇತ್ರದ ಜನತೆಗೆ ಗೊತ್ತು
ಸುನೀಲ್ ಕುಮಾರ್ ಏನೆಂಬುದು ಕಾರ್ಕಳ ಕ್ಷೇತ್ರದ ಜನತೆ ನೋಡಿದ್ದಾರೆ. ಮುಂದೆಯೂ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಮುತಾಲಿಕ್ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ, ಮುಂದೆಯೂ ಮಾಡಬಹುದು. ಆದರೆ ನಾನು ಆ ವಿಚಾರಗಳಿಗೆ ಉತ್ತರ ನೀಡಲು ಹೋಗಲ್ಲ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಅಭಿವೃದ್ಧಿ ವಿಚಾರದ ಬಗ್ಗೆ ಕಾರ್ಕಳದ ಜನ ಪ್ರಶ್ನಿಸಿದರೆ ಉತ್ತರಿಸುತ್ತೇನೆ ಎಂದು ಸವಾಲೆಸೆದರು.
ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ, ಶ್ರೀರಾಮ ಸೇನೆ ಸಂಘಟನೆಯೊಳಗೆ ಭುಗಿಲೆದ್ದ ಭಿನ್ನಮತ
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉಡುಪಿಯ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದಾರೆ. ಅಲ್ಲದೇ ಕಾರ್ಕಳದಲ್ಲಿ ಚುನಾವಣೆ ಪ್ರಚಾರದ ಕಚೇರಿಯನ್ನು ಸಹ ತೆರೆದಿದ್ದಾರೆ. ಆದ್ರೆ, ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುತ್ತಿರುವುದಕ್ಕೆ ಶ್ರೀರಾಮ ಸೇನೆ ಸಂಘಟನೆಯೊಳಗೆ ಭಿನ್ನಮತ ಭುಗಿಲೆದ್ದಿದೆ. ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆಗೆ ಶ್ರೀರಾಮಸೇನೆ ಮಂಗಳೂರು ವಿಭಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ್ ಭಟ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ: ಮುತಾಲಿಕ್ಗೆ ಟಕ್ಕರ್ ಕೊಟ್ಟ ಸುನಿಲ್ ಕುಮಾರ್
ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ. ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ? ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರೋಧಿಗಳು ಮುತಾಲಿಕ್ ರನ್ನು ಬಲಿಕೊಡುತ್ತಿದ್ದಾರೆ. ಬಿಜೆಪಿ ಸಂಘ ಪರಿವಾರದ ಜೊತೆ ಮಾತನಾಡಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸಬೇಕು. ಪ್ರಮೋದ್ ಮುತಾಲಿಕ್ ರಿಗೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.