ಉಡುಪಿ: ಹಡಿಲು ಭೂಮಿಯಲ್ಲಿ ಭರ್ಜರಿ ಫಸಲು; ಆನ್ಲೈನ್ನಲ್ಲೂ ಸಿಗಲಿದೆ ಕೇದಾರ ಕಜೆ ಎಂಬ ಅಪರೂಪದ ಕುಚ್ಚಿಗೆ ಅಕ್ಕಿ
ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಮೂಲಕ ಅಂದಾಜು 2000 ಎಕರೆ ಪಾಳು ಭೂಮಿಯನ್ನು ದತ್ತು ಪಡೆಯಲಾಗಿತ್ತು. ಇದೀಗ ತೆನೆಬಿಟ್ಟ ಭತ್ತದ ಕಟಾವು ನಡೆಸಲಾಗಿದೆ.
ಉಡುಪಿ: ಜಿಲ್ಲೆಯಲ್ಲಿ ನಡೆದ ಕೃಷಿ ಕ್ರಾಂತಿಯೊಂದು ಫಲನೀಡುವ ಕಾಲ ಬಂದಿದೆ. ಹಾಳು ಬಿಟ್ಟಿದ್ದ ಭೂಮಿಯಲ್ಲಿ ಭತ್ತದ ಕೃಷಿ ನಡೆಸಿ ಇದೀಗ ಕಟಾವು ಮಾಡಲಾಗಿದೆ. ಕೇದಾರ ಕಜೆ ಎಂಬ ಹೆಸರಲ್ಲಿ ಅಪರೂಪದ ಕುಚ್ಚಿಗೆ ಅಕ್ಕಿ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಆನ್ಲೈನ್ ಮಾರುಕಟ್ಟೆಯಲ್ಲಿ ಈ ಹೊಸ ತಳಿಯ ಅಕ್ಕಿ ಸದ್ದು ಮಾಡಲಿದ್ದು, ರೈತರ ನಿರೀಕ್ಷೆಗಳು ಗರಿಗೆದರಿವೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸತೊಂದು ಕೃಷಿ ಪ್ರಯೋಗ ಮಾಡಲಾಗಿತ್ತು. ಕಳೆದ ಎರಡು- ಮೂರು ದಶಕಗಳಿಂದ ಕೃಷಿ ನಡೆಸದೆ ಬಿಟ್ಟಿದ್ದ ಪಾಳು ಭೂಮಿಯನ್ನು ದತ್ತು ಪಡೆದು ಭತ್ತದ ಬಿತ್ತನೆ ಮಾಡಲಾಗಿತ್ತು. ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಮೂಲಕ ಅಂದಾಜು 2000 ಎಕರೆ ಪಾಳು ಭೂಮಿಯನ್ನು ದತ್ತು ಪಡೆಯಲಾಗಿತ್ತು. ಇದೀಗ ತೆನೆಬಿಟ್ಟ ಭತ್ತದ ಕಟಾವು ನಡೆಸಲಾಗಿದೆ.
ಸುಮಾರು ಸಾವಿರ ಟನ್ ಭತ್ತದ ಫಸಲು ಕೈ ಸೇರಿದೆ. ಶುದ್ಧ ಸಾವಯವ ರೀತಿಯಲ್ಲಿ ಬೆಳೆಯಲಾದ ಈ ಭತ್ತದಿಂದ ಕುಚ್ಚಿಗೆ ಅಕ್ಕಿಯನ್ನು ಸಿದ್ಧಪಡಿಸಲಾಗುತ್ತಿದೆ. ಕುಚ್ಚಿಗೆ ಅಕ್ಕಿ ತಿನ್ನುವ ಕರಾವಳಿ ಭಾಗದಲ್ಲೇ ಕಣ್ಮರೆಯಾಗುತ್ತಿರುವ ಕಜೆ ಮಾದರಿಯ ಅಕ್ಕಿಯು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಹೇರಳವಾದ ಫೈಬರ್ ಕಂಟೆಂಟ್ ಹೊಂದಿರುವ ಈ ತಳಿಯ ಅಕ್ಕಿ, ಕೇವಲ ಕರಾವಳಿ ಜಿಲ್ಲೆಗಳಿಗೆ ಮಾತ್ರವಲ್ಲ ಕುಚ್ಚಿಗೆ ಅಕ್ಕಿ ತಿನ್ನುವ ನಾನಾ ಭಾಗಗಳಿಗೆ ಮಾರುಕಟ್ಟೆ ಅರಸಿ ಹೊರಟಿದೆ.
ಉಡುಪಿಯಲ್ಲಿ ನಡೆದದ್ದು ಒಂದು ವಿಭಿನ್ನ ಪ್ರಯೋಗ. ಲಾಕ್ಡೌನ್ ಆದಾಗ ಜನರು ಮರಳಿ ಮಣ್ಣಿಗೆ ಮುಖ ಮಾಡಿದ್ದರು. ಜನರ ಕೃಷಿ ಆಸಕ್ತಿಯನ್ನು ಗಮನಿಸಿ ರೈತರಿಂದ ಪಾಳು ಬಿಟ್ಟ ಭತ್ತದ ಗದ್ದೆಗಳನ್ನು ಒಂದು ಮಳೆಗಾಲದ ಮಟ್ಟಿಗೆ ದತ್ತು ಪಡೆದು, ಭತ್ತದ ಬಿತ್ತನೆ ಮಾಡಲಾಗಿತ್ತು. ಇದೀಗ ಈ ಕುಚ್ಚಿಗೆ ಅಕ್ಕಿಯನ್ನು, ಕೇದಾರ ಕಜೆ ಎಂಬ ಬ್ರಾಂಡ್ ಮೂಲಕ ಕರಾವಳಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಆನ್ಲೈನ್ ಮೂಲಕವೂ ಈ ಕುಚ್ಚಿಗೆ ಅಕ್ಕಿಯನ್ನು ಮಾರುಕಟ್ಟೆಗೆ ನೀಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದ್ದಾರೆ.
ಮುಂದಿನ ವಾರದಲ್ಲಿ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿ ಆನ್ಲೈನ್ ಕೇದಾರ ಕಜೆ ಮಾರುಕಟ್ಟೆಗೆ ಚಾಲನೆ ನೀಡಲಿದ್ದಾರೆ. ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಪರೂಪದ ಹಡಿಲು ಭೂಮಿ ಯೋಜನೆ ಜಾರಿಯಾಗಿತ್ತು. ಗದ್ದೆಗೆ ಬೇಕಾದ ನೀರಾವರಿ ವ್ಯವಸ್ಥೆಯನ್ನು ಟ್ರಸ್ಟಿನ ವತಿಯಿಂದಲೇ ನಿರ್ವಹಿಸಲಾಗಿದ್ದು, ನೂರಾರು ಎಕರೆ ಹೂಳು ತೆರವು ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಈ ಗದ್ದೆಯನ್ನು ಮರಳಿ ರೈತರ ವಶಕ್ಕೆ ನೀಡುತ್ತಿದ್ದು, ಭತ್ತದ ಕೃಷಿ ಮುಂದುವರೆಸಲು ಪ್ರೋತ್ಸಾಹ ನೀಡಲಾಗುವುದು ಎಂದು ಶಾಸಕರಾದ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಲಾಕ್ಡೌನ್ ಎಂಬ ಶಾಪವನ್ನೇ ವರದಾನವಾಗಿ ಮಾಡಿಕೊಂಡ ಈ ಕೃಷಿ ಕ್ರಾಂತಿ ರೈತರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಮುಂದಿನ ವರ್ಷಗಳಲ್ಲಿ ಕರಾವಳಿಯ ಭತ್ತ ಕೃಷಿಕರಿಗೆ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲು ಕೇದಾರ ಕಜೆ ಕುಚ್ಚಿಗೆ ಅಕ್ಕಿ ಎಂಬ ಬ್ರಾಂಡ್ ಭಾಗ್ಯದ ಬಾಗಿಲು ತೆರೆದಿದೆ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ: ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್ಡೌನ್ನಿಂದ ಕಂಗಾಲು
ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ; 2000 ಎಕರೆಯಲ್ಲಿ ಭತ್ತ ಭಿತ್ತನೆಗೆ ಸಿದ್ಧತೆ