ಉಡುಪಿ: ಗುಂಡ್ಮಿಯಲ್ಲಿ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿ
ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಹಿಂಸಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಕರುವಿನ ಬಾಲ ಕತ್ತರಿಸಿದ ಘಟನೆ ನಡೆದಿದೆ. ನೆರೆಯ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವನ್ನು ಕದ್ದು ಕೊಂಡೊಯ್ದು ಕೊಲೆ ಮಾಡಿ ಮಾಂಸ ಮಾರಾಟ ಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ ಈ ಕೃತ್ಯ ನಡೆದಿದೆ.
![ಉಡುಪಿ: ಗುಂಡ್ಮಿಯಲ್ಲಿ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿ](https://images.tv9kannada.com/wp-content/uploads/2025/01/calfs-tail-cut.jpg?w=1280)
ಉಡುಪಿ, ಜನವರಿ 30: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ, ಮೈಸೂರಿನಲ್ಲಿ ಗೂಳಿಯ ಬಾಲ ಕತ್ತರಿಸಿದ ಘಟನೆ ಬೆನ್ನಲ್ಲೇ ಇದೀಗ ಉಡುಪಿ ಜಿಲ್ಲೆಯಲ್ಲಿ ಕರುವಿನ ಬಾಲ ಕತ್ತರಿಸಿದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಸೇಲ್ಸ್ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ್ದಾನೆ.
ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುರುಳ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ ನಿರಾಕರಿಸಿ ಮಹಿಳೆ ಮನೆ ಬಾಗಿಲು ಹಾಕಿದ್ದಾರೆ. ಆ ಬಳಿಕ ಮನೆ ಬಳಿಯೇ ಇದ್ದ 2 ವರ್ಷದ ಕರುವಿನ ಬಾಲ ಕತ್ತರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಘಟನೆಯನ್ನು ಹಿಂದೂ ಸಂಘಟನೆಗಳು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿವೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿರಿಯಡ್ಕ: ಗೋಶಾಲೆಯಿಂದ ದನ ಕಳವು
ಉಡುಪಿ ಸಮೀಪದ ಹಿರಿಯಡ್ಕ ವೀರಭದ್ರ ದೇವಸ್ಥಾನದ ಗೋಶಾಲೆಯಿಂದ ದನ ಕಳವು ಮಾಡಾಲಾಗಿದೆ. ಈ ಸಂಬಂಧ ಪೊಲೀಸ್ ದೂರು ದಾಖಲಾಗಿದೆ. ಬುಧವಾರ ಮುಂಜಾನೆ 2 ರಿಂದ 3 ಗಂಟೆಯ ನಡುವೆ ಈ ಕಳ್ಳತನ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ.
ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಗೋಶಾಲೆ ಇದ್ದು, ಅಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಎರಡು ಹಸುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಮಹಿಳೆಗೆ ಗಾಯ
ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅವರನ್ನು ನಂತರ ಅದೇ ಬಸ್ಸಿನಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡ ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55) ಎಂದು ಗುರುತಿಸಲಾಗಿದೆ. ಮಹಿಳೆಯ ಬಲತೋಳಿನ ಮೂಳೆ ಸಂಪೂರ್ಣ ಮುರಿದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಏಕಾಏಕಿ ಕಡಲತೀರದ ನಿವಾಸಿಗಳು ದೇವರ ಮೊರೆ ಹೋಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ