AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಜಿಲ್ಲೆಯ ಅತೀ ದೊಡ್ಡ ದೇಶಿ ಹಸುಗಳ ಫಾರ್ಮ್ ಮಾಡಿ ಯಶಸ್ವಿಯಾದ ಉದ್ಯಮಿ

ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಹಳೆಯ ಕಾಲದ ಹೈನುಗಾರಿಕೆ ಪದ್ಧತಿಯ ಮೂಲಕ ಜಿಲ್ಲೆಯ ಅತೀ ದೊಡ್ಡ ದೇಶಿ ಹಸುಗಳ ಫಾರ್ಮ್ ಮಾಡುವ ಮೂಲಕ ಉದ್ಯಮಿ ಜಿ.ರಾಮಕೃಷ್ಣ ಆಚಾರ್ ಎನ್ನುವವರು ಯಶಸ್ವಿಯಾಗಿದ್ದಾರೆ.

ಉಡುಪಿ: ಜಿಲ್ಲೆಯ ಅತೀ ದೊಡ್ಡ ದೇಶಿ ಹಸುಗಳ ಫಾರ್ಮ್ ಮಾಡಿ ಯಶಸ್ವಿಯಾದ ಉದ್ಯಮಿ
ದೇಶಿ ಹಸುಗಳ ಫಾರ್ಮ್ ಮಾಡುವ ಮೂಲಕ ಯಶಸ್ವಿಯಾದ ಉದ್ಯಮಿ ಜಿ.ರಾಮಕೃಷ್ಣ ಆಚಾರ್
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 31, 2023 | 9:26 PM

Share

ಉಡುಪಿ: ಜಿಲ್ಲೆಯ ಮೂಡಬಿದರೆಯ ಎಸ್‌ಕೆಎಫ್‌ ಉದ್ಯಮ ಸಮೂಹದ ಅಧ್ಯಕ್ಷರಾಗಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡ ಉದ್ಯಮಿ ಜಿ.ರಾಮಕೃಷ್ಣ ಆಚಾರ್ ಅವರು ಸದ್ಯ ಮರಳಿ ಮಣ್ಣಿಗೆ ಅನ್ನುವಂತೆ ಹಿಂದಿನ ಕಾಲದಲ್ಲಿ ಹೈನುಗಾರಿಕೆ ಹೇಗೆ ಮಾಡುತ್ತಿದ್ದರು. ಅದೇ ಪದ್ಧತಿಯ ಮೂಲಕ ಗೋ ಧಾಮ ಹೆಸರಿನಲ್ಲಿ ಹೆಬ್ರಿಯ ಮುನಿಯಾಲಿನಲ್ಲಿ 27 ಎಕರೆಯಲ್ಲಿ ಸಂಜೀವಿನಿ ಫಾರ್ಮ್‌, ಗೋ ಧಾಮ ಸ್ಥಾಪಿಸಿದ್ದಾರೆ. ಇಲ್ಲಿ ಬಹುಮುಖ್ಯವಾಗಿ ದೇಸಿ ಗೋ ತಳಿಗಳ ಉಳಿವಿಗೆ ಹಾಗೂ ರಕ್ಷಣೆ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ. ಗೋ ಧಾಮದಲ್ಲಿ ಗೋವುಗಳು ಸ್ವಚ್ಛಂದವಾಗಿ ತಿರುಗಾಡಲು 8 ಎಕರೆ ಜಾಗ ಹಾಗೂ ಮೇವು ಬೆಳೆಯಲು 8 ಎಕರೆ ಜಾಗ ಮೀಸಲಿರಿಸಲಾಗಿದೆ.

ಶುದ್ಧ ದೇಸಿ ಗಿರ್ ಹಸುಗಳ ಹಾಲಿನಿಂದ ತುಪ್ಪ, ಮಜ್ಜಿಗೆ ಮತ್ತು ಲಸ್ಸಿ ತಯಾರಿಕೆಯು ನಡೆಯುತ್ತಿದ್ದು ಸ್ವಾವಲಂಬನೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಇಲ್ಲಿನ ದೇಸಿ ಗೋವಿನ ಸಗಣಿ ಮತ್ತು ಗೋಮೂತ್ರದಿಂದ ಸಾವಯವ ಗೊಬ್ಬರ ತಯಾರಿಸಿ ಮಣ್ಣಿನ ಫಲವತ್ತತೆ ಹೆಚ್ಚಳ ಮಾಡಲಾಗುತ್ತಿದೆ. ಸಾವಯವ ಗೊಬ್ಬರವನ್ನು ಬಳಸಿ ರಾಸಾಯನಿಕ ಮುಕ್ತ ಜೋಳ ಬೆಳೆಯಲಾಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ವಿದೇಶಿ ಸಂಸ್ಕೃತಿಗೆ ಮಾರುಹೋಗಿ ದೇಸಿ ಸಂಸ್ಕೃತಿ, ಸ್ವಂತಿಕೆ ಕಳೆದುಕೊಂಡಿರುವಂತಹ ಸ್ಥಿತಿಯಲ್ಲಿ ಗೋಧಾಮದಲ್ಲಿ ಪ್ರಾಚೀನ ಭಾರತದ ಹಳ್ಳಿಯ ಜೀವನ, ಗೋಸಾಕಾಣಿಕೆ, ಪ್ರಾಣಿ ಪಕ್ಷಿಗಳು, ಕೃಷಿ ಆಧಾರಿತ ಜೀವನಕ್ಕೆ ಪೂರಕವಾಗಿ ಮುಂದಿನ ಜನಾಂಗವು ಮರಳಿ ಹಳ್ಳಿಗೆ ಬರುವಂತೆ ಆಕರ್ಷಿಸುವ ಕೆಲಸ ಮಾಡುತ್ತಿದ್ದಾರೆ.

ಸಾಫ್ಟ್‌ವೇರ್, ಮೆಡಿಕಲ್, ಎಂಜಿನಿಯರಿಂಗ್ ಅಥವಾ ಇತರ ವೃತ್ತಿಪರ ಉದ್ಯೋಗಗಳಂತೆ ಹೈನುಗಾರಿಕೆಯು ಮೌಲ್ಯಯುತ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೆಚ್ಚಿನ ಹಾಲು ಉತ್ಪಾದನೆಗೆ ವಿದೇಶಿ ತಳಿಗಳನ್ನು ಹೆಚ್ಚು ಸಾಕಲಾಗುತ್ತಿರುವ ಪರಿಣಾಮ ದೇಸಿ ಗೋ ತಳಿಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ದೇಸಿ ಗೋತಳಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸಿ, ಗೋವಿನ ಮೌಲ್ಯವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಗೋಧಾಮದಲ್ಲಿ ಗಿರ್, ಕಾಂಕ್ರೆಜ್, ಪುಂಗನೂರು, ಸಹಿವಾಲ್ ಸಹಿತ ದೇಸಿ ಗೋತಳಿಗಳನ್ನು ಸಾಕಲಾಗುತ್ತಿದ್ದು, ತಳಿ ಅಭಿವೃದ್ಧಿ ಮಾಡಲಾಗುತ್ತಿದೆ. ಹೈನುಗಾರಿಕೆಯ ಮೂಲಕ ಸಮುದಾಯ ಅಭಿವೃದ್ಧಿ ಹೊಂದುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಂತೆ ಪ್ರೇರೇಪಿಸುವುದು ಗೋಧಾಮದ ಉದ್ದೇಶ ಎನ್ನುತಾರೆ ಗೋಧಾಮ ಟ್ರಸ್ಟಿ ಸವಿತಾ ಅಚಾರ್.

ಇದನ್ನೂ ಓದಿ:ಸಾವಯವ ಗೊಬ್ಬರ ಬಳಸಿ ಸಮೃದ್ಧ ಫಸಲು ತೆಗೆದ ರೈತ; 10 ಎಕರೆ ಜಮೀನಿನಲ್ಲಿ ನಾಲ್ಕು ರೀತಿಯ ಬೆಳೆ ಬೆಳೆದು ಯಶಸ್ವಿ

ಒಟ್ಟಾರೆಯಾಗಿ ಹೈನುಗಾರಿಕೆಯ ಮೂಲಕ ಸ್ವಾವಲಂಬನೆ ಪಾಠ ಇವರು ಮಾಡುತ್ತಿದ್ದಾರೆ. ಪ್ರತಿದಿನ ಹಾಲಿನಿಂದ ಆದಾಯ, ಪ್ರತಿವಾರ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ, ಪನ್ನೀರ್‌ನಿಂದ ಆದಾಯ, ಗೋಆಧಾರಿತ ಸಾವಯವ ಗೊಬ್ಬರವನ್ನು ಬಳಸಿ ಹಣ್ಣು, ತರಕಾರಿ ಬೆಳೆಯಬಹುದು. ಹೈನುಗಾರಿಕೆಯಿಂದ ವರ್ಷವಿಡಿ ಆದಾಯ ಪಡೆಯಬಹುದು ಎನ್ನುವ ಸಂದೇಶ ಇವರದು.

ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ