ಉಡುಪಿ: ಅಣ್ಣ ತಮ್ಮನ ನಡುವೆ ಜಗಳ; ಮನನೊಂದ ತಮ್ಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಚ್ಚೇರಿಪೇಟೆಯಲ್ಲಿ ಅಣ್ಣ ತಮ್ಮರ ನಡುವೆ ಜಮೀನಿನ ಕುರಿತು ಜಗಳ ಉಂಟಾಗಿ, ತಮ್ಮ ಕೃಷ್ಣ ಸಫಲಿಗ ಎಂಬಾತ ಮನನೊಂದು ತನ್ನ ಕಾರಿನಲ್ಲಿಯೇ ಕುಳಿತು ಬೆಂಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಉಡುಪಿ: ಅಣ್ಣ ತಮ್ಮನ ನಡುವೆ ಜಗಳ; ಮನನೊಂದ ತಮ್ಮ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಕಾರಿನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
Updated By: ಕಿರಣ್ ಹನುಮಂತ್​ ಮಾದಾರ್

Updated on: Jan 28, 2023 | 3:41 PM

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕು ಸಚ್ಚೇರಿಪೇಟೆಯ ನಿವಾಸಿ ಕೃಷ್ಣ ಸಫಲಿಗ ಎಂಬಾತ ನಿನ್ನೆ (ಜ.26) ರಾತ್ರಿ ತನ್ನ ಅಣ್ಣ ಶೇಖರ ಸಫಲಿಗನ ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಹೋಗಿದ್ದಾನೆ. ಹಲವಾರು ವರ್ಷಗಳಿಂದ ಇಬ್ಬರ ಮಧ್ಯೆ ತಕರಾರು ಇತ್ತು, ಈ ಸಂದರ್ಭದಲ್ಲಿ ಕಾರ್ಯಕ್ರಮದ ಮನೆಯಲ್ಲೇ ಅಣ್ಣ ತಮ್ಮ ಜಗಳ ಆಡಿದ್ದಾರೆ. ತಮ್ಮ ಕೃಷ್ಣ ಸಫಲಿಗ ಅಣ್ಣನ ಮನೆಗೆ ಬೆಂಕಿ ಇಡಲು ಪ್ರಯತ್ನಿಸಿದ್ದಾನೆ. ನಂತರ ಅಲ್ಲಿಂದ ಹೋಗಿದ್ದಾನೆ. ಮನನೊಂದು ಕೃಷ್ಣ ಸಫಲಿಗ ಖಿನ್ನತೆಗೆ ಒಳಗಾಗಿ ತಮ್ಮ ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಸಾಯುವ ಮುನ್ನ ಕೃಷ್ಣ ಸಫಲಿಗ ಡೆತ್ ನೋಟ್ ಬರೆದು ಚೀಟಿಯನ್ನು ಕಾಂಪೌಂಡ್ ಗೋಡೆಗೆ ಅಂಟಿಸಿದ್ದಾನೆ. ಈ ಪತ್ರದಲ್ಲಿ ಹಣಕಾಸಿನ ವ್ಯವಹಾರದ ಕುರಿತು ಉಲ್ಲೇಖ ಮಾಡಿದ್ದಾನೆ. ಕಳೆದ ಕೆಲವು ವರ್ಷದಿಂದ ಕೃಷ್ಣ ಸಫಲಿಗ ಕುಟುಂಬದಿಂದ ಬೇರ್ಪಟ್ಟು ಏಕಾಂಗಿಯಾಗಿ ಜೀವನ ಮಾಡಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದವರು ಸ್ಥಳಕ್ಕೆ ಬಂದು ಮಾಹಿತಿ ಕಲೆ ಹಾಕಿದ್ದಾರೆ. ಕಾರ್ಕಳ ಗ್ರಾಮಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ಎಂದು ದಾಖಲಾಗಿದೆ.

ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ