ಹೊಸ ವರ್ಷದಂದೇ ಉಡುಪಿ ಗ್ರಾಮ ಪಂಚಾಯತ್ಗೆ ಬೀಗ: ಸಿಬ್ಬಂದಿಗಳ ಸಾಮೂಹಿಕ ರಾಜೀನಾಮೆ
ವರ್ಷದ ಮೊದಲ ದಿನವೇ ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮ ಪಂಚಾಯತ್ ಬಾಗಿಲು ಮುಚ್ಚಿರುವಂತಹ ಘಟನೆಯೊಂದು ನಡೆದಿದೆ. ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆ ಕಾರಣ ನೀಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸೇವೆಗಳು ಸಿಗದೇ ಜನರು ತೊಂದರೆ ಅನುಭವಿಸುವಂತಾಗಿದೆ.
ಉಡುಪಿ, ಜನವರಿ 01: 2024ಕ್ಕೆ ಬಾಯ್ ಹೇಳಿ, 2025ಕ್ಕೆ ಎಲ್ಲರೂ ಹಾಯ್ ಹೇಳಿಯಾಗಿದೆ. ಆದರೆ ಈ ಹೊಸ ವರ್ಷದಂದೇ ಉಡುಪಿಯ ಗ್ರಾಮವೊಂದರ ಜನರಿಗೆ ಮಾತ್ರ ಶಾಕ್ ಎದುರಾಗಿದೆ. ವರ್ಷದ ಮೊದಲ ದಿನವೇ ಗ್ರಾಮ ಪಂಚಾಯತ್ (Gram Panchayat) ಕಚೇರಿಗೆ ಬೀಗ ಜಡಿಯಲಾಗಿದೆ. ಹೊಸ ಹುಮ್ಮಸ್ಸಿನಿಂದ ಆರಂಭವಾಗಬೇಕಿದ್ದ ಪಂಚಾಯತ್ ಸೇವೆಗಳಿಗೆ ಬ್ರೇಕ್ ಬಿದ್ದಿದೆ. ಮಾನಸಿಕ ಕಿರುಕುಳಕ್ಕೆ ಬೇಸತ್ತು ಪಂಚಾಯತ್ ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಹೊಸ ವರ್ಷವನ್ನ ಹೊಸ ಹುರುಪಿನಿಂದ ಆರಂಭಿಸಬೇಕು ಅನ್ನೋದು ಎಲ್ಲರ ಆಸೆ. ತಮ್ಮ ತಮ್ಮ ಕೆಲಸವನ್ನ ಇನ್ನಷ್ಟು ಉತ್ಸಾಹದಿಂದ ಮಾಡಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಸಾಧಿಸಬೇಕು ಅನ್ನೋ ಸಾಮಾನ್ಯ ಹಂಬಲ ಎಲ್ಲರಲ್ಲೂ ಇರುತ್ತೆ. ಅದರಲ್ಲೂ ಸಾರ್ವಜನಿಕ ಸೇವೆಗಾಗಿ ಇರುವ ಸರಕಾರಿ ಕಚೇರಿಗಳು ಸದಾ ಜನಸೇವೆಗಾಗಿ ತಯಾರಾಗಿರಬೇಕು. ಇಂದು ಹೊಸ ವರ್ಷದ ಮೊದಲ ದಿನ ಬೇರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬೇರೆಯದ್ದೆ ಘಟನೆಯೊಂದು ನಡೆದು ಹೋಗಿದೆ.
ಗ್ರಾಮಸ್ಥರು ಪರದಾಟ
ವರ್ಷದ ಮೊದಲ ದಿನದಂದೇ ಜಿಲ್ಲೆಯ ಗ್ರಾಮ ಪಂಚಾಯತ್ ಕಛೇರಿಗೆ ಬೀಗ ಬಿದ್ದಿದೆ. ತಮ್ಮ ತಮ್ಮ ಕೆಲಸಗಳಿಗಾಗಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರಿಗೆ ಶಾಕ್ ಎದುರಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕಚೇರಿ ಮುಚ್ಚಿದ್ದರಿಂದ ಗ್ರಾಮಸ್ಥರು ಪರದಾಡಿದ್ದಾರೆ.
ಇದನ್ನೂ ಓದಿ: ಉಡುಪಿ: ಫಲಿಸಿದ ಕೋಟಿ ಚೆನ್ನಯ ದೈವದ ಅಭಯ, 28 ವರ್ಷಗಳ ಹಿಂದೆ ಮನೆ ಬಿಟ್ಟಿದ್ದ ಮಗ ವಾಪಸ್!
ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮ ಪಂಚಾಯತ್ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ವರ್ಷದ ಮೊದಲ ದಿನವೇ ಬೈರಂಪಳ್ಳಿ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿಯಲಾಗಿದೆ. ಗ್ರಾಮ ಪಂಚಾಯತ್ ಕಚೇರಿಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಗೈರಾಗುವುದರೊಂದಿಗೆ ಸಾಮೂಹಿಕ ರಾಜೀನಾಮೆಯನ್ನೂ ನೀಡಿದ್ದಾರೆ.
ಸಿಬ್ಬಂದಿಗಳಿಂದ ಸಾಮೂಹಿಕ ರಾಜೀನಾಮೆ
ಬೈರಂಪಳ್ಳಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಪಂಚಾಯತ್ ಸದಸ್ಯ ಸಂತೋಷ್ ಮತ್ತು ಪಿಡಿಒ ಇದಕ್ಕೆ ಕಾರಣವೆನ್ನುತ್ತಿದ್ದಾರೆ. ಇವರಿಬ್ಬರ ಮಾನಸಿಕ ಕಿರುಕುಳದಿಂದಲೇ ಸಿಬ್ಬಂದಿಗಳು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನೂ ಕಳೆದ ಡಿಸೆಂಬರ್ 19ರಂದು ಬೈರಂಪಳ್ಳಿ ಪಂಚಾಯತ್ ಅಧ್ಯಕ್ಷರಿಗೆ ನೀಡಿದ್ದಾರೆ. ಇದರಲ್ಲಿ ತಮಗಾಗುತ್ತಿರುವ ನೋವು, ಸಂಕಟ, ಮಾನಸಿಕ ಒತ್ತಡದ ಬಗ್ಗೆ ಉಲ್ಲೆಖಿಸಿದ್ದಾರೆ. ಡಿಸೆಂಬರ್ 31, 2024ರವರೆಗೆ ಮಾತ್ರ ನಾವು ಕರ್ತವ್ಯ ನಿರ್ವಹಿಸುವುದಾಗಿಯೂ ತಿಳಿಸಿದ್ದರು.
ಈ ಕುರಿತು ಸಿಬ್ಬಂದಿಗಳು ಬರೆದಿರುವ ರಾಜೀನಾಮೆ ಪತ್ರ ಲಭ್ಯವಾಗಿದೆ. ರಾಜೀನಾಮೆ ಪತ್ರದಲ್ಲಿ ಮಾನಸಿಕ ಒತ್ತಡದಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ದೂರಲಾಗಿದೆ. ಬೈರಂಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ತಮಗಾಗುತ್ತಿದ್ದ ಕಿರುಕುಳದ ಬಗ್ಗೆ ಸಿಬ್ಬಂದಿಗಳು ಇಂಚಿಂಚೂ ಮಾಹಿತಿ ಹಂಚಿಕೊಂಡಿದ್ದಾರೆ. ಬೈರಂಪಳ್ಳಿ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಶ್ರೀಮತಿ ಸುಮನಾ, ಕ್ಲರ್ಕ್, ಡಿಇಒ ವಾಸಂತಿ, ಪಂಪು ಚಾಲಕ ಮನೋಹರ್ ರಾಜೀನಾಮೆ ನೀಡಿದ್ದಾರೆ. ಭವಿಷ್ಯ ಮತ್ತು ಆರೋಗ್ಯದ ಚಿಂತೆಯಿಂದ ರಾಜೀನಾಮೆ ನೀಡುತ್ತಿದ್ದೇವೆ ಮತ್ತು 31 ಡಿಸೆಂಬರ್ 2024ರ ವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಮೊದಲೇ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಉಡುಪಿ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು: ನಾರ್ವೆಗೆ ಹೊರಟಿತು ಬೃಹತ್ ಹಡಗು
ಸದ್ಯ ಈ ಘಟನೆ ಉಡುಪಿ ಜಿಲ್ಲಾಡಳಿತ ಮತ್ತು ಪಂಚಾಯತ್ ರಾಜ್ ಇಲಾಖೆಗೆ ತೀವ್ರ ಮುಜುಗರ ತರಿಸಿದೆ. ಗ್ರಾಮ ಪಂಚಾಯತ್ಗೆ ಬೀಗ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಸ್ಥಳಕ್ಕೆ ಉಡುಪಿ ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೇಟಿ ನೀಡಿ ಪಂಚಾಯತ್ ಬಾಗಿಲು ತೆರೆದು ಜನರ ಸೇವೆಗೆ ಮುಕ್ತಗೊಳಿಸಿದ್ದಾರೆ. ಆದರೆ ಸಿಬ್ಬಂದಿಗಳು ಇಲ್ಲದೆ ಇರುವುದರಿಂದ ಜನರ ಕೆಲಸಗಳು ಬಾಕಿಯಾಗಿದೆ. ಕೂಡಲೇ ಜಿಲ್ಲಾಡಳಿತ ಈ ವಿವಾದದಲ್ಲಿ ಮಧ್ಯಪ್ರವೇಶಿಸಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.