ಕರ್ನಾಟಕ ಕರಾವಳಿಯಲ್ಲಿ ಫೆಂಗಲ್ ಅಬ್ಬರ: ಕರಾವಳಿ ಜಿಲ್ಲೆಗಳು, ಬೆಂಗಳೂರಿಗೆ 2 ದಿನ ಮಳೆ ಮುನ್ಸೂಚನೆ
ಇದೀಗ ಕರ್ನಾಟಕ ಕರಾವಳಿಯಲ್ಲೂ ಫೆಂಗಲ್ ಚಂಡಮಾರುತದ ಅಬ್ಬರ ತೀವ್ರಗೊಂಡಿದ್ದು, ಭಾರಿ ಮಳೆಯಾಗಿದೆ. ಕೆಲವೆಡೆ ಭೂಕುಸಿತ ಸಂಭವಿಸಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಮಂಗಳೂರಿನಲ್ಲಿ ಭೂಕುಸಿತಕ್ಕೆ ರಸ್ತೆಯೇ ಮುಚ್ಚಿ ಹೋಗಿದೆ. ಫೆಂಗಲ್ ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಎಲ್ಲೆಲ್ಲಿ ಏನೇನಾಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 4: ತಮಿಳುನಾಡಿನಲ್ಲಿ ರೌದ್ರರೂಪ ತೋರಿದ್ದ ಫೆಂಗಲ್ ಸೈಕ್ಲೋನ್ ಇದೀಗ ಬಂಗಾಳ ಕೊಲ್ಲಿಯಿಂದ ಅರಬ್ಬೀ ಸಮುದ್ರ ಪ್ರವೇಶಿಸಿದೆ. ಹೀಗಾಗಿ ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ರಕ್ಕಸ ಗಾತ್ರದ ಅಲೆಗಳು ಸಮುದ್ರ ತಟಕ್ಕೆ ಅಪ್ಪಳಿಸುತ್ತಿವೆ. ಮಂಗಳೂರು ಭಾಗದಲ್ಲಿ ಸಮುದ್ರ ಆರೆಂಜ್ ಬಣ್ಣಕ್ಕೆ ತಿರುಗಿದೆ! ಡಿಸೆಂಬರ್ 6ರವರೆಗೆ ಮೀನುಗಾರಿಕೆ ಬಂದ್ ಮಾಡಲಾಗಿದೆ.
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ರಸ್ತೆ ಬದಿ ಕುಸಿದ ಸ್ಥಳದಲ್ಲಿ 15 ಅಡಿ ಆಳದ ಗುಂಡಿ ನಿರ್ಮಾಣವಾಗಿದೆ. ಬೈಕ್, ಕಾರು, ಲಾರಿಗಳು ತೆರಳಿದ ಕ್ಷಣಾರ್ಧದಲ್ಲಿ ಕುಸಿತವಾಗಿದ್ದು ದೊಡ್ಡ ಅನಾಹುತ ತಪ್ಪಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅದ್ಯಪಾಡಿಯಲ್ಲಿ ಕೂಡ ಭೂಕುಸಿತವಾಗಿದೆ.
ಮನೆ ಮೇಲೆ ಕುಸಿದ ತಡೆಗೋಡೆ: ತಪ್ಪಿದ ದುರಂತ
ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ಪಿಲಿಕೂರು ಬಳಿ, ಮನೆ ಪಕ್ಕ ನಿರ್ಮಿಸಿದ್ದ ಬೃಹತ್ ತಡೆಗೋಡೆ ಮನೆ ಮೇಲೆ ಉರುಳಿದೆ. ದೊಡ್ಡ ಶಬ್ದ ಆಗುತ್ತಿದ್ದಂತೆಯೇ ಮನೆಯಲ್ಲಿದ್ದ ಐವರು ಹೊರಗೆ ಬಂದು ಪ್ರಾಣ ಉಳಿಸಿಕೊಡಿದ್ದಾರೆ.
ಕರಂಗಲಪಾಡಿಯಲ್ಲಿ ಮೇಘಸ್ಫೋಟ
ಕರಂಗಲಪಾಡಿಯಲ್ಲಿ ಮೇಘಸ್ಫೋಟ ರೀತಿಯಲ್ಲಿ ಒಂದೇ ಕ್ಷಣ ದೊಡ್ಡ ಮಳೆ ಸುರಿದಿದೆ. ಇದರಿಂದ ಮನೆ ಆವರಣದ ಗೋಡೆಗಳು ಕುಸಿದಿದ್ದು, ಮನೆ ಮನೆಗೂ ನೀರು ನುಗ್ಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೆರಡು ದಿನ ಭಾರಿ ಮಳೆ ಮುನ್ಸೂಚನೆ
ಇನ್ನೆರಡು ದಿನ ಕವಾರಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅತ್ತ ಉಡುಪಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡು ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಫೆಂಗಲ್ ಚಂಡಮಾರುತದ ಎಫೆಕ್ಟ್ನಿಂದರಿಣಾಮ ಉಡುಪಿಯಲ್ಲಿ 109 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಉಡುಪಿ ಜಿಲ್ಲೆ ಮಳೆ ವಿವರ
- ಕಾಪು – 179 ಎಂಎಂ
- ಕಾರ್ಕಳ – 114 ಎಂಎಂ
- ಬ್ರಹ್ಮಾವರ – 64 ಎಂಎಂ
- ಹೆಬ್ರಿ – 29 ಎಂಎಂ
- ಕುಂದಾಪುರ – 21 ಎಂಎಂ
ಉಡುಪಿ, ಕಾರವಾರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ವಾಪಸ್ ಆಗಿವೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಆಗಲಿದೆ ಅಂತಾಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಾಮುಂಡಿ ಬೆಟ್ಟದಿಂದ ರಸ್ತೆಗೆ ಉರುಳಿದ ಬಂಡೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೃಹತ್ ಬಂಡೆ ರಸ್ತೆಗೆ ಉರುಳಿದೆ. ಇನ್ನು ಸರಸ್ವತಿಪುರಂನಲ್ಲಿ ಜಿಟಿಜಿಟಿ ಮಳೆ ಹಾಗೂ ಗಾಳಿಗೆ ಮರವೊಂದು ಉರುಳಿಬಿದ್ದಿದ್ದು 2 ಕಾರ್‌ಗಳು ಜಖಂ ಆಗಿವೆ
ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲೂ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಗಳು ಜಲಾವೃತವಾಗಿ ಜನರು ಪರದಾಡಿದ್ದಾರೆ. ಜಿಗಣಿಯ ಕೈಗಾರಿಕಾ ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಕಾರು, ಬೈಕ್ಗಳು ಮುಳುಗಡೆ ಆಗಿದ್ದವು. ದೇವನಹಳ್ಳಿ ಭಾಗದಲ್ಲಿ ಬೆಳೆ ನೀರುಪಾಲಾಗಿ ರೈತರು ಕಂಗಾಲಾಗಿದ್ದಾರೆ.
ಬೆಳೆ ಸರ್ವನಾಶ: ಕಂಗಾಲಾದ ಅನ್ನದಾತ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಜ್ಜಳ್ಳ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿ ಆಗಿದೆ. ಕೊಡಗು ಜಿಲ್ಲೆಯಲ್ಲೂ ಕಾಫಿ, ಮೆಣಸು, ಭತ್ತ ಕಟಾವು ಮಾಡಿರುವ ರೈತರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಮೂಗ್ತಿಹಳ್ಳಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಅಪಾರ ಬೆಳೆ ನಾಶವಾಗಿದೆ. ಧಾರವಾಡದಲ್ಲಿ ಮಾವಿನ ಬೆಳೆಗೂ ಕುತ್ತು ತಂದಿದೆ.
ಇದನ್ನೂ ಓದಿ: ಮಂಗಳೂರಿನ ತಲಪಾಡಿಯಲ್ಲಿ ಮನೆ ಮೇಲೆ ತಡೆಗೋಡೆ ಕುಸಿತ; ಸ್ಥಳಕ್ಕೆ ಸ್ಪೀಕರ್ ಯುಟಿ ಖಾದರ್ ಭೇಟಿ
ಬಳ್ಳಾರಿ ಜಿಲ್ಲೆಯಲ್ಲಿ ಭತ್ತ, ಮೆಣಸಿನಕಾಯಿ ಬೆಳೆ ನೀರುಪಾಲಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಫೆಂಗಲ್ ಸೈಕ್ಲೋನ್ ಇನ್ನೇನು ಸಂಕಷ್ಟ ಸೃಷ್ಟಿಸುತ್ತದೆಯೋ ಎಂದು ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ