ಬೆಂಗಳೂರು ಸಂಧ್ಯಾ ಸಾವು: ಅಪಘಾತ ಪ್ರಕರಣದಲ್ಲಿ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು ಇದೇ ಮೊದಲು!
ಕುಡಿದು ವಾಹನ ಚಾಲನೆ ಮಾಡಿ ಫ್ಯಾಷನ್ ಡಿಸೈನರ್ ಸಂಧ್ಯಾರ ಪ್ರಾಣ ತೆಗೆದಿದ್ದ ಆರೋಪಿ ಧನುಷ್ ಜಾಮೀನುಗಾಗಿ ಹೈಕೋರ್ಟ್ ಮೆಟ್ಟಿಲು ಏರಿದ್ದಾನೆ. ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಧನುಷ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾನೆ.
ಬೆಂಗಳೂರು, ಡಿಸೆಂಬರ್ 04: ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಯುವತಿ ಸಂಧ್ಯಾರ ಪ್ರಾಣ ತೆಗೆದಿದ್ದ ಆರೋಪಿ ಧನುಷ್ ಜಾಮೀನಿಗಾಗಿ ಹೈಕೋರ್ಟ್ (High Court) ಮೆಟ್ಟಿಲು ಏರಿದ್ದಾನೆ. ಜಾಮೀನಿಗಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲು ಏರಿದ ಮೊದಲ ಅಪಘಾತ ಪ್ರಕರಣ ಇದಾಗಿದೆ. ಸಾಮಾನ್ಯವಾಗಿ ಅಪಘಾತ ಪ್ರಕರಣದಲ್ಲಿ ಸ್ಟೇಷನ್ ಕೋರ್ಟ್ನಲ್ಲಿ ಬೇಲ್ ಸಿಗುತ್ತೆ. ಆದರೆ, ಸೆಷನ್ಸ್ ಕೋರ್ಟ್ನಲ್ಲೂ ಧನುಷ್ ಜಾಮೀನು ಅರ್ಜಿ ವಜಾಗೊಂಡಿದೆ. ಒಂದು ವೇಳೆ ಬಂಧನವಾದರೂ ಮ್ಯಾಜಿಸ್ಟೇಟ್ ಕೋರ್ಟ್ನಲ್ಲಿ ಜಾಮೀನು ಸಿಗುತ್ತೆ. ಆದರೆ, ಸಂಧ್ಯಾ ಅಪಘಾತ ಪ್ರಕರಣದಲ್ಲಿ ಆರೋಪಿ ಧನುಷ್ಗೆ ಒಂದು ತಿಂಗಳಾದರೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ಧನುಷ್ ಹೈಕೋರ್ಟ್ ಮೆಟ್ಟಿಲು ಏರಿದ್ದಾನೆ.
ಏನಿದು ಪ್ರಕರಣ
ಫ್ಯಾಷನ್ ಡಿಸೈನರ್ ಆಗಿದ್ದ ಮೃತ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ (ನವೆಂಬರ್ 02) ರಂದು ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿ ಬೆಂಜ್ ಕಾರು ಚಲಾಯಿಸಿಕೊಂಡು ಬಂದ ಧನುಷ್ ಕೆಂಗೇರಿ ಬಸ್ ನಿಲ್ದಾಣದ ಬಳಿ ಬಂದಾಗ ಹಂಪ್ ಅನ್ನೂ ಎಗರಿಸಿ ಸಂಧ್ಯಾ ಅವರಿಗೆ ಡಿಕ್ಕಿ ಹೊಡೆದಿದ್ದನು.
ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿತ್ತು. ಕಾರು ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಧನುಷ್ ಪರಾರಿಯಾಗಲು ಯತ್ನಿಸಿದ್ದನು. ಆಗ, ಸ್ಥಳೀಯರು ಧನುಷ್ನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ಧನುಷ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಂಜ್ ಕಾರು ಡಿಕ್ಕಿ ಹೊಡೆದು ಸಂಧ್ಯಾ ಸಾವು ಪ್ರಕರಣ: ಮತ್ತಷ್ಟು ರೋಚಕ ಸಂಗತಿ ಬಯಲು
ಆರೋಪಿ ಧನುಷ್ ವಿರುದ್ಧ ಬಿಎನ್ಎಸ್ 281, 125 ಎ, 105, ಐಎಮ್ವಿ 185ರ ಅಡಿ ಕೇಸ್ ದಾಖಲಾಗಿದೆ. ಆರೋಪಿ ಧನುಷ್ಗೆ ಜಾಮೀನು ಸಿಗದಂತೆ ಕೆಂಗೇರಿ ಸಂಚಾರಿ ಪೊಲೀಸರು ಮ್ಯಾಜಿಸ್ಟೇಟ್ ಹಾಗೂ ಸೆಷನ್ಸ್ ಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪಿ ಧನುಷ್ಗೆ ಎರಡೂ ಕೋರ್ಟ್ನಲ್ಲಿ ಜಾಮೀನು ಸಿಕ್ಕಿಲ್ಲ. ಸದ್ಯ ಧನುಷ್ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ.
ಜಾಮೀನು ನೀಡದಂತೆ ಪೊಲೀಸರು ಸಲ್ಲಿಸಿರುವ ಪ್ರಮುಖ ಆಕ್ಷೇಪಣೆಗಳು
- ಅಪಘಾತ ಪ್ರಕರಣ ಸಂಬಂಧ FSL ವರದಿಗಳು ಬರಬೇಕಾಗಿದೆ.
- ಕುಡಿದು ವಾಹನ ಚಲಾಯಿಸಿರುವುದರಿಂದ ಆರೋಪಿ ರಕ್ತ ಮಾದರಿ ವರದಿ ಬರಬೇಕು.
- ಅಪಘಾತ ಸ್ಥಳ ಸೇರಿದಂತೆ ಕೆಲವು ಸ್ಥಳಗಳ ಸಿಸಿಟಿವಿ ದೃಶ್ಯಗಳ ವರದಿ ಬರಬೇಕು.
- ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷಿನಾಶಕ್ಕೆ ಯತ್ನಿಸುವ ಸಾಧ್ಯತೆ ಇದೆ.
- ತನಿಖೆ ಪ್ರಗತಿಯಲ್ಲಿ ಇರುವ ಕಾರಣ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 am, Wed, 4 December 24