ತೆಂಗು ಕೃಷಿಕನ ಕೈ ಹಿಡಿಯಲಿದೆ ಉಕಾಸ ಕಂಪನಿ; ಮಾರುಕಟ್ಟೆಗೆ ಕಲ್ಪರಸ ಬಿಡುಗಡೆ ಮಾಡಲು ಸಿದ್ಧತೆ
ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು, 14 ಯುವಕರಿಗೆ 45 ದಿನದ ತರಬೇತಿ ನಡೆಯುತ್ತಿದೆ. ತೆಂಗಿನ ಮರ ಹತ್ತುವ, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವುದು, ಜತೆಗೆ ದಿನಕ್ಕೆರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ.
ಉಡುಪಿ; ಅನೇಕ ರೈತರು ಕಲ್ಪ ವೃಕ್ಷ (ತೆಂಗು) ನಂಬಿ ಬದುಕು ಕಟ್ಟಿಕೊಂಡವರು ನಮ್ಮ ನಡುವೆ ಇದ್ದಾರೆ. ಆದರೆ ಇತ್ತೀಚೆಗೆ ನುಸಿರೋಗ, ಇಳುವರಿ ಇಳಿತದಿಂದ ರೈತರು ಸದಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದು ಕಡೆ ಕಾರ್ಮಿಕರ ಕೊರತೆ ತೆಂಗು ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ ಈಗ ಎಂಟು ತೆಂಗಿನ ಮರ ಇದ್ದರೆ ಸಾಕು ಲಕ್ಷ ಲಕ್ಷ ಸಂಪಾದಿಸಬಹುದು. ಕರ್ನಾಟಕದಲ್ಲಿ ಉಕಾಸ ಕಂಪನಿ ಆರಂಭವಾಗಿದ್ದು, ಕಲಿಯುಗದ ಕಲ್ಪರಸ ಕೃಷಿಕನ ಕೈ ಹಿಡಿಯಲಿದೆ. ಕೃಷಿಕ ತಿಂಗಳು ತಿಂಗಳು ಹೆಚ್ಚಿನ ಹಣ ಜೇಬಿಗಿಳಿಸಿಕೊಳ್ಳುವ ದಾರಿ ಇದಾಗಿದ್ದು, ತೆಂಗು ಬೆಳಗಾರರಿಗೆ ಹೊಸ ಆಶಾಕಿರಣ ಮೂಡಿದೆ.
ವೈಟ್ ಕಾಲರ್ ಜಾಬ್ ಮಾಡುವ ಪೇಟೆ ಜನ ಹಳ್ಳಿ ಕಡೆ ನೋಡುವ ಕಾಲ ಬಂದಿದೆ. ಇದಕ್ಕೆ ಕಾರಣ ಗ್ರೀನ್ ಕಾಲರ್ ಜಾಬ್ ಮಾಡಿ ತಾವೂ ಕೂಡ ಲಕ್ಷ ಲಕ್ಷ ದುಡಿಯಬಹುದು ಎಂಬುವುದನ್ನು ನಿರೂಪಿಸಿರುವುದೇ ಆಗಿದೆ. ತೆಂಗು ಬೆಳೆಗಾರರ ಹಿತರಕ್ಷಣೆ ಹಾಗೂ ತೆಂಗು ಉತ್ಪನ್ನಗಳ ಮೌಲ್ಯವರ್ಧನೆಗೆ ಉಡುಪಿಯಲ್ಲಿ ತೆಂಗಿನ ಕಲ್ಪರಸ ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿದೆ.
ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದ್ದು, 14 ಯುವಕರಿಗೆ 45 ದಿನದ ತರಬೇತಿ ನಡೆಯುತ್ತಿದೆ. ತೆಂಗಿನ ಮರ ಹತ್ತುವ, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವುದು, ಜತೆಗೆ ದಿನಕ್ಕೆರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ 1,028 ರೈತರು ಸಂಸ್ಥೆಗೆ ಶೇರುದಾರರಾಗಿದ್ದು, ಮುಂದಿನ 5 ವರ್ಷದಲ್ಲಿ 5 ಸಾವಿರ ಜನ ಸೇರ್ಪಡೆಯಾಗುವ ನಿರೀಕ್ಷೆ ಇದೆ.
ಒಂದು ರೈತ ಕುಟುಂಬಕ್ಕೆ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಿಸುವ ಅವಕಾಶವಿದೆ. ಒಂದು ಮರದಿಂದ ಪ್ರತಿದಿನ 2 ಲೀಟರ್ ಸಿಹಿರಸ ಇಳಿಯಲಿದೆ. ವರ್ಷಕ್ಕೆ 8 ಮರದಿಂದ 5,000 ಲೀಟರ್ ರಸ ಇಳಿದರೆ ವಾರ್ಷಿಕ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಕಲ್ಪರಸ ತೆಗೆಯುವ ತಜ್ಞ ಯುವಕರು ಲೀಟರ್ಗೆ 25 ರೂಪಾಯಿ, ಪಿಎಫ್, ಇಎಸ್ಐ ಸೌಲಭ್ಯ ಪಡೆಯಲಿದ್ದಾರೆ.
ಹೊಂಬಾಳೆಯಿಂದ ಪ್ರತಿದಿನ 2 ರಿಂದ 3 ಬಾರಿ ಕಲ್ಪರಸ ಇಳಿಸಬಹುದು. ಪ್ರತಿ ಗ್ರಾಮಗಳಲ್ಲಿ ಕನಿಷ್ಟ 20 ರಿಂದ 30 ಮಂದಿ ರೈತರನ್ನೊಳಗೊಂಡ ಸಹಕಾರ ಸಂಘ ರಚನೆಯಾದರೆ, ಪ್ರಧಾನಿ ಮೋದಿ ಹೇಳಿದಂತೆ ರೈತರ ವರಮಾನ ದುಪ್ಪಟ್ಟು ಹೆಚ್ಚಾಗಲಿದೆ. ಜತೆಗೆ ಅಬಕಾರಿ ಇಲಾಖೆ ತನ್ನ ಕಪಿಮುಷ್ಠಿ ಬಿಟ್ಟರೆ ರೈತರ ಬಾಳು ಬಂಗಾರವಾಗಲಿದೆ. ತೆಂಗು ಬೆಳೆಗಾರರ ಸಂಕಷ್ಟ ದೂರವಾಗುತ್ತದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ:
ವಿಶ್ವ ತೆಂಗು ದಿನ; ತೆಂಗಿನ ಕುರಿತಾಗಿ ತಿಳಿಯಲೇಬೇಕಾದ ಕೆಲವೊಂದಿಷ್ಟು ಕುತೂಹಲಕರ ಸಂಗತಿಗಳು ಇಲ್ಲಿವೆ