ಬೆಂಗಳೂರು: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಜನವರಿ 16 ಮತ್ತು 17ರಂದು ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹಲವು ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಕಾರ್ಯಗಳನ್ನೂ ಅಮಿತ್ ಶಾ ನೆರವೇರಿಸಲಿದ್ದಾರೆ. ಬೆಂಗಳೂರು, ಬೆಳಗಾವಿ, ಬಾಗಲಕೋಟೆ ಹಾಗೂ ಭದ್ರಾವತಿಗೆ ಭೇಟಿನೀಡಲಿದ್ದಾರೆ.
ಜನವರಿ 16, ಶನಿವಾರದಂದು ರಾಜ್ಯಕ್ಕೆ ಭೇಟಿ ನೀಡಲಿರುವ ಅಮಿತ್ ಶಾ, ದೆಹಲಿಯಿಂದ ಬೆಂಗಳೂರಿಗೆ ಬಂದು ಬಳಿಕ ಭದ್ರಾವತಿಗೆ ತೆರಳಲಿದ್ದಾರೆ. ಭದ್ರಾವತಿಯಲ್ಲಿ ಸರ್ಕಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಭದ್ರಾವತಿಯಿಂದ ಹೊರಟು ಬೆಂಗಳೂರು, ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ವಿಧಾನಸೌಧದಲ್ಲಿ ತುರ್ತು ಸ್ಪಂದನ ವಾಹನಗಳಿಗೆ (ERSS) ಚಾಲನೆ ನೀಡಲಿದ್ದಾರೆ. ನಂತರ, ಪೊಲೀಸ್ ಗೃಹ-2020 ಯೋಜನೆಯಡಿ ನಿರ್ಮಾಣಗೊಂಡಿರುವ ಪೊಲೀಸ್ ಕ್ವಾರ್ಟರ್ಸ್ ಹಾಗೂ ವಿಜಯಪುರ IRBಯನ್ನು ವರ್ಚುಯಲ್ ಆಗಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂಡಿಗೆ ಸಭೆ ನಡೆಸಲಿದ್ದಾರೆ.
ಭೇಟಿಯ ಎರಡನೇ ದಿನ, ಜನವರಿ 17, ಭಾನುವಾರದಂದು ಬೆಂಗಳೂರಿನಿಂದ ಬೆಳಗಾವಿಗೆ ತೆರಳಲಿದ್ದಾರೆ. ಬೆಳಗಾವಿಯಿಂದ ಬಾಗಲಕೋಟೆಗೆ ಬಂದು, ಅಲ್ಲಿ M/s MRN Ltd. ಸಂಸ್ಥೆಯ ಇತನಾಲ್ ಯೋಜನೆಯನ್ನು ಅರ್ಪಿಸಲಿದ್ದಾರೆ. ಬಳಿಕ, ಬೆಳಗಾವಿಯ KLE ಆಸ್ಪತ್ರೆಗೆ ಶಾ ಭೇಟಿ ನೀಡಲಿದ್ದಾರೆ. ನಂತರ ಬೆಳಗಾವಿಯ ಜೆಎನ್ಎಮ್ಸಿ ಮೈದಾನಕ್ಕೆ ತೆರಳಿ, ಜನ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಆನಂತರ ಕೊರೊನಾದಿಂದ ಮೃತರಾದ, ಮಾಜಿ ಲೋಕಸಭಾ ಸದಸ್ಯ ದಿವಂಗತ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿನೀಡಲಿದ್ದಾರೆ. ಬೆಳಗಾವಿಯ ಸಂಕಮ್ ಹೊಟೇಲ್ನಲ್ಲಿ ಜಿಲ್ಲೆಯ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಗಾವಿಯಿಂದ ನೇರವಾಗಿ ದೆಹಲಿಗೆ ಮರಳಲಿದ್ದಾರೆ.
Published On - 10:12 pm, Thu, 14 January 21