AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಪುಟ ಸಭೆ ಮುಂದೂಡಿ ಧರಣಿ ನಡೆಸಿದ್ದು ಕರಾಳ ಇತಿಹಾಸ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ಚುನಾವಣಾ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ನಡೆಸಿದ ಧರಣಿ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಫಾರಂ-7 ದುರ್ಬಳಕೆ ಆರೋಪಿಸಿ ಕಾಂಗ್ರೆಸ್ ಧರಣಿ ನಡೆಸಿದ ಬೆನ್ನಲ್ಲೇ ಫಾರಂ-7 ಅರ್ಜಿಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಸಂಪುಟ ಸಭೆ ಮುಂದೂಡಿ ಧರಣಿ ನಡೆಸಿದ್ದು ಕರಾಳ ಇತಿಹಾಸ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ
Pralhad Joshi
ರಮೇಶ್ ಬಿ. ಜವಳಗೇರಾ
|

Updated on: Oct 02, 2026 | 7:54 PM

Share

ಹುಬ್ಬಳ್ಳಿ, (ಅಕ್ಟೋಬರ್ 2): “ರಾಹುಲ್ ಗಾಂಧಿಯನ್ನು ಸಂಪ್ರೀತಗೊಳಿಸಲು ಮತ್ತು ಸಿಎಂ ಕುರ್ಚಿ ಉಳಿಸಿಕೊಳ್ಳಲು ಡಿಕೆ ಶಿವಕುಮಾರ್ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿಯ ಪ್ರಹಸನ ನಡೆಸಿದ್ದಾರೆ” ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಹೀಗೆ ಧರಣಿ ನಡೆಸಿರುವುದು ದೇಶದಲ್ಲೇ ಒಂದು ಕರಾಳ ಇತಿಹಾಸವಾಗಿದೆ ಎಂದರು.

ಸಿಎಂ ಡಿಕೆಶಿ ಮತ್ತವರ ಸಂಪುಟದ ಸಚಿವರು ಪೂರ್ವಾನುಮತಿ ಪಡೆಯದೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಅರವಿಂದ ಕೇಜ್ರಿವಾಲ್ ಬಿಟ್ಟರೆ ಇದೀಗ ಒಬ್ಬ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಸಂವಿಧಾನ ಮತ್ತು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ನಡೆಸುತ್ತಿರುವ ಎಸ್ ಐ ಆರ್ ಪ್ರಕ್ರಿಯೆ ವಿರೋಧಿಸಿ ದೇಶದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ ಕಾಂಗ್ರೆಸ್ಸಿಗರು ಎಂದು ಜೋಶಿ ಹರಿಹಾಯ್ದರು.

ಸಿಎಂ ಮೇಲೆ ಎಫ್ ಐ ಆರ್ ಹಾಕಲೇಬೇಕು

ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ. ಅಲ್ಲದೆ, ಪೂರ್ವಾನುಮತಿ ಕಡ್ಡಾಯವೆಂದು ಈ ಸರ್ಕಾರವೇ ಆದೇಶ ಹೊರಡಿಸಿದೆ. ಹೀಗಿರುವಾಗ ಸಿಎಂ ಡಿಕೆ ಶಿವಕುಮಾರ್ ಮತ್ತವರ ತಂಡ ಹೇಗೆ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು? ಈ ಸಂಬಂಧ ಸಿಎಂ ಮತ್ತು ಸಚಿವರ ಮೇಲೆ ರಾಜ್ಯ ಪೊಲೀಸ್ ಮುಖ್ಯಸ್ಥರು ಎಫ್ ಐ ಆರ್ ಹಾಕಲೇಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಎಸ್​​ಐಆರ್ ಫಾರ್ಮ್ 7 ವಾರ್: ಸಿಎಂ ಡಿಕೆ ಶಿವಕುಮಾರ್, ಸಚಿವರ ವಿರುದ್ಧ ಬಿಜೆಪಿ ದೂರು

2.37 ಕೋಟಿ ಯುವಕರ ಸೇರ್ಪಡೆ

ರಾಜ್ಯ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೇ ಹೋದರೆ ಡಿಜಿಪಿ ಕಚೇರಿ ಎದುರು ಬಿಜೆಪಿ ಸಹ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಲಿದೆ. ತಮ್ಮವರು ಮಸೀದಿಯಲ್ಲಿ ಕುಳಿತು ಎಸ್ ಐ ಆರ್ ತುಂಬಿಲ್ಲವೇ? ಎಂದು ಪ್ರಶ್ನಿಸಿದ ಜೋಶಿ, ಮತದಾರ ಅರ್ಹನಾಗಿದ್ದರೆ ಯಾರೂ ಕೂಡ ಮತ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಸಾಧ್ಯವಿಲ್ಲ. ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಸುಲಭ. ಆದರೆ, ರದ್ದುಪಡಿಸುವುದು ಅಷ್ಟು ಸರಳವಿಲ್ಲ. ದೇಶದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಶುರುವಾದ ಬಳಿಕ 18 ವರ್ಷ ತುಂಬಿದ 2.37 ಕೋಟಿ ಯುವ ಜನರ ಹೆಸರು ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದ ಸಚಿವರು, ಕಾಂಗ್ರೆಸ್ ತನ್ನ ಅಕ್ರಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಎಸ್ ಐ ಆರ್ ಗೆ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ವಿದೇಶಿ ಪ್ರಜೆಗಳ ಮತಬ್ಯಾಂಕ್ ಗಾಗಿ ಕಾಂಗ್ರೆಸ್ ಹೋರಾಟ

ಬಾಂಗ್ಲಾ, ಪಾಕಿಸ್ತಾನದಂತಹ ವಿದೇಶಿ ಪ್ರಜೆಗಳ ತನ್ನ ಮತ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್ ಇದನ್ನೆಲ್ಲ ಮಾಡುತ್ತಿದೆ. ದೇಶ ಹಾಳಾದರೂ ಚಿಂತೆಯಿಲ್ಲ. ಬಾಂಗ್ಲಾದಿಂದ ಬಂದವರು, ಪಾಕಿಸ್ತಾನಿ ಪ್ರಜೆಗಳು ತಮ್ಮ ಮತದಾರರಾಗಬೇಕು ಎಂಬುದು ಕಾಂಗ್ರೆಸ್ ಇಚ್ಛೆಯಾಗಿದೆ. ಚುನಾವಣೆ ಬಂದಾಗ ಮತದಾರರ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಚುನಾವಣಾ ಆಯೋಗ ಮತದಾರರ ಮುದ್ರಿತ ಮತ್ತು ಡಿಜಿಟಲ್ ಪ್ರತಿಯನ್ನು ನೋಂದಾಯಿತ ಎಲ್ಲಾ ಪಕ್ಷಗಳಿಗೂ ಕೊಡುತ್ತದೆ. ಸಂದೇಹಾಸ್ಪದ ಇದರ ದೂರು ನೀಡಲು ಮುಕ್ತ ಅವಕಾಶವಿದೆ ಎಂದು ವಾಗ್ದಾಳಿ ನಡೆಸಿದರು.

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಮತದಾರರ ಹೆಸರು ಕಡಿತ ಅಷ್ಟು ಸರಳವಿಲ್ಲ. ಬಿಎಲ್ ಒ, ಬಿಎಲ್ಎಗಳು ಪ್ರತಿ ಹಂತದಲ್ಲೂ ಸ್ಥಳ ಪರಿಶೀಲನೆ, ಮಹಜರು ನಡೆಸುತ್ತಾರೆ. ಚುನಾವಣಾಧಿಕಾರಿ ಬಳಿ ಫಾರಂ ನಂಬರ್ 7 ಹೋದರೂ ಸರಿ ಇಲ್ಲದಿದ್ದರೆ ಅಲ್ಲೇ ತಿರಸ್ಕರಿಸುತ್ತಾರೆ. ನೋಟಿಸ್ ನೀಡಿ, ಮತದಾರ ಹಾಜರಾದರೆ ಸ್ಥಳದಲ್ಲೇ ಮುಂದಿನ ಕ್ರಮ ಜರುಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More