AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಹೃದಯಾಘಾತದಿಂದ ಅಸ್ಪತ್ರೆ ಸೇರಿದರು ಸೋಂಕಿತರ ಆರೈಕೆಯಲ್ಲಿ ನಿರತರಾಗಿರುವ ಉತ್ತರ ಕನ್ನಡದ ವೈದ್ಯ

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರಿಂದ ಹಿಡಿದು ಕಾರವಾರದಲ್ಲಿ ಸೋಂಕು ಧೃಡಪಟ್ಟ ಬಹುತೇಕರಿಗೆ ಶ್ರೀನಿವಾಸ್ ರವರೇ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ.

ತಂದೆ ಹೃದಯಾಘಾತದಿಂದ ಅಸ್ಪತ್ರೆ ಸೇರಿದರು ಸೋಂಕಿತರ ಆರೈಕೆಯಲ್ಲಿ ನಿರತರಾಗಿರುವ ಉತ್ತರ ಕನ್ನಡದ ವೈದ್ಯ
ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ್
preethi shettigar
|

Updated on: Apr 30, 2021 | 4:06 PM

Share

ಉತ್ತರ ಕನ್ನಡ: ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಇಡೀ ದೇಶವೇ ನಲುಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಒಂದೆಡೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಸಾವಿನ ಸಂಖ್ಯೆ ಸಹ ಈ ಬಾರಿ ಹೆಚ್ಚಾಗಿರುವುದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಇದರ ನಡುವೆ ಉತ್ತರ ಕನ್ನಡದ ವೈದ್ಯ ತನ್ನ ತಂದೆಗೆ ಹೃದಯ ಚಿಕಿತ್ಸೆಯಾಗಿದ್ದರು, ಕೊರೊನಾ ಸೋಂಕಿತರ ಸೇವೆಯೇ ಮುಖ್ಯ ಎಂದು ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಮಗ್ನರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ್ ಈ ಹಿಂದೆ ಮಂಗಳೂರಿನ ಪ್ರಸಿದ್ಧ ಎಜೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಆರು ತಿಂಗಳಿನಿಂದ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಶ್ವಾಸಕೋಶ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಹಲವರಿಗೆ ಚಿಕಿತ್ಸೆ ನೀಡಿ ಗುಣ ಮಾಡಿದ್ದ ವೈದ್ಯ ಶ್ರೀನಿವಾಸ್, ಸದ್ಯ ಎರಡನೇ ಅಲೆಯಲ್ಲಿ ಸುಮಾರು 250ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ.

ವೈದ್ಯ ಶ್ರೀನಿವಾಸ್ ತಂದೆಗೆ ವಾರದ ಹಿಂದೆ ಹಾರ್ಟ್ ಅಟ್ಯಾಕ್ ಆಗಿದ್ದು, ತಕ್ಷಣ ಬೆಳಿಗ್ಗೆ ಕಾರವಾರದಿಂದ ಶಿವಮೊಗ್ಗಕ್ಕೆ ತೆರಳಿ ತಂದೆಯ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಅಲ್ಲೇ ಖಾಸಗಿ ಆಸ್ಪತ್ರೆಯೊಂದಲ್ಲಿ ಅಡ್ಮಿಟ್ ಮಾಡಿ ಮನೆಯವರಿಗೆ ತಂದೆಯನ್ನ ಆರೈಕೆ ಮಾಡುವಂತೆ ತಿಳಿಸಿ ಸಂಜೆಯೇ ಕಾರವಾರಕ್ಕೆ ವಾಪಾಸ್ ಆಗಿದ್ದು, ಕೊರೋನಾ ಸೋಂಕಿತರ ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಗಜಾನನ ನಾಯಕ ತಿಳಿಸಿದ್ದಾರೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡುವಲ್ಲಿ ಶ್ವಾಸಕೋಶ ತಜ್ಞರ ಪಾತ್ರ ಪ್ರಮುಖವಾಗಿರುತ್ತದೆ. ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರೇ ತಜ್ಞರಿದ್ದು, ಅದರಲ್ಲಿ ನಾನು ಕೂಡ ಒಬ್ಬ. ತಂದೆಯ ಆರೈಕೆ ಎಂದು ಊರಲ್ಲಿ ಉಳಿದರೆ ಕಾರವಾರದಲ್ಲಿ ಸೋಂಕಿಗೆ ಒಳಗಾದವರಿಗೆ ಯಾರು ಚಿಕಿತ್ಸೆ ಕೊಡುತ್ತಾರೆ ಎಂದು ಓಂದೇ ದಿನಕ್ಕೆ ಶಸ್ತ್ರ ಚಿಕಿತ್ಸೆಗೆ ಓಳಗಾಗಿದ್ದ ತಂದೆಯನ್ನ ಬಿಟ್ಟು ವಾಪಾಸ್ ಕಾರವಾರಕ್ಕೆ ಬಂದಿದ್ದೇನೆ ಎಂದು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞ ಡಾ. ಶ್ರೀನಿವಾಸ್ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರಿಂದ ಹಿಡಿದು ಕಾರವಾರದಲ್ಲಿ ಸೋಂಕು ಧೃಡಪಟ್ಟ ಬಹುತೇಕರಿಗೆ ಶ್ರೀನಿವಾಸ್ ರವರೇ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ. ಡಾ. ಶ್ರೀನಿವಾಸ್ ಸೇವೆಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ ಸೇರಿ ಎಲ್ಲಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕಾರವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರತಿದಿನ ಸೋಂಕಿತರಿಗೆ ಚಿಕಿತ್ಸೆ ಕೊಡುವಲ್ಲಿಯೇ ನಿರತರಾಗಿರುವುದರಿಂದ ವೈದ್ಯ ಶ್ರೀನಿವಾಸ್​ಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ತಂದೆಯನ್ನ ನೋಡಿಕೊಂಡು ಬರಲು ಆಗುತ್ತಿಲ್ಲ ಎನ್ನುವ ಬೇಸರ ಕಾಡುತ್ತಿದೆಯಂತೆ. ಒಟ್ಟಿನಲ್ಲಿ ತಾನಾಯಿತು ತನ್ನ ಕುಟುಂಬವಾಯಿತು ಎನ್ನುವ ಮನೋಭಾವನೆ ಹೊಂದಿರುವುವರ ನಡುವೆ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ತಂದೆ ದಾಖಲಾಗಿದ್ದರೂ ತಂದೆಯನ್ನ ಆರೈಕೆ ಮಾಡಲು ಮನೆಯವರನ್ನ ಬಿಟ್ಟು ಜನರ ರಕ್ಷಣೆಗೆ ನಿಂತಿರುವ ವೈದ್ಯ ಶ್ರೀನಿವಾಸ್ ಕಾರ್ಯ ನಿಜಕ್ಕೂ ಮಾದರಿ ಎಂದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ:

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕಾಮಿಡಿ ಕರ್ಫ್ಯೂ, ಇಂಥಾ ಲಾಕ್​ಡೌನ್​ನಿಂದ ಕೊರೊನಾ ಕಟ್ಟಿ ಹಾಕೋಕೆ ಸಾಧ್ಯನಾ?

ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿದವರ ವಿರುದ್ಧ ದೂರು ದಾಖಲಿಸುವಂತಿಲ್ಲ: ಸುಪ್ರೀಂಕೋರ್ಟ್

(Uttara Kannada Doctor Srinivas busy in treating Covid patients though his father admitted to hospital followed by heart attack)