ವಾರಾಂತ್ಯ ಕರ್ಫ್ಯೂ, ಲಾಕ್ಡೌನ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ವಿರೋಧ: ಜನರ ಸಂಕಷ್ಟದ ಪ್ರಸ್ತಾಪ
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್ ಅಥವಾ ರಾತ್ರಿಕರ್ಫ್ಯೂ ಪರಿಹಾರವಲ್ಲ. ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ತಿಳಿಸಿದರು.
ಕಾರವಾರ: ಕರ್ನಾಟಕದಲ್ಲಿ ಕೊರೊನಾ 3ನೇ (Coronavirus 3rd Wave) ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸರ್ಕಾರವು ಜಾರಿಗೊಳಿಸಿರುವ ನಿರ್ಬಂಧಗಳಿಂದ ಸಾಮಾನ್ಯ ಜನರ ಬದುಕಿನ ಮೇಲೆ ಹಲವು ದುಷ್ಪರಿಣಾಮ ಉಂಟಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಬಿಜೆಪಿಯ (BJP) ಪ್ರಮುಖ ನಾಯಕ ಸಿ.ಟಿ.ರವಿ (C.T.Ravi) ಸಹ ಇಂಥದ್ದೇ ಅಭಿಪ್ರಾಯವನ್ನು ಮಂಗಳವಾರ ವ್ಯಕ್ತಪಡಿಸಿದ್ದಾರೆ. ಗೋವಾ ರಾಜಧಾನಿ ಪಣಜಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಕೊರೊನಾ ತಡೆಗೆ ಇಂಥ ನಿರ್ಬಂಧಗಳು ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್ ಅಥವಾ ರಾತ್ರಿಕರ್ಫ್ಯೂ ಪರಿಹಾರವಲ್ಲ. ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ನಿರ್ಧಾರ ಬದಲಿಸಬೇಕು ಎಂದು ಹೇಳಿದರು. ನಾನು ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿಲ್ಲ. ನಿರ್ಬಂಧಗಳು ಹೆಚ್ಚಾದರೆ, ಈಗಿನ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು, ಚಿಂತನೆ ನಡೆಸಬೇಕು ಎಂದು ನುಡಿದರು. ಲಾಕ್‍ಡೌನ್ ಮತ್ತು ನೈಟ್ಕರ್ಫ್ಯೂ ವಿಧಿಸುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಜನರ ಪರಿಸ್ಥಿತಿಯ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಪರಿಸ್ಥಿತಿ ಪರಾಮರ್ಶಿಸಿ ತಜ್ಞರ ಸಲಹೆ ಪಡೆದು ಕ್ರಮಕೈಗೊಳ್ಳಬೇಕು. ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದು ನುಡಿದರು.
3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು ಕರ್ನಾಟಕದಲ್ಲಿ ಕೊರೊನಾ ಸೋಂಕಿನ 3ನೇ ಅಲೆಯು ಉತ್ತುಂಗಕ್ಕೆ ಹೋದಾಗ ಪ್ರತಿದಿನ ಸರಾಸರಿ 80 ಸಾವಿರದಿಂದ 1.20 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ಈ ವಿಷಯವನ್ನು ತಜ್ಞರ ವರದಿ ತಿಳಿಸಿದೆ. ವರದಿಯಲ್ಲಿ ಉಲ್ಲೇಖಿಸಿರುವಂತೆಯೇ ಪ್ರಸ್ತುತ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಏರಿದಷ್ಟೇ ವೇಗವಾಗಿ ಸೋಂಕು ಪ್ರಕರಣಗಳು ಇಳಿಯಬಹುದು. ಫೆಬ್ರುವರಿ 2 ಅಥವಾ 3ನೇ ವಾರದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಪ್ರತಿದಿನ 2ರಿಂದ 2.50 ಲಕ್ಷ ಟೆಸ್ಟ್ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊವಿಡ್ ಕೇಸ್ ಹೆಚ್ಚಾಗುತ್ತಿದೆ. ಇಂದು ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದು, ಸಾವಿನ ಪ್ರಮಾಣ ಕಡಿಮೆಯಾಗಿದೆ. ವೀಕೆಂಡ್ ಕರ್ಫ್ಯೂ ಬಗ್ಗೆ ಶುಕ್ರವಾರದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಮುಂದಿನ ಕ್ರಮಗಳ ಬಗ್ಗೆ ತೀರ್ಮಾಣ ತೆಗೆದುಕೊಳ್ಳುತ್ತೇವೆ ಎಂದು ಅವರು ವಿವರಿಸಿದರು. ಮಾಸ್ಕ್ ಬೇಡ ಎಂಬ ಸಚಿವ ಉಮೇಶ್ ಕತ್ತಿ ಹೇಳಿಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಅವರೇ ಮತ್ತೆ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ ಎಂದರು.
ಬೆಂಗಳೂರು ನಗರದಲ್ಲಿ ಇಂದು 25,595 ಕೊರೊನಾ ಪ್ರಕರಣ ಪತ್ತೆಯಾಗಿವೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ 16 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಜನರು ಕೊರೊನಾ ನಿಯಮಗಳನ್ನು ಪಾಲಿಸಿಬೇಕು. ರಾಜ್ಯದಲ್ಲಿ ಇಂದು ಒಟ್ಟು 41,457 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ 22.03ರಷ್ಟಿದೆ. ಲಸಿಕೆ ಪಡೆಯದವರ ಮೇಲೆ ಈ ಬಾರಿ ವೈರಸ್ ಪ್ರಭಾವ ಹೆಚ್ಚು ಎಂದು ಹೇಳಿದರು.
ಇದನ್ನೂ ಓದಿ: ಗೋವಾದಲ್ಲಿ 13 ಅಂಶಗಳ ಚುನಾವಣಾ ಅಜೆಂಡಾ ಪ್ರಕಟಿಸಿದ ಅರವಿಂದ ಕೇಜ್ರಿವಾಲ್ ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 41,457 ಮಂದಿಗೆ ಕೊರೊನಾ ಸೋಂಕು, ಕೊವಿಡ್ನಿಂದ 20 ಜನರು ಸಾವು
Published On - 9:40 pm, Tue, 18 January 22