ಉತ್ತರ ಕನ್ನಡ: ಪ್ರಕೃತಿ ಮಡಿಲಲ್ಲಿ ಅರಳಿ ನಿಂತ ಚಿಟ್ಟೆ ಪಾರ್ಕ್​; ಒಂದೇ ಕಡೆ 300 ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳ ದರ್ಶನ

ಉತ್ತರ ಕನ್ನಡ: ಪ್ರಕೃತಿ ಮಡಿಲಲ್ಲಿ ಅರಳಿ ನಿಂತ ಚಿಟ್ಟೆ ಪಾರ್ಕ್​; ಒಂದೇ ಕಡೆ 300 ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳ ದರ್ಶನ
ಚಿಟ್ಟೆಗಳು

ಚಿಟ್ಟೆಗಳು ಸಂತಾನವೃದ್ಧಿ ಹಾಗೂ ಆಹಾರ ಕೊರತೆ ನೀಗಿಸಲು ಇಲ್ಲಿ ಲಿಪ್ಪರ್ ಪ್ಲಾಂಟ್ ಹಾಗೂ ಹೋಸ್ಟ್ ಪ್ಲಾಂಟ್​ಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಚದುರಿ ಹೋಗುವ ಚಿಟ್ಟೆಗಳು ಹೇರಳ ಆಹಾರ ಸಿಗುವ ಈ ಪಾರ್ಕ್​ನಲ್ಲಿ ಹೆಚ್ಚು ನೆಲಸುತ್ತವೆ. ಜೊತೆಗೆ ಇಲ್ಲಿ ಬೆಳೆದ ಗಿಡಗಳಲ್ಲಿ ಸಂತಾನವೃದ್ಧಿ ಮಾಡುತ್ತವೆ. ಇದರಿಂದಾಗಿ ಚಿಟ್ಟೆ ಸಂತತಿ ಸಹ ವೃದ್ಧಿಯಾಗುತ್ತದೆ.

TV9kannada Web Team

| Edited By: preethi shettigar

Jan 30, 2022 | 4:00 PM

ಉತ್ತರ ಕನ್ನಡ: ಹಾರುವ ಹೂವುಗಳು ಎಂದು ಕರೆಸಿಕೊಳ್ಳುವ ಚಿಟ್ಟೆಗಳು(Butterflies) ಬಹುತೇಕ ಎಲ್ಲೆಡೆ ಕಾಣಿಸುತ್ತವೆ‌. ಅವುಗಳ ಬಣ್ಣಕ್ಕೆ(Color) ಮಾರು ಹೋಗದ ಜನರಿಲ್ಲ. ಕೇವಲ ಅಲ್ಪ ಅವಧಿಯಲ್ಲಿ ಬದುಕು ಕಟ್ಟಿ ಎಲ್ಲರ ಪ್ರೀತಿ ಸಂಪಾದಿಸುವ ಈ ಚಿಟ್ಟೆಗಳ ಬಗ್ಗೆ ಬಹುತೇಕರಿಗೆ ಕುತೂಹಲ ಆಸಕ್ತಿ ಕೆರಳದೇ ಇರದು. ಹೀಗೆ ಕುತೂಹಲ ಆಸಕ್ತಿ ನಿಮ್ಮಲ್ಲಿ ಇದ್ದರೇ ನೀವು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಿಟ್ಟೆ ಪಾರ್ಕ್​ಗೆ(Butterfly park) ಒಮ್ಮೆ ಭೇಟಿ ಕೊಡಲೇ ಬೇಕು. ಯಾಕೆ?  ಇಲ್ಲಿ ಏನು ವಿಶೇಷ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಅಪಾರ ಜೀವ ವೈವಿದ್ಯವನ್ನು ಹೊಂದಿದೆ. ದೇಶದ ಬಹುತೇಕ ಪ್ರಭೇದದ ಚಿಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭಾಗದಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಅರಣ್ಯ ಇಲಾಖೆ ಇವುಗಳ ರಕ್ಷಣೆ, ಪೋಷಣೆಗೆ ಇಳಿದಿದೆ. ಜಿಲ್ಲೆಯ ಜೋಯಿಡಾದಲ್ಲಿ ಚಿಟ್ಟೆಗಳ ಅಭಿವೃದ್ಧಿ, ಪೋಷಣೆಗಾಗಿ ಚಿಟ್ಟೆ ಪಾರ್ಕ್​ ಅನ್ನು ಇಲಾಖೆ ನಿರ್ಮಿಸಿ ಯಶಸ್ಸು ಕಂಡಿದೆ.

ಇದೀಗ ಕಾರವಾರ ತಾಲೂಕಿನ ಗೋಟಗಾಳಿಯಲ್ಲಿ ಎರಡುವರೆ ಎಕರೆ ವಿಸ್ತೀರ್ಣದಲ್ಲಿ ಚಿಟ್ಟೆ ಪಾರ್ಕ್​ ನಿರ್ಮಿಸಿದೆ‌. ದೇಶದಲ್ಲಿ 1500 ವಿವಿಧ ಪ್ರಭೇದದ ಜಿಟ್ಟೆಗಳಿದ್ದು, ರಾಜ್ಯದಲ್ಲಿ 350 ಪ್ರಭೇದಕ್ಕೂ ಹೆಚ್ಚು ಚಿಟ್ಟೆಗಳು ಕಾಣಸಿಗುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಶ್ರೇಣಿಯ ಜೋಯಿಡಾ, ದಾಂಡೇಲಿ, ಕಾರವಾರದಲ್ಲಿ 312 ಪ್ರಬೇಧದ ಚಿಟ್ಟೆಗಳನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ಚಿಟ್ಟೆಗಳು ಅಗಾದ ಪ್ರಮಾಣದಲ್ಲಿ ಇದ್ದರೂ ಇವುಗಳನ್ನು ನೋಡಬೇಕು ಎಂದರೆ ಅರಣ್ಯ ಪ್ರವೇಶಿಸಬೇಕು. ಹೀಗಾಗಿ ಇದೀಗ ಅರಣ್ಯ ಇಲಾಖೆ ಕಾರವಾರ ತಾಲೂಕಿನ ಗೋಟಗಾಳಿಯಲ್ಲಿ ಚಿಟ್ಟೆ ಪಾರ್ಕ್​ ನಿರ್ಮಿಸಿದೆ.

300 ಕ್ಕೂ ಹೆಚ್ಚು ವಿವಿಧ ಚಿಟ್ಟೆಗಳ ದರ್ಶನ

ಚಿಟ್ಟೆಗಳು ಸಂತಾನವೃದ್ಧಿ ಹಾಗೂ ಆಹಾರ ಕೊರತೆ ನೀಗಿಸಲು ಇಲ್ಲಿ ಲಿಪ್ಪರ್ ಪ್ಲಾಂಟ್ ಹಾಗೂ ಹೋಸ್ಟ್ ಪ್ಲಾಂಟ್​ಗಳನ್ನು ಬೆಳೆಸಲಾಗಿದೆ. ಇದರಿಂದಾಗಿ ಚದುರಿ ಹೋಗುವ ಚಿಟ್ಟೆಗಳು ಹೇರಳ ಆಹಾರ ಸಿಗುವ ಈ ಪಾರ್ಕ್​ನಲ್ಲಿ ಹೆಚ್ಚು ನೆಲಸುತ್ತವೆ. ಜೊತೆಗೆ ಇಲ್ಲಿ ಬೆಳೆದ ಗಿಡಗಳಲ್ಲಿ ಸಂತಾನವೃದ್ಧಿ ಮಾಡುತ್ತವೆ. ಇದರಿಂದಾಗಿ ಚಿಟ್ಟೆ ಸಂತತಿ ಸಹ ವೃದ್ಧಿಯಾಗುತ್ತದೆ.

ಸದ್ಯ ಈ ಭಾಗದಲ್ಲಿ ಕತ್ತಿ ಬಾಲದ ಚಿಟ್ಟೆ, ಸ್ವರ್ಣ ಚಿಟ್ಟೆ, ನವಿಲು ಚಿಟ್ಟೆ, ನೀಲ ಸುಂದರಿ ಚಿಟ್ಟೆ, ಮಲಬಾರ್ ರೋಜ್ ಚಿಟ್ಟೆಗಳು ಕಾಣಸಿಗುತ್ತವೆ. ದೇಶದಲ್ಲೇ ಅತೀ ದೊಡ್ಡ ಚಿಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕತ್ತಿ ಬಾಲದ ಚಿಟ್ಟೆ ಸಹ ಇಲ್ಲಿ ನೋಡಲು ಸಿಗುತ್ತವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ‌ ವಸಂತ್ ರೆಡ್ಡಿ ತಿಳಿಸಿದ್ದಾರೆ.

butterfly park

ಚಿಟ್ಟೆ ಪಾರ್ಕ್

ಪ್ರವಾಸಿಗರಿಗೆ ಹಾಗೂ ಚಿಟ್ಟೆ ಅಧ್ಯಯನಕಾರರಿಗೆ ಸಹಾಯವಾಗಲು ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಿದೆ‌. ಇದರ ಜೊತೆ ಮಕ್ಕಳಿಗಾಗಿ ಪಾರ್ಕ್​ ಸಹ ಇದರಲ್ಲಿ ತಲೆ ಎತ್ತಿದೆ. ಇನ್ನು ಪಕ್ಷಿಗಳಿಗೂ ಸಹ ಬಾಯಾರಿಕೆ ನೀಗಲು ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು, ಸುಂದರವಾಗಿ ಪಾರ್ಕ್​ ನಿರ್ಮಾಣವಾಗಿದೆ. ಇದೀಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಎಂದು ಚಿಟ್ಟೆ ಪಾರ್ಕ್ ಉದ್ಘಾಟನೆ ಮಾಡಿ ಗಣಪತಿ ಉಳ್ವೇಕರ್ ಮಾತನಾಡಿದ್ದಾರೆ‌.

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರಿಗೆ ಒಂದು ಸ್ವಗ೯ ಇದ್ದಂತೆ. ಸ್ವರ್ಗಕ್ಕೆ ಮತ್ತೊಂದು ಮೇರಗು ಎಂಬಂತೆ ಈ ಚಿಟ್ಟೆ ಪಾಕ್೯. ಮಕ್ಕಳು ಸಂಜೆ ವೇಳೆಯಲ್ಲಿ ಚಿಟ್ಟೆಗಳೊಂದಿಗೆ ಆಡುವುದನ್ನು ನೋಡುವುದೆ ಚೆಂದ. ನೀವು ಒಮ್ಮೆ ಚಿಟ್ಟೆ ಪಾಕ್೯ಗೆ ಭೇಟಿ ನೀಡಿ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ: ಬನ್ನೇರುಘಟ್ಟ ಚಿಟ್ಟೆ ಉದ್ಯಾನಕ್ಕೆ ಬಂದ ಸ್ಪೆಷಲ್ ಅತಿಥಿ; ಅಟ್ಲಾಸ್ ಪತಂಗ ನೋಡಲು ಮುಗಿಬಿದ್ದ ಜನತೆ

KBC 13: ₹ 50 ಲಕ್ಷ‌ ಮೊತ್ತದ ಚಿಟ್ಟೆಗಳ ಕುರಿತ ಈ ಕುತೂಹಲಕರ ಪ್ರಶ್ನೆಗೆ ಸ್ಪರ್ಧಿಗೆ ಉತ್ತರ ತಿಳಿಯಲಿಲ್ಲ; ನಿಮಗೆ ತಿಳಿದಿದೆಯೇ?

Follow us on

Most Read Stories

Click on your DTH Provider to Add TV9 Kannada