
ಉತ್ತರ ಕನ್ನಡ, ಮೇ 14: ಸರಕು-ಸಾಗಾಣಿಕೆ ಹಡಗಿನಲ್ಲಿ (Cargo Ship) ಕಾರವಾರಕ್ಕೆ (Karwar) ಆಗಮಿಸಿದ್ದ ಪಾಕಿಸ್ತಾನ ಪ್ರಜೆಯನ್ನು (Pakistani citizen) ಕರಾವಳಿ ಕಾವಲುಪಡೆ ಪೊಲೀಸರು (Coast Guard Police) ವಾಪಸ್ ಕಳುಹಿಸಿದ್ದಾರೆ. ಮೇ 12 ರಂದು ಬಿಟುಮಿನ್ ತುಂಬಿಕೊಂಡು ಇರಾಕ್‌ನಿಂದ ಕಾರವಾರಕ್ಕೆ ಎಂಟಿ ಆರ್. ಓಶಿಯನ್ ಎಂಬ ಹೆಸರಿನ ಹಡಗು ಬಂದಿತ್ತು. ಹಡಗಿನಲ್ಲಿ 15 ಮಂದಿ ಭಾರತೀಯರು ಮತ್ತು ಇಬ್ಬರು ಸಿರಿಯಾ ಪ್ರಜೆಗಳಿದ್ದರು. ಇವರ ಜೊತೆ ಓರ್ವ ಪಾಕಿಸ್ತಾನ ಪ್ರಜೆ ಕೂಡ ಇದ್ದನು. ಈ ವಿಚಾರ ತಿಳಿದು ಬಂದರು ಇಲಾಖೆ ಅಧಿಕಾರಿಗಳು, ಕರಾವಳಿ ಕಾವಲುಪಡೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಕೂಡಲೆ, ಕರಾವಳಿ ಕಾವಲುಪಡೆ ಪೊಲೀಸರು ಬಂದರಿಗೆ ತೆರಳಿ ಪಾಕಿಸ್ತಾನ ಪ್ರಜೆ ಹಡಗಿನಿಂದ ಕೆಳಗೆ ಇಳಿಯದಂತೆ ತಡೆದಿದ್ದಾರೆ. ನಂತರ, ಆತನ ಮೊಬೈಲ್ ಮತ್ತು ದಾಖಲೆಗಳನ್ನು ಹಡಗಿನ ಕ್ಯಾಪ್ಟನ್ ಮುಖಾಂತರ ಜಪ್ತಿ ಮಾಡಿಕೊಂಡಿದ್ದಾರೆ. ಎರಡು ದಿನಗಳ ಕಾಲ ಬಿಟುಮಿನ್ ಅನ್‌ಲೋಡ್ ಮಾಡಿ ಹಡಗು ಬುಧವಾರ (ಮೇ.14) ಬೆಳಗ್ಗೆ ಕಾರವಾರದಿಂದ ಶಾರ್ಜಾಗೆ ತೆರಳಿದೆ. ಕರಾವಳಿ ಕಾವಲುಪಡೆ ಪೊಲೀಸರು ಪಾಕಿಸ್ತಾನ ಪ್ರಜೆಯನ್ನು ಇದೇ ಹಡುಗಿನಲ್ಲಿ ತನ್ನ ದೇಶಕ್ಕೆ ಕಳುಹಿಸಿದ್ದಾರೆ.
ಸರಗು-ಸಾಗಾಣಿಕೆಯನ್ನು ಹೊತ್ತು ಭಾರತಕ್ಕೆ ಬರುವ ಪ್ರತಿ ಹಡುಗಿನಲ್ಲೂ ವಿವಿಧ ದೇಶಗಳ ಕಾರ್ಮಿಕರು ಇರುತ್ತಾರೆ. ಅದರಂತೆ, ಈ ಹಡುಗಿನಲ್ಲೂ ಕೂಡ ವಿವಿಧ ದೇಶಗಳ ಕಾರ್ಮಿಕರು ಇದ್ದರು. ಇವರಲ್ಲಿ ಓರ್ವ ಪಾಕಿಸ್ತಾನದ ಕಾರ್ಮಿಕ ಕೂಡ ಇದ್ದನು. ಈತ ಸರಕು-ಸಾಗಾಣಿಕೆ ಹಡಗಿನಲ್ಲಿ ಭಾರತಕ್ಕೆ ಬಂದಿದ್ದಾನೆ. ಆದರೆ, ಕರಾವಳಿ ಕಾವಲು ಪಡೆ ಪೊಲೀಸರು ಈತನನ್ನು ಭಾರತದ ನೆಲದ ಮೇಲೆ ಕಾಲಿಡದಂತೆ ತಡೆದಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಪಾಕಿಸ್ತಾನಿ ನಾಗರಿಕರಿಗೆ ಈಗಾಗಲೇ ನೀಡಲಾದ ಎಲ್ಲಾ ವೀಸಾ ಸೇವೆಗಳನ್ನು ಕೇಂದ್ರ ಸರ್ಕಾರ ಏಪ್ರಿಲ್ 27ರಿಂದ ರದ್ದು ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೇ, ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ವೈದ್ಯಕೀಯ ವೀಸಾಗಳನ್ನು ಕೂಡ ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ನಾಗರಿಕರು ತಮ್ಮ ವೀಸಾದ ಮಾನ್ಯತೆಯ ಅವಧಿ ಮುಗಿಯುವ ಮೊದಲು ದೇಶವನ್ನು ತೊರೆಯಬೇಕು ಎಂದು ಆದೇಶಿಸಿತ್ತು.
ಇದನ್ನೂ ಓದಿ: ತನ್ನ ಪ್ರಜೆಗಳ ಪ್ರವೇಶಕ್ಕೆ ಗೇಟ್ ತೆರೆಯದ ಪಾಕಿಸ್ತಾನ; ಭಾರತ ಬಿಟ್ಟು ಹೋಗಲು ಗಡುವು ವಿಸ್ತರಣೆ
ಕೇಂದ್ರ ಸರ್ಕಾರ ಆದೇಶಿಸುತ್ತಿದ್ದಂತೆ ಸಾವಿರಾರು ಪಾಕಿಸ್ತಾನ ಪ್ರಜೆಗಳು ದೇಶ ಬಿಟ್ಟು ತೆರಳಿದ್ದಾರೆ. ಆದರೆ, ಇದೀಗ ಓರ್ವ ಪಾಕಿಸ್ತಾನ ಪ್ರಜೆ ಸರಕು-ಸಾಗಾಣಿಕೆ ಹಡುಗಿನಲ್ಲಿ ಭಾರತಕ್ಕೆ ಬಂದಿದ್ದು, ಆತ ನಮ್ಮ ನೆಲದ ಮೇಲೆ ಕಾಲಿಡದಂತೆ ಕರಾವಳಿ ಕಾವಲುಪಡೆ ಪೊಲೀಸರು ತಡೆದಿದ್ದಾರೆ. ಬಳಿಕ ಆತನನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿದ್ದಾರೆ.
Published On - 9:14 pm, Wed, 14 May 25