ಉತ್ತರ ಕನ್ನಡ ಸಂಸದ ಮಸೀದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಬೆನ್ನಲ್ಲೆ, ಹಿಂದೂ ಮುಸ್ಲಿಂ ಕಾಳಗ ಆರಂಭ ಆಗಿದೆ. ಜಿಲ್ಲೆಯ ಭಟ್ಕಳದಲ್ಲಿ ನಾಮಫಲಕ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿದೆ, ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಇನ್ನಷ್ಟು ಉದ್ಭವಿಸುವ ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ರಾಜ್ಯದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿನಗರದಲ್ಲಿ ಬೋರ್ಡ್ ಅಳವಡಿಸುವ ವಿಚಾರದಲ್ಲಿ ಗಲಾಟೆ ನಡೆದಿದೆ. ಪ್ರತಿ ವರ್ಷವೂ ಸಂಕ್ರಮಣ ಸಂದರ್ಭದಲ್ಲಿ ದೇವಿನಗರದ ನಾಮಫಲಕವನ್ನ ಹೊಸದಾಗಿ ಮಾಡಲಾಗುತ್ತೆ. ಈ ಬಾರಿಯೂ ಕೂಡ ಹೊಸ ನಾಮಫಲಕ ಅಳವಡಿಸಲು ಕಂಬವನ್ನ ನೆಡಲಾಗಿತ್ತು.
ಆದ್ರೆ ಇನ್ನೊಂದು ಕೋಮಿನ ನಾಗರಿಕರು ನೀಡಿದ ದೂರಿನ ಮೇರೆಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಕಂಬವನ್ನ ತೆರವುಗೊಳಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಕಂಬ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಟ್ಟಣ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಬೋರ್ಡ್ ಅಳವಡಿಸಲು ಅಡ್ಡಿಪಡಿಸಿದ ಅಧಿಕಾರಿಗಳು ಸಂಘರ್ಷಕ್ಕೆ ಕಾರಣವಾಗಿದ್ದು, ಸ್ಥಳೀಯರ ಅಸಮಧಾನಕ್ಕೆ ಕಾರಣವಾಗಿದೆ.
ದೇವಿನಗರದ ಹೊಸ ಬೋರ್ಡ್ ಅಳವಡಿಸುವ ಜಾಗದಿಂದ ಸ್ವಲ್ಪ ದೂರದಲ್ಲಿ ಮಸೀದಿಯೊಂದಿದೆ. ಮಸೀದಿಯ ಮೌಲ್ವಿಯೊಬ್ಬರು ಸಂದೇಶ ರವಾನಿಸಿ ಕೋಮುಗಳ ನಡುವೆ ಸಂಘರ್ಷ ಉಂಟುಮಾಡಲು ಕಾರಣರಾಗಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಅಸಲಿಗೆ ಮಸೀದಿ ಕಾನೂನುಬಾಹೀರವಾಗಿದೆ. ಇಲ್ಲಿ ಮದರಸಕ್ಕೆ ಮಾತ್ರ ಅನುಮತಿ ಪಡೆಯಲಾಗಿದೆ. ಯಾವುದೇ ಮಸೀದಿ ಇರೋದಿಲ್ಲ. ಹೀಗಾಗಿ ಜಾಲಿ ಪಟ್ಟಣಪಂಚಾಯತ್ ಮತ್ತು ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ಇರುವ ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿಯನ್ನ ಸಂಬಂಧಪಟ್ಟವರು ನೀಡಬೇಕು. ಅಲ್ಲದೇ ಆ ಎಲ್ಲ ಕಟ್ಟಡಗಳನ್ನ ತೆರವುಗೊಳಿಸಬೇಕೆಂದು ಹಿಂದು ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಜನವರಿ 22ರೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.
ಈ ನಡುವೆ ಜಾಲಿಯ ಗಲಾಟೆಯ ಬಗ್ಗೆ ಸ್ಥಳೀಯರಿಗೆ ಓರ್ವ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿದ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಪಟ್ಟಣ ಪಂಚಾಯತ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿದ್ದು,ಮುಂದೆ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ಶಮನಗೊಳಿಸುವ ಕೆಲಸವನ್ನ ಅಧಿಕಾರಿಗಳೆ ಮಾಡಬೇಕಾಗಿದೆ.
ಇದನ್ನೂ ಓದಿ: 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣದವರೆಗೆ; ಟೈಮ್ಲೈನ್
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Thu, 18 January 24