ದಾಂಡೇಲಿಯ ರೆಸಾರ್ಟ್​​ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ

ದಾಂಡೇಲಿಯ ರೆಸಾರ್ಟೊಂದರಲ್ಲಿ ಜಿಪ್‌ಲೈನ್‌ನ ಸೇಫ್ಟಿ ಲಾಕ್ ವೈಫಲ್ಯದಿಂದ 40 ಅಡಿ ಎತ್ತರದಿಂದ ಬಿದ್ದು ವಿಜಯಪುರದ ಪ್ರವಾಸಿಗ ಗಂಭೀರ ಗಾಯಗೊಂಡಿದ್ದು, ಸಾಹಸ ಪ್ರವಾಸೋದ್ಯಮದ ಸುರಕ್ಷತಾ ಮಾನದಂಡಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರೆಸಾರ್ಟ್ ನಿರ್ವಹಣೆಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಕುಟುಂಬಸ್ಥರೂ ಆರೋಪಿಸಿದ್ದು, ಜಿಪ್‌ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು ಹಾಗೂ ಸಮರ್ಪಕ ನಿರ್ವಹಣೆ ಮಾಡಲಾಗಿರಲಿಲ್ಲ ಎಂದು ದೂರಿದ್ದಾರೆ.

ದಾಂಡೇಲಿಯ ರೆಸಾರ್ಟ್​​ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗನಿಗೆ ಗಂಭೀರ ಗಾಯ
ದಾಂಡೇಲಿಯಲ್ಲಿ ಜಿಪ್‌ಲೈನ್ ದುರಂತ

Updated on: Jul 20, 2026 | 12:16 PM

ಮುಖ್ಯಾಂಶಗಳು

  • ಜಿಪ್‌ಲೈನ್ ಸವಾರಿ ವೇಳೆ ಸೇಫ್ಟಿ ಲಾಕ್ ವೈಫಲ್ಯ
  • 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಪ್ರವಾಸಿಗ
  • ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಘಟನೆ

ದಾಂಡೇಲಿ, ಜುಲೈ 20: ಜಿಪ್‌ಲೈನ್ ಸವಾರಿ ವೇಳೆ ಸೇಫ್ಟಿ ಲಾಕ್ ವೈಫಲ್ಯಗೊಂಡ ಪರಿಣಾಮ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರವಾಸಿಗ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ರೆಸಾರ್ಟೊಂದರಲ್ಲಿ ನಡೆದಿದೆ. ಗಾಯಾಳುವನ್ನು ವಿಜಯಪುರದ ಕುಬೇರ ಸುರಪುರ ಎಂದು ಗುರುತಿಸಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಹಸ ಪ್ರವಾಸೋದ್ಯಮ ಕೇಂದ್ರಗಳ ಸುರಕ್ಷತಾ ಮಾನದಂಡಗಳ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ.

ಕೈ ಮತ್ತು ಕಾಲಿನ ಮೂಳೆಗಳ ಮುರಿತ

ಕುಬೇರ ಅವರ ಕುಟುಂಬದವರ ಪ್ರಕಾರ, ಗಾಳಿಯಲ್ಲಿ ತೂಗುತಿದ್ದ ವೇಳೆ ಜಿಪ್‌ಲೈನ್‌ನ ಸುರಕ್ಷತಾ ಲಾಕ್ ಕೈಕೊಟ್ಟ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದಾರೆ. ಈ ದುರಂತದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಹಲವು ಕಡೆ ಮುರಿತಗಳಾಗಿದ್ದು, ನರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ಕುಬೇರ ಅವರನ್ನು ಮೊದಲು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ವಿಜಯಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ನಂತರ ಅವರನ್ನು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಆರೋಗ್ಯ ಇಲಾಖೆ ವಸತಿಗೃಹಗಳು; ಮಜಾ ಮಾಡಲು ಹುಡುಗ-ಹುಡುಗಿಯರು ಬರ್ತಾರೆ

ರೆಸಾರ್ಟ್​​ ವಿರುದ್ಧ ಕುಟುಂಬಸ್ಥರ ಆರೋಪ

ರೆಸಾರ್ಟ್ ನಿರ್ವಹಣೆಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಜಿಪ್‌ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು ಹಾಗೂ ಸಮರ್ಪಕ ನಿರ್ವಹಣೆ ಮಾಡಲಾಗಿರಲಿಲ್ಲ ಎಂದು ದೂರಿದ್ದಾರೆ. ಸೂಕ್ತ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆ ನಡೆದಿದ್ದರೆ ಈ ಘಟನೆ ತಪ್ಪಿಸಬಹುದಾಗಿತ್ತು ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಆಕ್ರೋಶ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಹಸ ಕ್ರೀಡೆಗಳ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಪರಿಶೀಲನೆ, ನಿಯಮಿತ ಉಪಕರಣಗಳ ನಿರ್ವಹಣೆ ಹಾಗೂ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಒಬ್ಬರು, ಇದು ಅತ್ಯಂತ ಕಳಪೆ ಜಿಪ್‌ಲೈನ್ ವಿನ್ಯಾಸ. ವ್ಯಕ್ತಿ ಹಗ್ಗವನ್ನು ಬಿಟ್ಟರೂ ಕೆಳಗೆ ಬೀಳದಂತೆ ಸುರಕ್ಷತಾ ಬೆಲ್ಟ್ ದೇಹಕ್ಕೆ ಭದ್ರವಾಗಿ ಜೋಡಿಸಿರಬೇಕು. ಇಂತಹ ವ್ಯವಸ್ಥೆಗೆ ಅನುಮತಿ ಹೇಗೆ ಸಿಕ್ಕಿತು? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಕೆಲವು ದಿನಗಳ ರೆಸಾರ್ಟ್ ಬಂದ್, ಸಣ್ಣ ದಂಡ ವಿಧಿಸಿ ಮತ್ತೆ ಕಾರ್ಯಾಚರಣೆಗೆ ಅವಕಾಶ ನೀಡುತ್ತಾರೆ. ನ್ಯಾಯ ಎಲ್ಲಿದೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:27 am, Mon, 20 July 26

Follow Us