ಚುನಾವಣೆಯಲ್ಲಿ ಹಂಚಲು ಗೋವಾದಿಂದ ಆಲ್ಕೋಹಾಲ್ ತಂದು ಸಿಕ್ಕಿಬಿದ್ದ ಆರೋಪಿ; ಎಣ್ಣೆ ಸಾಗಾಟಕ್ಕೆ ಖತರ್ನಾಕ್ ಐಡಿಯಾ!

ಗೋವಾದಿಂದ ಮೀನು ಸಾಗಣೆಯ ಕಂಟೈನರ್‌ನಲ್ಲಿ 1.69 ಲಕ್ಷ ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ವಿಸ್ಕಿ ಹಾಗೂ ಕೊಕೋನಟ್ ಫೆನ್ನಿಯನ್ನು ಅಂಕೋಲಾಕ್ಕೆ ಸಾಗಿಸುತ್ತಿದ್ದ ವೇಳೆ ಕಾರವಾರದಲ್ಲಿ ಓರ್ವ ವ್ಯಕ್ತಿ ಅಬಕಾರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚುನಾವಣೆಯಲ್ಲಿ ಹಂಚಲು ಗೋವಾದಿಂದ ಆಲ್ಕೋಹಾಲ್ ತಂದು ಸಿಕ್ಕಿಬಿದ್ದ ಆರೋಪಿ; ಎಣ್ಣೆ ಸಾಗಾಟಕ್ಕೆ ಖತರ್ನಾಕ್ ಐಡಿಯಾ!
ಕಾರವಾರದಲ್ಲಿ ವಶಪಡಿಸಿಕೊಂಡ ಆಲ್ಕೋಹಾಲ್

ಕಾರವಾರ: ಗೋವಾ ಹೇಳಿಕೇಳಿ ಆಲ್ಕೋಹಾಲ್​ಗೆ ಫೇಮಸ್. ಕೆಲವರು ಅಲ್ಲಿ ಕಡಿಮೆ ದರದಲ್ಲಿ ಸಿಗುವ ಮದ್ಯವನ್ನು ಕರ್ನಾಟಕಕ್ಕೆ ತಂದು ಮಾರಾಟ ಮಾಡಿ ಹಣ ಗಳಿಸುವ ಕಾರ್ಯವೇನೂ ಗುಟ್ಟಾಗಿ ಉಳಿದಿಲ್ಲ. ಅನೇಕ ಪ್ರಕರಣಗಳಲ್ಲಿ ಅಬಕಾರಿ ದಾಳಿಗಳೂ ನಡೆದು ಮದ್ಯ ಜಪ್ತಿಪಡಿಸಿಕೊಂಡು, ಆರೋಪಿಗಳನ್ನು ವಶಪಡಿಸಿಕೊಂಡಿರುವುದೂ ಇದೆ. ಆದರೀಗ ವಿಧಾನ ಪರಿಷತ್ ಚುನಾವಣೆಗಾಗಿ ಮತದಾರರಿಗೆ ಹಂಚಿಕೆ ಮಾಡಲು ಲಕ್ಷಗಟ್ಟಲೆ ಮೌಲ್ಯದ ಮದ್ಯವನ್ನು ಗಡಿ ಜಿಲ್ಲೆ ಉತ್ತರ ಕನ್ನಡಕ್ಕೆ ಪೊಲೀಸ್, ಅಬಕಾರಿಗಳ ಕಣ್ತಪ್ಪಿಸಿ ತರುತ್ತಿರುವ ಕೆಲಸ ನಡೆಯುತ್ತಿದೆ.

ಸದ್ಯ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣೆ ಎನ್ನುವುದು ಕೊನೆಯ ದಿನದ ಆಟ ಎಂಬಂತೆ, ಮತದಾನಕ್ಕೆ ಎರಡು ದಿನ ಇರುವಾಗ ಮತ ಪಡೆಯಲು ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದವರು ಹೆಂಡ- ಹಣ ಹಂಚುವ ಕಾರ್ಯಕ್ಕೆ ಇಳಿಯುವುದು ಇತ್ತೀಚಿನ ಚುನಾವಣೆಗಳ ಒಂದು ಭಾಗವೇ ಆಗಿದೆ. ಕಾನೂನು ಪ್ರಕಾರ ಇದು ಅಪರಾಧವಾಗಿರುವ ಕಾರಣ ಅಧಿಕಾರಿಗಳ ಕಣ್ತಪ್ಪಿಸಿ ಇಂಥ ಕಾರ್ಯಕ್ಕೆ ಕೆಲವರು ಇಳಿಯುತ್ತಾರೆ.

ಇದಕ್ಕೆ ಪುಷ್ಠಿ ನೀಡುವಂತೆ, ಗೋವಾದಿಂದ ಮೀನು ಸಾಗಣೆಯ ಕಂಟೈನರ್‌ನಲ್ಲಿ 1.69 ಲಕ್ಷ ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ವಿಸ್ಕಿ ಹಾಗೂ ಕೊಕೋನಟ್ ಫೆನ್ನಿಯನ್ನು ಅಂಕೋಲಾಕ್ಕೆ ಸಾಗಿಸುತ್ತಿದ್ದ ವೇಳೆ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್​ನಲ್ಲಿ ಓರ್ವ ವ್ಯಕ್ತಿ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮೀನು ಸಾಗಾಣೆಯ ನೆಪದಲ್ಲಿ ಈತ ಎಣ್ಣೆ ಸಾಗಾಟಕ್ಕೆ ಮಾಡಿದ್ದ ವ್ಯವಸ್ಥೆಯನ್ನು ಕಂಡು ಅಬಕಾರಿ ಸಿಬ್ಬಂದಿಯೇ ಒಮ್ಮೆ ಶಾಕ್ ಆಗಿದ್ದಾರೆ.

ಮೀನು ಸಾಗಣೆ ಕಂಟೈನರ್‌ನ ಮೇಲ್ಭಾಗದಿಂದ ಸಣ್ಣ ಕಿಟಿಕಿಯಂಥ ವ್ಯವಸ್ಥೆ ಮಾಡಿ, ಮೀನು ಇಡುವಲ್ಲಿ ಎರಡು ಪ್ರತ್ಯೇಕ ಕಂಪಾರ್ಟ್​ಮೆಂಟ್ ಮಾಡಿ, ಯಾರಿಗೂ ಗೊತ್ತಾಗದಂತೆ ಗೌಪ್ಯ ವ್ಯವಸ್ಥೆಗೊಳಿಸಿ ಅದರಲ್ಲಿ ಮದ್ಯ ಅಡಗಿಸಿಟ್ಟಿದ್ದ. ಅದರ ಮುಂಭಾಗದ ಕಂಪಾರ್ಟ್​ಮೆಂಟ್‌ನಲ್ಲಿ ಖಾಲಿ ಮೀನಿನ ಟ್ರೇಗಳನ್ನಿಟ್ಟು, ಗೊತ್ತೇ ಆಗದಂತೆ ಮರೆಮಾಚಿ ಸಾಗಣೆ ಮಾಡುತ್ತಿದ್ದ. ಎಂದಿನಂತೆ ಮಾಜಾಳಿ ಚೆಕ್‌ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಅಬಕಾರಿ ಸಿಬ್ಬಂದಿ, ಅನುಮಾನದ ಮೇರೆಗೆ ವಾಹನದ ಮೇಲೆ ಹತ್ತಿ ನೋಡಿದಾಗ ಮೂರ್ನಾಲ್ಕು ಜನರು ನಿಂತು ಪ್ರಯಾಣಿಸುವಷ್ಟು ಇದ್ದ ಜಾಗದಲ್ಲಿ 1,51,200 ರೂ. ಮೌಲ್ಯದ ಗೋವಾ ರಾಜ್ಯದ ಪರವಾನಗಿಯ ಕೋಕೋನಟ್ ಫೆನ್ನಿ ಹಾಗೂ 18,000 ಮೌಲ್ಯದ ರಾಯಲ್ ಸ್ಟಾಗ್ ವಿಸ್ಕಿಯ ಬಾಟಲಿಗಳನ್ನು ಜೋಡಿಸಿಟ್ಟುವುದು ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ಮದ್ಯ ಹಾಗೂ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾ ಉಪ ಆಯುಕ್ತೆ ವನಜಾಕ್ಷಿ ತಿಳಿಸಿದ್ದಾರೆ.

ಇನ್ನು, ಚುನಾವಣೆಯ ಸಲುವಾಗಿಯೇ ಈ ಮದ್ಯ ಸಾಗಾಟವಾಗುತ್ತಿದ್ದುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಈ ರೀತಿ ಅಕ್ರಮವಾಗಿ ಗೋವಾ ರಾಜ್ಯದಿಂದ ಬರುವ ಮದ್ಯವನ್ನು ತಡೆಗಟ್ಟಲು ಅಬಕಾರಿ ಜಿಲ್ಲಾ ಉಪ ಆಯುಕ್ತೆ ವನಜಾಕ್ಷಿಯವರು ತಮ್ಮ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ತಂಡಗಳನ್ನು ರಚನೆ ಮಾಡಿ, ದೂರುಗಳನ್ನು ನೀಡಲು ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ. ಜೊಯಿಡಾ ಅನಮೋಡ ಹಾಗೂ ಕಾರವಾರದ ಮಾಜಾಳಿ ಚೆಕ್‌ಪೋಸ್ಟ್ನಲ್ಲಿ ಅಕ್ರಮ ಮದ್ಯ ಸಾಗಾಟದ ಮೇಲೆ ಕಣ್ಣಿಡುವಂತೆ ಖಡಕ್ ಸೂಚನೆ ಕೂಡ ನೀಡಿದ್ದಾರೆ.

ಒಟ್ಟಾರೆಯಾಗಿ, ಅಬಕಾರಿ ಇಲಾಖೆಯೇನೋ ಚುನಾವಣೆಯ ಸಲುವಾಗಿ ಸದ್ಯ ಅಬಕಾರಿ ಅಕ್ರಮ ನಡೆಯದಂತೆ ಪಹರೆ ಹಾಕಿದೆ. ಆದರೆ, ಈ ಪಹರೆ ಚುನಾವಣೆಯ ನಂತರವೂ ನಿರಂತರವಾಗಿ ಮುಂದುವರಿದರೆ ಜಿಲ್ಲೆಯ ಜನತೆಗೂ ಒಳ್ಳೆಯದು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವರದಿ: ದೇವರಾಜ್​ ನಾಯ್ಕ್​

ಇದನ್ನೂ ಓದಿಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅನುಮಾನ; ಕೈ ನಾಯಕ ಗುಲಾಂ ನಬಿ ಆಜಾದ್ ಭವಿಷ್ಯ

ದೇವೇಗೌಡರು ದೆಹಲಿಯಿಂದ ಬಂದ ನಂತರ ಮೇಲ್ಮನೆ ಚುನಾವಣೆ ಮೈತ್ರಿ ಬಗ್ಗೆ ನಿರ್ಧಾರ: ಎಚ್.ಡಿ.ಕುಮಾರಸ್ವಾಮಿ

Published On - 3:46 pm, Fri, 3 December 21

Click on your DTH Provider to Add TV9 Kannada