ಉತ್ತರ ಕನ್ನಡ, ಮೇ.19: ಜಿಲ್ಲೆಯ ಕುಮಟಾ(Kumta) ತಾಲೂಕಿನ ತದಡಿ ಬಳಿಯ ಸಮುದ್ರದ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಮಗುಚಿದ ಘಟನೆ ನಡೆದಿದೆ. ಕೂಡಲೇ ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ರಕ್ಷಣಾ ತಂಡದಿಂದ 40 ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ಈ ಪ್ರವಾಸಿ ಬೋಟ್ ಗಣೇಶ ಎಂಬುವವರಿಗೆ ಸೇರಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಪ್ರಯಾಣಿಸಿದ್ದಕ್ಕೆ ಈ ಅವಘಡ ಸಂಭವಿಸಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ ಉಬ್ಬರಬೈಲು ನಡೆದಿದೆ. ಮುಡ್ಡಾಯಿಗುಡ್ಡೆ ನಿವಾಸಿಗಳಾದ ಹರೀಶ್(48) ಹಾಗೂ ಹೃತೇಶ್(18) ಸಾವನ್ನಪ್ಪಿದ್ದಾರೆ.
ಮೀನಿಗೆ ಬಲೆ ಹಾಕುವಾಗ ಆಯತಪ್ಪಿ ಕೆರೆಗೆ ಬಿದ್ದು ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ವೇದಾವತಿ ನದಿ ಪ್ರವಾಹದಲ್ಲಿ ಸಿಲುಕಿದ ಅರ್ಚಕ ಕುಟುಂಬ: ರಕ್ಷಣೆಗೆ ತೆರಳಿದ್ದ ಬೋಟ್ ಪಲ್ಟಿ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಮೆಳೇಕತ್ತಿಗನೂರು ಗ್ರಾಮದ ಬಳಿ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ. ಕೆಂಪಣ್ಣ(54) ಮೃತ ರ್ದುದೈವಿ. ದನ ಮೇಯಿಸಲು ಹೋಗಿದ್ದಾಗ ಸಿಡಿಲು ಬಡಿದು ಕೆಂಪಣ್ಣ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಇರ್ಷಾದ್(56) ಎಂಬಾತ ದುರ್ಮರಣ ಹೊಂದಿದ್ದಾರೆ. ರಾತ್ರಿ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ತಂತಿ ನೆಲದ ಮೇಲೆ ಬಿದ್ದಿರುವುದನ್ನು ಗಮನಿಸದೇ ಇರ್ಷಾದ್ ತುಳಿದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ