ರಾಜ್ಯದ ಮೊರಾರ್ಜಿ ವಸತಿ ಶಾಲೆಗಳನ್ನು ಪಿಯುಸಿವರೆಗೆ ವಿಸ್ತರಿಸಲು ನಿರ್ಧಾರ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಕಟ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವರ ಕೋಟಾ ಶ್ರೀನಿವಾಸ ಪೂಜಾರಿ, ಶಾಲೆಯ ಭೋಜನಾಲಯಕ್ಕೆ ಭೇಟಿ ನೀಡಿ ಬಳಿಕ ವಿದ್ಯಾರ್ಥಿಗಳ ಜೊತೆ ಊಟ ಮಾಡಿದರು. ನಂತರ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು.
ಕಾರವಾರ: ರಾಜ್ಯದ ಮೊರಾರ್ಜಿ ವಸತಿ ಶಾಲೆಗಳನ್ನು(Morarji Desai Residential School) ಪಿಯುಸಿವರೆಗೆ ವಿಸ್ತರಿಸಲು ನಿರ್ಧಾರ ಮಾಡಿರುವುದಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ(Kota Srinivas Poojary) ಮಾಹಿತಿ ನೀಡಿದ್ದಾರೆ. ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಮೊರಾರ್ಜಿ ಶಾಲೆಗಳು ಉತ್ತಮ ವೇದಿಕೆಯಾಗಿದೆ. 6ನೇ ತರಗತಿಯಿಂದ ಪಿಯುಸಿವರೆಗೆ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯಬೇಕೆಂಬುದು ನಮ್ಮ ಆಶಯ ಎಂದಿದ್ದಾರೆ.
ಮೊರಾರ್ಜಿ ಶಾಲೆಗಳನ್ನು ಪಿಯುವರೆಗೂ ವಿಸ್ತರಿಸುವ ಕುರಿತಂತೆ ಶಿಕ್ಷಣ ಇಲಾಖೆ ಜೊತೆಯೂ ಮಾತನಾಡಲಾಗಿದೆ. ವಿದ್ಯಾರ್ಥಿನಿಯರಿಗೆ ಈಗಾಗಲೇ ಓಬವ್ವ ಆತ್ಮ ರಕ್ಷಣಾ ಕಲೆಯೊಂದಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿನಿಯರೂ ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಕಡಿಮೆಯಿದೆ. ಪ್ರಾಮಾಣಿಕ ಸೇವೆಯಿಂದಾಗಿ ಶಾಲೆಗಳೂ ಉತ್ತಮ ಮಟ್ಟದಲ್ಲಿ ನಡೆಯುತ್ತಿವೆ. ಅವರ ವೇತನ ಹೆಚ್ಚಿಸುವ ಬಗ್ಗೆ ಯತ್ನ ನಡೆಯುತ್ತಿದ್ದು, ಹಣಕಾಸು ವಿಭಾಗದ ಒಪ್ಪಿಗೆಗೆ ಕಾಯುತ್ತಿದ್ದೇವೆ. ಕಳೆದ ಬಾರಿ ಪ್ರಕೃತಿ ವಿಕೋಪ ಅನುದಾನದಡಿ ಮಂಜೂರಾದ ಹಣ ಗುತ್ತಿಗೆದಾರರಿಗೆ ಸಂದಾಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ, ಖಂಡಿತವಾಗಿಯೂ ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತದೆ. ಗುತ್ತಿಗೆದಾರರು ಅವರ ಹಣದ ಸಲುವಾಗಿ ಆಲೋಚನೆ ಮಾಡಬೇಕಾಗಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವರ ಕೋಟಾ ಶ್ರೀನಿವಾಸ ಪೂಜಾರಿ, ಶಾಲೆಯ ಭೋಜನಾಲಯಕ್ಕೆ ಭೇಟಿ ನೀಡಿ ಬಳಿಕ ವಿದ್ಯಾರ್ಥಿಗಳ ಜೊತೆ ಊಟ ಮಾಡಿದರು. ನಂತರ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು.
Published On - 7:04 pm, Wed, 20 July 22