ಆಂಬುಲೆನ್ಸ್ ಅಪಘಾತ ಪ್ರಕರಣ: ಗ್ರಾಮಕ್ಕೆ ಆಗಮಿಸಿದ ಮೃತರ ಶವಗಳು, ಮುಗಿಲು ಮುಟ್ಟಿದ ಮೃತರ ಸಂಬಂಧಿಕರ ಆಕ್ರಂದನ
ಟೋಲ್‌ನಲ್ಲಿ ಚಾಲಕ ಸಡನ್ ಬ್ರೇಕ್ ಹಾಕಿದ್ದು, ಹೀಗಾಗಿ ಆಂಬ್ಯುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾನು ಹೊರಗೆ ಹೋಗಿ ಬಿದ್ದು ಮೂರ್ಛೆ ಹೋದೆ. ಬೆನ್ನಿನ ಭಾಗ, ಕಾಲಿಗೆ ಏಟಾಗಿದೆ ಎಂದು ಹೇಳಿದರು.
ಕಾರವಾರ: ವೇಗದಿಂದ ಬಂದ ಆಂಬುಲೆನ್ಸ್ (Ambulance) ಟೋಲ್ ಕಂಬಕ್ಕೆ ಡಿಕ್ಕಿ ನಾಲ್ವರ ಸಾವಿನ ಪ್ರಕರಣ ಸಂಬಂಧ ಮೃತರ ಶವಗಳನ್ನು ಉತ್ತರ ಕನ್ನಡ ಜಿಲ್ಲೆಯ ಹಾಡಗೇರಿ ಗ್ರಾಮಕ್ಕೆ ಆಗಮಿಸಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹಾಡಗೇರಿ ಗ್ರಾಮದಲ್ಲಿ ಸ್ಮಶಾನ ಮೌನ ನಿರ್ಮಾಣವಾಗಿದೆ. ಇಂದು ಸಂಜೆ 5 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಲ್ಲಿ ನಿನ್ನೆ ದುರಂತ ನಡೆದಿದೆ. ಹೊನ್ನಾವರದಿಂದ ಕುಂದಾಪುರಕ್ಕೆ ಆಂಬುಲೆನ್ಸ್ ರೋಗಿಗಳನ್ನು ಸಾಗಿಸುತ್ತಿದ್ದಾಗ ದುರಂತ ನಡೆದಿದೆ. ಘಟನೆಯಲ್ಲಿ ಹಾಡಗೇರಿ ಗ್ರಾಮದವರೇ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್, ಪತ್ನಿ ಜ್ಯೋತಿ ನಾಯ್ಕ, ಸಂಬಂಧಿಕರಾದ ಮಂಜುನಾಥ ನಾಯ್ಕ್, ಲೋಕೇಶ್ ನಾಯ್ಕ್ ಮೃತರು. ಗಜಾನನ ಗಣಪತಿ ಗೋಬಿ ಮಂಚೂರಿ ಶಾಪ್ ನಡೆಸುತ್ತಿದ್ದರು. ಮಂಜುನಾಥ ನಾಯ್ಕ, ಲೋಕೇಶ್ ನಾಯ್ಕ ಬಿರಿಯಾನಿ ಶಾಪ್ ಹೊನ್ನಾವರದಲ್ಲಿ ನಡೆಸುತ್ತಿದ್ದರು.
ಇದನ್ನೂ ಓದಿ: ಭೀಕರ ಆಂಬುಲೆನ್ಸ್ ಅಪಘಾತ: ನಾಲ್ವರ ಸಾವು, ಚಾಲಕ ಬಚಾವು, ದುರಂತಕ್ಕೆ ಕಾರಣವೇನು ಗೊತ್ತಾ?
ಈ ಕುರಿತಾಗಿ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತರ ಸಂಬಂಧಿ ಗಾಯಾಳು ಶಶಾಂಕ್ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಮಧ್ಯಾಹ್ನ ಗಜಾನನ ನಾಯ್ಕ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆಂಬ್ಯುಲೆನ್ಸ್ ಚಾಲಕ ಸೇರಿ ಒಟ್ಟು ಏಳು ಮಂದಿ ಬರುತ್ತಿದ್ದೆವು. ಆಂಬ್ಯುಲೆನ್ಸ್ ವೇಗವಾಗಿ ಉಡುಪಿ ಕಡೆ ಬರುತ್ತಿದ್ದು, ಹಿಂಬದಿಯಲ್ಲಿ ನಾನು ಸೇರಿ ಐದು ಇದ್ದೆವು. ಟೋಲ್‌ನಲ್ಲಿ ಚಾಲಕ ಸಡನ್ ಬ್ರೇಕ್ ಹಾಕಿದ್ದು, ಹೀಗಾಗಿ ಆಂಬ್ಯುಲೆನ್ಸ್ ಟೋಲ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾನು ಹೊರಗೆ ಹೋಗಿ ಬಿದ್ದು ಮೂರ್ಛೆ ಹೋದೆ. ಬೆನ್ನಿನ ಭಾಗ, ಕಾಲಿಗೆ ಏಟಾಗಿದೆ ಎಂದು ಹೇಳಿದರು.
ಶಿರೂರು ಟೋಲ್ ಗೇಟ್ ಸಿಬ್ಬಂದಿ ಸಂಜು ಪಾಂಡವ್ ಹಾಗೂ ಗಾಯಾಳು ಸಿಬ್ಬಂದಿ ಶಂಬಾಜಿ ಗೋರ್ಪಡೆ ಪ್ರತಿಕ್ರಿಯೆ ನೀಡಿದ್ದು, 500 ಮೀಟರ್ ದೂರದಲ್ಲಿ ಆಂಬ್ಯುಲೆನ್ಸ್ ಬರುತ್ತಿತುವಾಗಲೇ ಬ್ಯಾರಿಕೇಟ್ ತೆರವು ಮಾಡಿದ್ದೆವು. ಆಂಬ್ಯುಲೆನ್ಸ್ ಬರುವ ರಸ್ತೆಯಲ್ಲಿ ಇದ್ದ ಹಸುವನ್ನು ಓಡಿಸಿದ್ದೆವು. ಆದರೆ ಆಂಬ್ಯುಲೆನ್ಸ್ ಚಾಲಕ ವೇಗವಾಗಿದ್ದ. ಚಾಲಕ ಬ್ರೇಕ್ ಬದಲು ಹ್ಯಾಂಡ್ ಬ್ರೇಕ್ ಹಾಕಿರಬೇಕು. ಸ್ಥಳದಲ್ಲೇ ಮೂವರು ಸಾವನ್ಪಿದ್ದರು. ಓರ್ವ ಆಸ್ಪತ್ರೆಗೆ ದಾಖಲಿಸುವಾಗ ಸಾವನ್ಪಿದ್ದ. ಆಂಬ್ಯುಲೆನ್ಸ್ ಚಾಲಕನಿಗೆ ಕೈಗೆ ಪೆಟ್ಟಾಗಿದೆ, ಚಿಕಿತ್ಸೆ ಪಡೆದು ಹೊನ್ನಾವರಕ್ಕೆ ತೆರಳಿದ್ದಾನೆ ಎಂದು ಹೇಳಿದರು.