
ಕಾರವಾರ, ಜೂನ್ 2: ಅರಬ್ಬೀ ಸಮುದ್ರ ಹಾಗೂ ಕಾಳಿ ನದಿ ಹಿನ್ನಿರಿನ ಪ್ರದೇಶಗಳೆರಡರ ಮಧ್ಯದಲ್ಲಿರುವ ಗುಡ್ಡದ ಮೇಲೆ ಕಾಣಿಸುವ ಸುಂದರವಾದ ಕೊಟೆಯೇ ಸದಾಶಿವಗಡ (Sadashivgad). ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karawar) ಪಟ್ಟಣದ ಬಳಿ ಇದೆ. ಅರಬ್ಬೀ ಸಮುದ್ರಕ್ಕೆ ಕಾಳಿ ನದಿ ಸಂಗಮ ಆಗುವ ಸ್ಥಳ ಅತ್ಯಾಕರ್ಷಣೀಯವಾಗಿದೆ. ಕೇವಲ ನೈಸರ್ಗಿಕ ಸೌಂದರ್ಯಕ್ಕಷ್ಟೇ ಅಲ್ಲದೆ ಐತಿಹಾಸಿಕವಾಗಿಯೂ ಈ ಪ್ರದೇಶ ಪ್ರಸಿದ್ಧಿ ಪಡೆದಿದೆ. ಹಿಂದೆ, ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಹೋರಾಟ ನಡೆಸಿದ್ದ ಶಿವಾಜಿ ಮಹಾರಾಜ್ ಈ ಗುಡ್ಡದ ಮೇಲಿನ ಸದಾಶಿವಗಡ ಕೊಟೆಯಲ್ಲಿ ಬಂದು ನೆಲೆಸಿದ್ದ ಎಂಬ ಇತಿಹಾಸ ಇದೆ. ಸಮುದ್ರದ ಅಂಚಿನಲ್ಲಿ ಕೊಟೆ ಇರುವುದರಿಂದ, ಮುಂಬೈಯಿಂದ ಗೋವಾ ಹಾಗೂ ಕರ್ನಾಟಕ ನಡುವಿನ ಆಮದು-ರಪ್ತು ವ್ಯವಹಾರಕ್ಕೆ ಈ ಕೋಟೆ ಪ್ರಮುಖ ಪಾತ್ರವಹಿಸಿತ್ತು ಎಂದೂ ಹೇಳಲಾಗಿದೆ. ಇಂತಹ ಐತಿಹಾಸಿಕ ಕೊಟೆಗೆ ಆಧುನಿಕತೆಯ ಸ್ಪರ್ಶ ಕೊಡುವುದರ ಬದಲು, ಅದರ ಗೋಡೆ ಕೆಡವಿ ಹೊಸ ರೆಸಾರ್ಟ್ ನಿರ್ಮಾಣ ಮಾಡಲು ರಾಜ್ಯದ ಜಂಗಲ್ ಲಾಡ್ಜ್ ಹಾಗೂ ರೆಸಾರ್ಟ್ನವರು ಮುಂದಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 4 ಶತಮಾನಗಳ ಇತಿಹಾಸವುಳ್ಳ ಸುಂದರವಾದ ಕೊಟೆಯ ಜೊತೆ ಸ್ಥಳೀಯರು ಅವಿನಾಭವ ಸಂಬಂಧ ಹೊಂದಿದ್ದಾರೆ. ಸದಾಶಿವರಾಯ ಎಂಬ ರಾಜ ಈ ಕೊಟೆ ಕಟ್ಟಿದ್ದರಿಂದ ಕಾಳಿ ನದಿಯಂಚಿನ ಈ ಗ್ರಾಮಕ್ಕೆ ಸದಾಶಿವ ಗಡ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ತಮ್ಮೂರಿನ ನಿರ್ಮಾತೃವಿನ ಕನಸಿನ ಕೂಸಾದ ಸದಾಶಿವಗಡ ಕೊಟೆ ಪ್ರದೇಶದಲ್ಲಿ ಈಗಾಗಲೇ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ಆದರೆ, ಇನ್ನಷ್ಟು ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಕೊಟೆಗೆ ಹೊಂದಿರುವ ಗುಡ್ಡಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಕಾಮಗಾರಿ ಪೂರ್ಣಗೊಳಿಸಲು ಬಿಡಬಾರದು. ತಕ್ಷಣ ಕಾಮಗಾರಿ ಕೈಬಿಡಬೇಕೆಂದು ಸ್ಥಳೀಯರು ಜಿಲ್ಲಾಡಳಿತ ಮತ್ತು ಸ್ಥಳಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಜಲಪಾತಗಳಿಗೆ ಜೀವ ಕಳೆ ತಂದ ಮುಂಗಾರು: ಪ್ರವಾಸಿಗರನ್ನ ಸೆಳೆಯುತ್ತಿದೆ ಮಾಗೋಡು ಫಾಲ್ಸ್
ಒಟ್ಟಾರೆಯಾಗಿ, ಐತಿಹಾಸಿಕ ಕೋಟೆ ಹೊಂದಿರುವ ಗುಡ್ಡದಲ್ಲಿ ರೆಸಾರ್ಟ್ ನಿರ್ಮಾಣದಿಂದ ಕೊಟೆಯ ಕಟ್ಟಡಕ್ಕೆ ಧಕ್ಕೆ ಬರುವುದಲ್ಲದೆ, ಅದರ ಐತಿಹಾಸಿಕ ಸಂರಚನೆಗೂ ಧಕ್ಕೆಯಾಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ಆದಷ್ಟು ಬೇಗ ರೆಸಾರ್ಟ್ ನಿರ್ಮಾಣ ಕಾಮಗಾರಿ ಕೈ ಬಿಡದೆ ಇದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ