ಕಾರವಾರ ಸೇತುವೆ ಕುಸಿತ: ಕಾಳಿ ನದಿಗೆ ಬಿದ್ದು ಬದುಕಿ ಬಂದ ರೋಚಕ ಅನುಭವ ವಿವರಿಸಿದ ಲಾರಿ ಚಾಲಕ ಬಾಲ ಮುರುಗನ್

| Updated By: ಗಣಪತಿ ಶರ್ಮ

Updated on: Aug 07, 2024 | 10:41 AM

ಕೋಡಿಭಾಗ್ ಸೇತುವೆಯಿಂದ ಲಾರಿ ಸಮೇತ ಕಾಳಿ ನದಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾದ ತಮಿಳುನಾಡಿನ ಚಾಲಕ ಬಾಲ ಮುರುಗನ್ ರಾತ್ರಿ ಸಂಭವಿಸಿದ ಭಯಾನಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯಿಂದ ಶಾಕ್ ಆಗಿರುವುದಾಗಿಯೂ ಹೇಳಿದ್ದಾರೆ. ಬಾಲ ಮುರುಗನ್ ಹೇಳಿದ್ದೇನೆಂಬ ವಿವರ ಇಲ್ಲಿದೆ.

ಕಾರವಾರ ಸೇತುವೆ ಕುಸಿತ: ಕಾಳಿ ನದಿಗೆ ಬಿದ್ದು ಬದುಕಿ ಬಂದ ರೋಚಕ ಅನುಭವ ವಿವರಿಸಿದ ಲಾರಿ ಚಾಲಕ ಬಾಲ ಮುರುಗನ್
ಕೋಡಿಭಾಗ್ ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಿರುವುದು
Follow us on

ಕಾರವಾರ, ಆಗಸ್ಟ್ 7: ‘ಆ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದೇನೆ. ನನ್ನನ್ನು ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ತಮಿಳುನಾಡು ಮೂಲದ ಲಾರಿ ಚಾಲಕ ಬಾಲ ಮುರುಗನ್ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಕೋಡಿಭಾಗ್ ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಾಗ ಅದರೊಂದಿಗೆ ನದಿಗೆ ಬಿದ್ದ ಲಾರಿಯ ಚಾಲಕ ಬಾಲ ಮುರುಗನ್ ಸದ್ಯ ಆಸ್ಪತ್ರೆಯಲ್ಲಿ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಸೇತುವೆ ಕುಸಿತದಿಂದ ಇನ್ನಷ್ಟು ವಾಹನಗಳು ನದಿಗೆ ಬಿದ್ದಿವೆಯಾ? ಪ್ರಾಣ ಹಾನಿ ಸಂಭವಿಸಿದೆಯಾ ಎಂಬುದನ್ನು ತಿಳಿಯುವುದಕ್ಕಾಗಿ ಕಾರವಾರ ಪೊಲೀಸರು ಚಾಲಕನಿಂದ ಮಾಹಿತಿ ಪಡೆದರು. ಇದೇ ವೇಳೆ ಅವರು ಸೇತುವೆ ಕುಸಿತ, ಅದರಿಂದ ಪಾರಾದ ರೋಚಕ ಅನುಭವ ತಿಳಿಸಿದ್ದಾರೆ.

ಸೇತುವೆ ಕುಸಿದ ಸಂದರ್ಭದಲ್ಲಿ ಲಾರಿಯ ಹಿಂದೆ ಅಥವಾ ಮುಂದೆ ಬೇರೆ ವಾಹನ ಸಂಚರಿಸುತ್ತಿತ್ತೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಚಾಲಕ ಬಾಲ ಮುರುಗನ್ ಹೇಳಿದ್ದೇನು?

ಲಾರಿ ಚಾಲನೆ ಮಾಡುವ ಸಂದರ್ಭದಲ್ಲಿ ಯಾವುದೇ ವಾಹನಗಳು ಸೇತುವೆ ಮೇಲಿರಲಿಲ್ಲ. ನಾನೊಬ್ಬನೇ ಸೇತುವೆ ಮೇಲೆ ಲಾರಿ ಚಲಾಯಿಸುತ್ತಿದೆ. ಸಂಚಾರ ಮಾಡುವಾಗ ಅವಘಡ ಸಂಭವಿಸಿದೆ. ನಾನು ಈಗ ಪ್ರಾಣಾಪಾಯದಿಂದ ಪಾರಾಗಿದ್ದು ಅಚ್ಚರಿಯಾಗಿದೆ. ಜತೆಗೆ ಘಟನೆಯಿಂದ ಮನಸಿಗೆ ಆಘಾತ ಆಗಿದೆ. ರಕ್ಷಣೆ ಮಾಡಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಚಾಲಕ ಬಾಲ ಮುರುಗನ್ ಹೇಳಿದ್ದಾರೆ.

ಇದನ್ನೂ ಓದಿ: ಕಾರವಾರ: ಕಾಳಿ ನದಿಗೆ ಬಿದ್ದ ಕೋಡಿಭಾಗ್ ಸೇತುವೆ, ಶೋಧಕಾರ್ಯ ಮುಂದುವರಿಕೆ

ಅವಘಡ ಸಂಭವಿಸಿದ್ದಕ್ಕೆ ಐಆರ್​​ಬಿ ವಿರುದ್ಧ ಕಾರವಾರ ಪೊಲೀಸರು ಇನ್ನೊಂದು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಕಾರವಾರ ಬಳಿ ಮಧ್ಯ ರಾತ್ರಿ ಏಕಾಏಕಿ ಕುಸಿದ ಸೇತುವೆ, ನದಿಗೆ ಬಿದ್ದ ಲಾರಿ ಚಾಲಕನ ಜೀವ ಉಳಿಸಿದ ಖಾಕಿ

ಏತನ್ಮಧ್ಯೆ, ರಕ್ಷಣಾ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಇದುವರೆಗೂ ಯಾರೂ ನಾಪತ್ತೆಯಾಗಿರುವ ಬಗ್ಗೆ ಹಾಗೂ ಪ್ರಾಣಹಾನಿ ಆಗಿರುವುದು ಕಂಡು ಬಂದಿಲ್ಲ. ಜಿಲ್ಲಾಡಳಿತದ ಇದುವರೆಗಿನ ಮಾಹಿತಿ ಪ್ರಕಾರ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Wed, 7 August 24