ಉತ್ತರ ಕನ್ನಡ, ಮೇ.17: ಜಿಲ್ಲೆಯ ಭಟ್ಕಳ(Bhatkal) ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ತಾಲೂಕಿನ ಕಂಡೆಕೋಡ್ಲು ನಿವಾಸಿಗಳಾದ ಸೂರಜ್ ನಾಯ್ಕ(15) ಹಾಗೂ ಪಾರ್ವತಿ ಶಂಕರ್ ನಾಯ್ಕ(35) ಮೃತರು. 15ಕ್ಕೂ ಹೆಚ್ಚು ಜನ ಹೊಳೆಯಲ್ಲಿ ಸ್ನಾನ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಗಲಕೋಟೆ: ಮುಧೋಳ ತಾಲೂಕಿನ ಜಾಡರ ಅರಳಿಕಟ್ಟಿ ಗ್ರಾಮದ ಬಳಿಯ ಜಮೀನೊಂದರಲ್ಲಿ ಸಿಡಿಲು ಬಡಿದು ಮಲ್ಲಾಪುರ ಪಿ.ಎಲ್.ಗ್ರಾಮದ ನಿವಾಸಿ 16 ವರ್ಷದ ಭಾಗ್ಯಶ್ರೀ ಪಡೆಪ್ಪನವರು ಎಂಬುವವರು ಮೃತರಾಗಿದ್ದಾರೆ. ಪೋಷಕರ ಜೊತೆ ಹೊಲದಲ್ಲಿ ಕೃಷಿ ಕೆಲಸ ಮಾಡುವಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಲೋಕಾಪುರ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ಹಾಸನ ದುರ್ಘಟನೆ ಮಾಸುವ ಮುನ್ನವೇ ರಾಮನಗರದಲ್ಲೂ ಮೂವರು ಬಾಲಕರು ಜಲಸಮಾಧಿ
ತುಮಕೂರು: ಸಿಡಿಲು ಬಡಿದು ಹಸುವೊಂದು ಸಾವನ್ನಪ್ಪಿದ್ದು, ನಾಲ್ಕು ಜಾನುವಾರುಗಳಿಗೆ ಗಾಯವಾದ ಘಟನೆ ಪಾವಗಡ ತಾಲೂಕಿನ ರಂಗಸಮುದ್ರದಲ್ಲಿ ನಡೆದಿದೆ. ಕರಿಯಪ್ಪ ಎಂಬುವರಿಗೆ ಸೇರಿದ ಜಾನುವಾರುಗಳು ಇದಾಗಿದ್ದು, ತೋಟದಲ್ಲಿದ್ದ ಗುಡಿಸಿಲಿನ ಕೊಟ್ಟಿಗೆಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮ ಗುಡಿಸಲಿಗೆ ಬೆಂಕಿ ತಗುಲಿ ಸುಟ್ಟುಭಸ್ಮವಾಗಿದೆ. ಈ ಘಟನೆ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ನಗರದ ಕೆ.ಆರ್.ಎಸ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಹೆಬ್ಬಾಳು ಬಡಾವಣೆ ನಿವಾಸಿ ರಾಧಾ(34) ಕೊನೆಯುಸಿರು. ಸ್ಥಳಕ್ಕೆ ವಿ ವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ