ಉತ್ತರ ಕನ್ನಡದಲ್ಲಿ ನೀರಿನ ಅಭಾವ; 45 ಗ್ರಾಮಗಳಲ್ಲಿ ವಾರಕ್ಕೊಮ್ಮೆಯೂ ಸಿಗ್ತಿಲ್ಲ ಕುಡಿಯುವ ನೀರು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 15, 2024 | 10:17 PM

ರಾಜ್ಯದ ಹಲವೆಡೆ ಈಗಾಗಲೇ ಮಳೆ ಆರಂಭ ಆಗಿದೆ. ಆದ್ರೆ, ಉತ್ತರ ಕನ್ನಡ ಜಿಲ್ಲೆಯ 165 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮುಂದುವರೆದಿದೆ. ಜನರ ಕುಡಿಯುವ ನೀರಿನ ಬವಣೆ ತಪ್ಪಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಆದ್ರೆ, ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಉತ್ತರ ಕನ್ನಡದಲ್ಲಿ ನೀರಿನ ಅಭಾವ; 45 ಗ್ರಾಮಗಳಲ್ಲಿ ವಾರಕ್ಕೊಮ್ಮೆಯೂ ಸಿಗ್ತಿಲ್ಲ ಕುಡಿಯುವ ನೀರು
ಉತ್ತರ ಕನ್ನಡದಲ್ಲಿ ನೀರಿನ ಅಭಾವ
Follow us on

ಉತ್ತರ ಕನ್ನಡ, ಮೇ.15: ಈ ಬಾರಿ ಉತ್ತರ ಕನ್ನಡ(Uttara Kannada) ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ 165 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಬರ ಬಂದಿದ್ದರೇ, 46 ಹಳ್ಳಿಗಳಲ್ಲಿ ಬಾವಿ, ಬೋರ್ವೆಲ್​ಗಳು ಬತ್ತಿಹೋಗಿ ವಾರಕ್ಕೆ ಒಂದು ಬಾರಿ ಮಾತ್ರ ನೀರು ಕಾಣುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಪಂಚಾಯತಿಯಿಂದ ನಿರ್ಮಾಣವಾಗಿರುವ 241 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸೂಕ್ತ ನಿರ್ವಹಣೆ ಕೊರತೆ, ವಿದ್ಯುತ್ ಸಂಪರ್ಕ ಸಮಸ್ಯೆಯಿಂದಾಗಿ 224 ಘಟಕಗಳು ಸ್ಥಗಿತವಾಗಿದೆ. ಮುಂಡಗೋಡ, ಸಿದ್ಧಾಪುರ ಹಾಗೂ ಕುಮಟಾ ಭಾಗದಲ್ಲಿ ಬಾವಿಗಳು ,ಬೋರ್ವೆಲ್​ಗಳಲ್ಲಿ ನೀರು ತಳ ಹಿಡಿದು, ಅಶುದ್ಧ ನೀರು ಬರತೊಡಗಿದೆ.

ಮಲೆನಾಡು ಭಾಗದಲ್ಲಿ 120 ಕ್ಕೂ ಹೆಚ್ಚು ಬೋರ್ವೆಲ್​ಗಳು, 80 ಕ್ಕೂ ಹೆಚ್ಚು ಸಾರ್ವಜನಿಕ ಬಾವಿಗಳು ಬತ್ತಿ ಹೋಗಿದೆ. ಪರ್ಯಾಯ ವ್ಯವಸ್ಥೆಗಳು ಸಹ ಕೈಕೊಟ್ಟಿದ್ದು, ಒಟ್ಟು 11 ತಾಲೂಕುಗಳಲ್ಲಿ ಖಾಸಗಿ ಟ್ಯಾಂಕರ್ ಸಹಯೋಗದಲ್ಲಿ ಕುಡಿಯುವ ನೀರು ವಿತರಿಸುವ ಕೆಲಸ ಮಾಡಲಾಗುತಿದ್ದು, ಹಲವು ಕಡೆ ತುರ್ತು ಬೋರ್ವೆಲ್​ಗಳನ್ನು ತೆಗೆದರೂ ನೀರು ಸಿಗದೇ ತೊಂದರೆಗಳಾಗುತ್ತಿವೆ‌.

ಇದನ್ನೂ ಓದಿ:ಕರ್ನಾಟಕದಲ್ಲಿ ಭೀಕರ ಬರದ ನಡುವೆ ನೀರಿಗಾಗಿ ಮತ್ತೆ ಕ್ಯಾತೆ ತೆಗೆದ ತಮಿಳುನಾಡು

ಜೀವಜಲ ಕಾರ್ಯಪಡೆ ಶಿರಸಿ ತಂಡದಿಂದ ನೀರು

ಜಿಲ್ಲೆಯ ಅಂಕೋಲ ,ಕಾರವಾರದಲ್ಲಿ ಬಾವಿಯಲ್ಲಿ ಉಪ್ಪು ನೀರು ತುಂಬಿದರೆ, ಮಲೆನಾಡಿನ ಶಿರಸಿಯಲ್ಲಿ ಸಾರ್ವಜನಿಕ ಬಾವಿಗಳು ಬತ್ತಿಹೋಗಿದೆ. ಶಿರಸಿಯ ಕಸ್ತೂರಬಾ ನಗರದಲ್ಲಿ ವಾರದಿಂದ ಒಂದು ಕೊಡ ಕುಡಿಯುವ ನೀರು ಸಹ ಸಿಗದೇ ಜನ ಪರಬಾಡದ ಪಾಡು ಪಡುತಿದ್ದು, ನಗರಸಭೆ ವತಿಯಿಂದ ನಿಗದಿತ ಕುಡಿಯುವ ನೀರು ಪೂರೈಕೆಯಾಗದೇ ಜೀವಜಲ ಕಾರ್ಯಪಡೆ ಶಿರಸಿ ತಂಡ ಇದೀಗ ನಗರಸಭೆ ಸಹಯೋಗದಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡುವ ಕಾರ್ಯಕ್ಕೆ ಕೈ ಹಾಕಿದೆ.

ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಮುಗಿಲು ಮುಟ್ಟಿದೆ. ರಾಜ್ಯದ ಹಲವು ಭಾಗದಲ್ಲಿ ಮಳೆ ಬಂದರೂ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಹನಿಯೇ ಕಂಡಿಲ್ಲ. ಇನ್ನೆರೆಡು ದಿನದಲ್ಲಿ ಉತ್ತಮ ಮಳೆಯಾಗದಿದ್ದರೇ ಜಿಲ್ಲೆಯ ನದಿ ಮೂಲಗಳು ಸಹ ಬತ್ತಿಹೋಗುವ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ