ಬರದ ಎಫೆಕ್ಟ್! ಖಾಲಿ ಕೆರೆಯಲ್ಲಿ ನೀರಿಗಾಗಿ ಕಾಡಾನೆ ಓಡಾಟ; ವಿಡಿಯೋ ವೈರಲ್
ಈ ಬಾರಿ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಕುಡಿಯುವ ನೀರಿಗೂ ಕೂಡ ತತ್ವಾರ ಎದುರಾಗಿದೆ. ಇನ್ನು ಜನರಷ್ಟೇ ಅಲ್ಲ ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳಿಗೂ ಕೂಡ ನೀರಿನ ಸಮಸ್ಯೆಯಿದೆ. ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಆನೆಯೊಂದು ನೀರಿಗಾಗಿ ಕೆರೆಯ ಬಳಿ ಅಲೆದಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಮರಾಜನಗರ, ಮೇ.15: ಅರಣ್ಯದಲ್ಲಿ ನೀರಿಲ್ಲದ ಪರಿಣಾಮ ಕಾಡಾನೆಯೊಂದು(Wild Elephant) ತನ್ನ ದಾಹ ನೀಗಿಸಿಕೊಳ್ಳಲು ಚಾಮರಾಜನಗರ ಜಿಲ್ಲೆಯ ಹನೂರು(Hanur) ತಾಲ್ಲೂಕಿನ ಮಾರ್ಟಳ್ಳಿಯ ಕಿರಪಾತಿಗೆ ಕೆರೆಗೆ ಬಂದಿದೆ. ನೀರಿನ ದಾಹ ತಾಳಲಾರದ ಆನೆಯೂ ಕಳೆದ ಮೂರು ದಿನಗಳಿಂದ ಇಲ್ಲಿಗೆ ಲಗ್ಗೆ ಇಡುತ್ತಿದ್ದು, ನೀರು ಸಿಗದೆ ವಾಪಾಸ್ಸಾಗಿದೆ. ಈ ಭಾಗದಲ್ಲಿ ರಾತ್ರಿ ವೇಳೆ ಮಾತ್ರ ಕಾಡಾನೆಗಳು ಕಾಣ ಸಿಗುತ್ತಿದ್ದವು. ಆದರೆ, ಈಗ ಹಗಲಿನಲ್ಲೇ ಹಸು, ಎಮ್ಮೆ ಕುರಿಗಳಂತೆ ಕಾಡಾನೆ ದಾಹ ಇಂಗಿಸಿಕೊಳ್ಳಲು ಇಲ್ಲಿಗೆ ಬರುತ್ತಿವೆ. ಕಾಡು ಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಅರಣ್ಯ ಇಲಾಖೆ ನೀರಿನ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಸ್ಥಳೀಯರ ಮೊಬೈಲ್ನಲ್ಲಿ ಆನೆ ಓಡಾಟದ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಕಾಡಾನೆ ಓಡಾಟದ ಬಗ್ಗೆ ಅರಣ್ಯಾಧಿಕಾರಿಗಳ ಬಗ್ಗೆ ಕೇಳಿದ್ರೆ, ‘ಅದು ಕೂಡ ಕಾಡಂಚಿನ ಪ್ರದೇಶವಾಗಿದೆ. ಸದ್ಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನೀರಿನ ಸಮಸ್ಯೆಯಿಲ್ಲ. ಆನೆ ಬುದ್ದಿವಂತ ಪ್ರಾಣಿ. ನೀರು ಹರಿಯುವ ಕಡೆಗೆ ಅದೇ ಹೋಗುತ್ತದೆ. ಮಾರ್ಟಳ್ಳಿ ಸುತ್ತಲೂ ಕೂಡ ಪ್ರಾಣಿಗಳಿಗೆ ನೀರಿನ ಸಮಸ್ಯೆಯಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಆದ್ರೆ, ಚಾಮರಾಜನಗರದ ಬಂಡೀಪುರ, ಬಿಆರ್ ಟಿ, ಮಲೆ ಮಹದೇಶ್ವರ, ಕಾವೇರಿ ವನ್ಯಧಾಮ ಎಲ್ಲಾ ಕಡೆಯೂ ಕೂಡ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಕೆಲವು ಕೆರೆಗಳು ಒಣಗಿ ಹೋಗಿವೆ.
ಇದನ್ನೂ ಓದಿ:ಕಾರ್ಮಿಕನನ್ನ ಕೊಂದಿದ್ದ ಕಾಡಾನೆ ಅನುಮಾನಾಸ್ಪದವಾಗಿ ಸಾವು; ತನಿಖೆಗೆ ಪರಿಸರವಾದಿಗಳ ಆಗ್ರಹ
ಒಟ್ಟಿನಲ್ಲಿ ಕಾಡಾನೆಯೊಂದು ಕೆರೆಯಲ್ಲಿ ನೀರಿಗಾಗಿ ಓಡಾಡುವ ದೃಶ್ಯ ವೈರಲ್ ಆಗಿದ್ದು, ಜನ-ಜಾನುವಾರುಗಳಂತೆಯೇ ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿನ ಅಭಾಯ ಉಂಟಾಗುತ್ತಿದೆ ಎಂಬ ಚರ್ಚೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಿ ನೀರಿನ ಕೊರತೆಯಾಗಿದೆಯೂ ಅಲ್ಲಿ ಪ್ರಾಣಿಗಳಿಗೆ ನೀರು ಪೂರೈಸುವ ಕೆಲಸಕ್ಕೆ ಮುಂದಾಗಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ