ಮತ್ತೊಮ್ಮೆ ಸುದ್ದಿಯಾದ ಕಾರವಾರ ಕಾರಾಗೃಹ; ಕೈದಿಗಳ ಬಳಿ ಏಳು ಮೊಬೈಲ್ ಪತ್ತೆ
ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿಯಿದ್ದ ಏಳು ಮೊಬೈಲ್‌ಗಳು ಮತ್ತು ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ತಂಬಾಕು ನಿರಾಕರಿಸಿದ್ದಕ್ಕೆ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ, ಜೈಲಿನಲ್ಲಿ ಟಿವಿ ನಾಶಪಡಿಸಿದ ಘಟನೆಗಳು ನಡೆದಿವೆ. ಈ ಸರಣಿ ಘಟನೆಗಳ ನಂತರ ಕೈಗೊಂಡ ತಪಾಸಣೆಯಲ್ಲಿ ಮೊಬೈಲ್‌ಗಳು ಪತ್ತೆಯಾಗಿವೆ. ಇದು ಕಾರಾಗೃಹದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾರವಾರ, ಡಿಸೆಂಬರ್ 15: ಕಾರವಾರ ನಗರದ ಜಿಲ್ಲಾಕಾರಗೃಹದಲ್ಲಿ (Karwar Jail) ಕೆಲವೇ ದಿನಗಳ ಹಿಂದೆ ತಂಬಾಕು ನೀಡಿಲ್ಲವೆಂಬ ಕಾರಣಕ್ಕೆ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಮಂಗಳೂರು ಮೂಲದ ಮೂವರು ರೌಡಿಗಳು ಹಲ್ಲೆ ಮಾಡಿದ್ದರು. ಅದಾದ ಬಳಿಕವೂ ಗ್ಯಾಂಗ್ಗೆ ಸೇರಿದ ಇಬ್ಬರು ಮತ್ತೊಮ್ಮೆ ಗಲಾಟೆ ಮಾಡಿ, ಟಿವಿ ಸೇರಿ ಹಲವು ವಸ್ತುಗಳನ್ನು ನಾಶ ಮಾಡಿದ್ದರು. ಇದೀಗ ಮತ್ತೊಮ್ಮೆ ಕಾರಾಗೃದ ಸುದ್ದಿಯಾಗಿದ್ದು, ಜೈಲಿನಲ್ಲಿ ಏಳು ಮೊಬೈಲ್ ಪತ್ತೆಯಾಗಿದೆ.
ಕೈದಿಗಳ ತಪಾಸಣೆಯಲ್ಲಿ ಫೋನ್ ಪತ್ತೆ
ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಳಿಯಿದ್ದ ಏಳು ಮೊಬೈಲ್‌ಗಳು ಹಾಗೂ ಚಾರ್ಜರ್‌ಗಳನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರ ನೇತೃತ್ವದಲ್ಲಿ ನಡೆಸಿದ ತಪಾಸಣೆಯಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಇತ್ತೀಚೆಗೆ ಮಾದಕ ವಸ್ತು ನೀಡಲಿಲ್ಲ ಎಂಬ ಕಾರಣಕ್ಕೆ ಕೈದಿಗಳು ಜೈಲು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಲ್ಲದೇ, ಮತ್ತೊಂದು ಘಟನೆಯಲ್ಲಿ ಜೈಲಿನ ಟಿವಿಯನ್ನು ಒಡೆದುಹಾಕಿದ್ದರು. ಈ ಹಿನ್ನಲೆಯಲ್ಲಿ ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಜೈಲು ಅಧಿಕಾರಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಗಲಾಟೆ: ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ದಾಂಧಲೆ
ಒಂದೇ ವಾರದಲ್ಲಿ ಹಲವು ಬಾರಿ ಗಲಾಟೆ
ಕಳೆದ ವಾರ ಜೈಲಿನಲ್ಲಿ ತಂಬಾಕು ಬಳಕೆಗೆ ಅನುಮತಿ ನೀಡಲಿಲ್ಲವೆಂಬ ಕಾರಣಕ್ಕೆ ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬ ಕೈದಿಗಳು ಜೈಲರ್ ಮೇಲೆ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಘಟನೆ ತಿಳಿದ ಕೂಡಲೆ 20 ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಹಲ್ಲೆಗೈದವರ ಮೇಲೆ ಕ್ರಮ ಕೈಗೊಂಡಿದ್ದರು. ಅಷ್ಟೇ ಅಲ್ಲದೆ ಅದೇ ಗ್ಯಾಂಗ್ಗೆ ಸೇರಿದ ಕಬೀರ್ ಮತ್ತು ನೌಶಾದ್ ಎಂಬ ಕೈದಿಗಳು ಜೈಲಿನಲ್ಲಿ ಗಲಾಟೆ ಮಾಡುವುದರ ಜೊತೆಗೆ ಟಿವಿಯನ್ನು ಒಡೆದು ಹಾಕಿ, ಹಲವು ವಸ್ತುಗಳನ್ನು ನಾಶಮಾಡಿದ್ದರು. ತಕ್ಷಣವೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿದ್ದರು. ಇದೀಗ ಮತ್ತೆ ಇಂತಹದ್ದೇ ಘಟನೆ ನಡೆದಿದ್ದು, ಕಾರಾಗೃಹದ ಸುರಕ್ಷತೆ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ.
ಸೂರಜ್ ಉತ್ತುರೆ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




