
ಕಾರವಾರ, ಜನವರಿ 19: ಕಾರವಾರ ಜೆಡಿಎಸ್ (JDS) ಮುಖಂಡೆ ಪುತ್ರನ ಕಿರುಕಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ (suicide) ಪ್ರಕರಣ ಈಗಾಗಲೇ ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗಿದೆ. ಇತ್ತೀಚೆಗೆ ಕದ್ರಾ ಪಿಎಸ್ಐಯನ್ನು ಅಮಾನತು ಕೂಡ ಮಾಡಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡು ಇವತ್ತಿಗೆ 11ನೇ ದಿನ. ಇದುವರೆಗೂ ಆರೋಪಿಯನ್ನ ಏಕೆ ಬಂಧಿಸಿಲ್ಲ? ಇದರಲ್ಲಿ ರಾಜಕೀಯ ಪ್ರಭಾವವಿರುವುದು ಗೊತ್ತಾಗುತ್ತಿದೆ ಎಂದು ಮೃತ ಯುವತಿಯ ತಾಯಿ ರೀನಾ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೀನಾ ಡಿಸೋಜಾ, ನನ್ನ ಮಗಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಈಗ ಪಿಎಸ್ಐ ಸಸ್ಪೆಂಡ್ ಮಾಡಲಾಗಿದೆ. ಆದರೆ ಇದರಲ್ಲಿ ಅವರ ಮೇಲಿನವರ ಕೈವಾಡದ ಶಂಕೆ ಇದೆ. ಕಾಣದ ಕೈಗಳು ನನ್ನ ಮಗಳ ಪ್ರಕರಣದಲ್ಲಿ ಕೆಲಸ ಮಾಡುತ್ತಿವೆ. ಅವರ ವಿರುದ್ಧ ಏಕೆ ಇದುವರೆಗೂ ಕ್ರಮಕೈಗೊಂಡಿಲ್ಲ? ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆಲ್ಲಾ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.
ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ
ನನ್ನ ಮಗಳು ಚಿರಾಗ್ ನನ್ನ ಪ್ರೀತಿಸುತ್ತಿದ್ದಳು ಎಂಬುವುದು ನನಗೆ ಗೊತ್ತಿರಲಿಲ್ಲ. ನನ್ನ ಗಮನಕ್ಕೆ ಬಂದಾಗ ಮಗಳಿಗೆ ಒಮ್ಮೆ ಬುದ್ದಿ ಹೇಳಿದ್ದೆ. ಕೆಲವು ದಿನ ನನ್ನ ಮಗಳು ಚಿರಾಗ್ ಜೊತೆಗೆ ಮಾತನಾಡಿರಲಿಲ್ಲ. ಆಗ ಅವರ ಕಡೆಯಿಂದ ಓರ್ವ ನನಗೆ ಕರೆ ಮಾಡಿ ಬೆದರಿಸಿದ್ದ. ರಿಶೇಲ, ಚಿರಾಗ್ ಜೊತೆ ಏಕೆ ಮಾತನಾಡುತ್ತಿಲ್ಲ, ಏನು ಹೇಳಿದ್ದೀಯಾ ಅವಳಿಗೆ. ಅವಳು ಚಿರಾಗ್ ಜೊತೆಗೆ ಮಾತನಾಡದಿದ್ದರೆ ಸರಿ ಇರಲ್ಲ ಎಂದಿದ್ದರು. ಆದರೆ ನಾನು ಅದಕ್ಕೆಲ್ಲಾ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ರಿಶೇಲ ತಾಯಿ ಹೇಳಿದ್ದಾರೆ.
ಅದಾದ ಬಳಿಕ ಅವರಿಬ್ಬರು ಯಾವಾಗ ಪ್ರೀತಿಸಲು ಆರಂಭಿಸಿದರು ಗೊತ್ತಿಲ್ಲ. ಚಿರಾಗ್ ತಾಯಿಗೆ ನನ್ನ ಮಗಳು ಅವರ ಮನೆಗೆ ಬರುತ್ತಿದ್ದಾಳೆ ಅಂತ ಗೊತ್ತಿದ್ದರೆ ಅವರ ತಾಯಿ ಏಕೆ ಒಮ್ಮೆಯೂ ನನಗೆ ಫೋನ್ ಮಾಡಿ ಹೇಳಿಲ್ಲ. 20 ವರ್ಷದ ಮಗ ಹುಡುಗಿನಾ ಮನೆಗೆ ಕರೆದುಕೊಂಡು ಬಂದರೂ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.
ನನ್ನ ಮಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ರೀಲ್ಸ್ ಬಗ್ಗೆ ನಮಗೆ ಮಾಹಿತಿ ಇಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸಾವಿಗೂ ಮುನ್ನ ಅವಳನ್ನ ಆ ಹುಡುಗ ಏನು ಮಾಡಿದ್ದಾನೆ, ಎಲ್ಲಿಗೆ ಕರೆದುಕೊಂಡು ಹೋಗಿ ಹಾಳು ಮಾಡಿದ್ದಾನೆ ಎಂಬುವುದು ಗೊತ್ತಾಗಬೇಕು. ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವುದಿಲ್ಲ. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಆಗಬೇಕೆಂದು ಡಿಸಿ ಮತ್ತು ಎಸಿಗೆ ಮನವಿ ಸಲ್ಲಿಸಿದ್ದಾನೆ ಎಂದು ರೀನಾ ಡಿಸೋಜಾ ಹೇಳಿದ್ದಾರೆ.
ಕಾರವಾರ ಕ್ರಿಶ್ಚಿಯನ್ ಫೋರಂ ಅಧ್ಯಕ್ಷ ಲಿಯೋ ಲೂಯಿಸ್ ಮಾತನಾಡಿ, ಪ್ರಕರಣ ಖಂಡಿಸಿ ನಾಳೆ (ಜ.20) ಕಾರವಾರದಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ರಿಶೇಲ ಸಾವಿಗೆ ನ್ಯಾಯ ಕೋರಿ ಕ್ರಿಶ್ಚಿಯನ್ ಸಂಘಟನೆಯಿಂದ ಕಾರವಾರ ನಗರದ ಮಿತ್ರ ಸಮಾಜ ಸರ್ಕಲ್ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್: 2 ಗ್ರಾಮಗಳ ಮಧ್ಯೆ ಮೂಡಿದ ವೈಮನಸ್ಸು
ಮೊದಲ ಮರಣೋತ್ತರ ವರದಿ ನೊಡಿದಾಗ ತಪ್ಪು ಕಂಡುಬರುತ್ತದೆ. ಬಹಳ ಬೇಜವಾಬ್ದಾರಿಯಿಂದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೆಲವು ವಿಚಾರದ ಬಗ್ಗೆ ವೈದ್ಯರನ್ನ ಪ್ರಶ್ನಿಸಿದಾಗ ಪೊಲೀಸ್ ಹಿರಿಯ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿಲ್ಲ ಅಂತ ಹೇಳಿದ್ದಾರೆ. ಈಗ ಓರ್ವ PSI ನನ್ನ ಸಸ್ಪೆಂಡ್ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಕಾಣದ ಕೈಗಳಿವೆ. ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ವೈದ್ಯಕೀಯ ಸಿಬ್ಬಂದಿಗೂ ಶಿಕ್ಷೆ ಆಗಬೇಕು. ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ಮಾಡಿ ಯುವತಿಯ ಸಾವಿಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:21 pm, Mon, 19 January 26