ಕಾರವಾರ: ಕಾಂಗ್ರೆಸ್ ನಾಯಕರ ಪ್ರತಿಷ್ಠೆಗೆ ಖಾಲಿ ಉಳಿದ ಅಪರ ಜಿಲ್ಲಾಧಿಕಾರಿ ಕುರ್ಚಿ
ಕಾಂಗ್ರೆಸ್ ನಾಯಕರಾದ ಮಾಂಕಾಳು ವೈದ್ಯ ಹಾಗೂ ಆರ್ವಿ ದೇಶಪಾಂಡೆ ಪ್ರತಿಷ್ಠೆಯ ಕದನದಿಂದಾಗಿ ಕಾರವಾರದಲ್ಲಿ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿಯೇ ಉಳಿಯುವಂತಾಗಿದೆ. ತಮ್ಮ ಗಮನಕ್ಕೆ ತಾರದೆ ವರ್ಗಾವಣೆ ಮಾಡಿದ್ದಾರೆ ಎಂಬ ಅಸಮಾಧಾನದಿಂದ ಅಪರ ಜಿಲ್ಲಾಧಿಕಾರಿಗೆ ಅಧಿಕಾರ ಸ್ವೀಕರಿಸಲು ಉಸ್ತುವಾರಿ ಸಚಿವರು ಅನುಮತಿ ಕೊಟ್ಟಿಲ್ಲ.
ಕಾರವಾರ, ಅಕ್ಟೋಬರ್ 16: ಕಾಂಗ್ರೆಸ್ ನಾಯಕರ ಪ್ರತಿಷ್ಠೆಯ ಕಾರಣಕ್ಕೆ ಕಾರವಾರದಲ್ಲಿ ಅಪರ ಜಿಲ್ಲಾಧಿಕಾರಿ ಕುರ್ಚಿ ಖಾಲಿಯೇ ಉಳಿಯುವಂತಾಗಿದೆ. ಸರ್ಕಾರದಿಂದ ಆದೇಶ ಪ್ರಕಟವಾಗಿ 15 ದಿನಗಳು ಕಳೆದರೂ ಅಪರ ಡಿಸಿ ಕುರ್ಚಿ ಖಾಲಿಯಾಗಿಯೇ ಇದೆ. ಸಚಿವ ಮಾಂಕಾಳು ವೈದ್ಯ ಅವರ ಹಸ್ತಕ್ಷೇಪವೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ.
ಕೆಎಎಸ್ ಅಧಿಕಾರಿಗೆ ಹಾಜರಾಗಲು ಸಚಿವ ಮಂಕಾಳು ವೈದ್ಯ ಬಿಡುತ್ತಿಲ್ಲ. ದೇಶಪಾಂಡೆ ಇಚ್ಛೆಯಂತೆ ಅಪರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಕ್ಕೆ ಮಂಕಾಳು ವೈದ್ಯ ಗರಂ ಆಗಿದ್ದಾರೆ. ತಮ್ಮ ಗಮನಕ್ಕೆ ಬಾರದೆ ಡಿಸಿ & ಅಪರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಕ್ಕೆ ಅವರು ಸಿಟ್ಟು ಮಾಡಿಕೊಂಡಿದ್ದು, ಕರ್ತವ್ಯಕ್ಕೆ ಹಾಜರಾಗಲು ಅಧಿಕಾರಿಗೆ ಅನುವು ಮಾಡಿಕೊಡುತ್ತಿಲ್ಲ ಎನ್ನಲಾಗಿದೆ.
2 ತಿಂಗಳ ಹಿಂದೆ ಅಂದಿನ ಡಿಸಿ ಗಂಗೂಬಾಯಿ ವರ್ಗಾವಣೆ ಮಾಡಲಾಗಿತ್ತು. ಕಳೆದ 15 ದಿನಗಳ ಹಿಂದೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ವರ್ಗಾವಣೆಯಾಗಿತ್ತು. ಪ್ರಕಾಶ್ ರಜಪೂತ್ರನ್ನು ಬಾಗಲಕೊಟೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಪ್ರಕಾಶ್ ರಜಪೂತ್ ಸ್ಥಾನಕ್ಕೆ ಕೆಎಎಸ್ ಅಧಿಕಾರಿ ಸಾಜಿದ್ ಮುಲ್ಲಾ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ಹಣ ಕೊರತೆ? ಮುರ್ಡೇಶ್ವರ, ಗೋಕರ್ಣದ ಲೈಫ್ ಗಾರ್ಡ್ಸ್ಗಳಿಗೆ ಕೊಟ್ಟಿಲ್ಲ ಮೂಲ ಸಲಕರಣೆ
ಅಧಿಕಾರ ಸ್ವೀಕರಿಸುವ ಬಗ್ಗೆ ಸಚಿವರ ಭೇಟಿಗೆ ಹೋಗಿದ್ದ ಸಾಜಿದ್ ಮುಲ್ಲಾಗೆ ಕೆಲಸಕ್ಕೆ ಹಾಜರಾಗದಂತೆ ಮಂಕಾಳು ವೈದ್ಯ ಸೂಚಿಸಿದ್ದಾರೆ. ಮಂಕಾಳು ಮಾತಿನಿಂದ ಕಂಗೆಟ್ಟು ಅಧಿಕಾರ ಸ್ವೀಕರಿಸದ ಸಾಜಿದ್ ಮುಲ್ಲಾ, ಸದ್ಯ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಆರ್ವಿ ದೇಶಪಾಂಡೆ, ಮಂಕಾಳು ಕಚ್ಚಾಟದಿಂದ ಅಧಿಕಾರಿಯ ಪರಿಸ್ಥಿತಿ ಅತಂತ್ರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ