ಹಣಕ್ಕಾಗಿ ವೃದ್ಧ ದೊಡ್ಡಪ್ಪ-ದೊಡ್ಡಮ್ಮನನ್ನೆ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್, ಸಮಾಧಾನಗೊಂಡ ಕುಟುಂಬಸ್ಥರು
ಪ್ರಕರಣದಲ್ಲಿ ಕೊಲೆ ಆರೋಪಿಗಳ ಹಿಡಿಯುವುದು ಪೊಲೀಸರಿಗೆ ಸವಾಲಾಗಿತ್ತು. ಗೆಳೆಯರೊಂದಿಗೆ ಆರೋಪಿ ಸುಕೇಶ್ ಕೊಲೆ ನಡೆಸಿದ್ದರೂ ಎಲ್ಲಿಗೂ ಹೋಗದೆ ಸುಮ್ಮನೆ ಮನೆಯಲ್ಲೇ ಇದ್ದ. ಆದರೆ 14ನೇ ದಿನ ಉತ್ತರಕ್ರಿಯೆಯಂದು ಪೊಲೀಸರು ತನಿಖೆಗೆ ಬರುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಣ್ಣನ ಬೈಕೇರಿ ಪರಾರಿಯಾಗಿದ್ದ.
ಆ ವೃದ್ಧ ದಂಪತಿ ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದರು. ಟ್ರಾನ್ಸಪೊರ್ಟ್ ಬಿಜಿನೆಸ್ ಇದ್ದಿದ್ದರಿಂದ ಮನೆಯಲ್ಲಿ ಹಣದ ವ್ಯವಹಾರ ನಡೆಯುತಿತ್ತು. ಆಗಾಗ ಮನೆಗೆ ಬಂದು ಹೋಗುತ್ತಿದ್ದ ತಮ್ಮನ ಮಗ ಸುಕೇಶ್ ದುಶ್ಚಟಕ್ಕೆ ಬಲಿಯಾಗಿ ಕೈ ತುಂಬಾ ಸಾಲ ಮಾಡಿದ್ದ. ಕೈ ಯಲ್ಲಿ ಹಣ ಇಲ್ಲದೆ ಕಂಗಾಲಾಗಿದ್ದ ಸುಕೇಶ್ ಹಣಕ್ಕಾಗಿ ತನ್ನ ಸ್ವಂತ ದೊಡ್ಡಪ್ಪ-ದೊಡ್ಡಮ್ಮ ದಂಪತಿಯನ್ನೆ ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿದ್ದ. ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಈ ಕೃತ್ಯಕ್ಕೆ ಕಾರವಾರ ಜಿಲ್ಲಾ ನ್ಯಾಯಾಲಯವು ಇದೀಗ ಜೀವಾವಧಿ ಶಿಕ್ಷೆ ನೀಡಿದೆ. ನಾಲ್ಕು ವರ್ಷಗಳ ನಂತರ ಮೃತರ ಆತ್ಮಕ್ಕೆ ಶಾಂತಿ ಸಿಕ್ಕಿತೆಂದು ಕುಟುಂಬಸ್ಥರು ಸಮಾಧಾನಗೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ಕೇಸ್ ಗೆದ್ದೆ ಎಂಬ ಖುಷಿಯಲ್ಲಿರುವ ವಕೀಲರು… ವಕೀಲರ ಕಾರ್ಯಕ್ಕೆ ಧನ್ಯವಾದ ತಿಳಿಸಿದ ಬಾಧಿತ ಕುಟುಂಬಸ್ಥರು… ಮೃತ ತಂದೆ ತಾಯಿಯ ಆತ್ಮಕ್ಕೆ ಶಾಂತಿ ಸಿಕ್ಕಿತೆಂಬ ಖುಷಿಯಲ್ಲಿರುವ ಮಕ್ಕಳು… ಈ ವಿದ್ಯಮಾನಗಳು ನಿನ್ನೆ ಮಂಗಳವಾರ ಕಂಡುಬಂದಿದ್ದು ಕಾರವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ. ಹೌದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ನಿವಾಸಿಗಳಾಗಿದ್ದ ನಾರಾಯಣ ನಾಯಕ್ (78) ಮತ್ತು ಸಾವಿತ್ರಿ ನಾಯಕ್ (74) ಎಂಬ ದಂಪತಿಯ ಹತ್ಯೆ ಮಾಡಿದ್ದ ಆರೋಪಿಗಳಿಗೆ ಕೊನೆಗೂ ನಾಲ್ಕು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆಯಾಗಿದೆ.
2019ರ ಡಿಸೆಂಬರ್ 20ರಂದು ಬೆಳ್ಳಂಬೆಳಿಗ್ಗೆ ನಡೆದಿದ್ದ ಈ ಬರ್ಬರ ಹತ್ಯೆ ಅಂದು ಅಂಕೋಲಾ ತಾಲೂಕನ್ನೇ ನಡುಗಿಸಿತ್ತು. ಮಧ್ಯ ರಾತ್ರಿ ಗಾಢ ನಿದ್ದೆಯಲ್ಲಿದ್ದ ನಾರಾಯಣ್ ದಂಪತಿ.. ಮನೆಯ ಹೊರಗಿದ್ದ ಕೋಳಿ ಗೂಡನ್ನು ಅಲುಗಾಡಿಸಿದ್ದ ಹಂತಕ ಪಡೆ ವೃದ್ಧ ನಾರಾಯಣ ನಾಯ್ಕ್ ಮನೆಯಿಂದ ಹೊರಕ್ಕೆ ಬರುವಂತೆ ಮಾಡಿದ್ದರು. ಬಳಿಕ ಗೋಡೆಗೆ ದೂಡಿ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಸಾಯಿಸಿದ್ದರು. ಅಲ್ಲದೇ, ಸಾವಿತ್ರಿ ನಾಯಕ್ ಅವರ ಕೈಕಾಲು ಬೆಡ್ ಶೀಟ್‌ನಲ್ಲಿ ಕಟ್ಟಿ ಮುಖ, ಮೂಗಿಗೆ ಗಮ್ ಟೇಪ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಮನೆಯಲ್ಲಿದ್ದ 2 ಲಕ್ಷ ರೂ. ನಗದು ಹಾಗೂ 160 ಗ್ರಾಂ ಚಿನ್ನ ತೆಗೆದುಕೊಂಡು ಶ್ವಾನದಳಕ್ಕೆ ತಮ್ಮ ಫಿಂಗರ್ ಪ್ರಿಂಟ್ ಹಾಗೂ ಹೆಜ್ಜೆ ಗುರುತುಗಳು ಸಿಗಬಾರದೆಂದು ಸ್ಥಳದಲ್ಲಿ ಮೆಣಸಿನ ಪುಡಿ ಹಾಕಿ ಪರಾರಿಯಾಗಿದ್ದರು. ಈ ಪ್ರಕರಣ ಪೊಲೀಸರಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಅತ್ತ, ಹಣಕ್ಕಾಗಿ ಮೃತರ ತಮ್ಮನಾದ ಚಂದ್ರು ಬೊಮ್ಮಯ್ಯ ನಾಯಕ್ ಅವರ ಮಗ ಆರೋಪಿ ಸುಕೇಶ್ ಹಾಗೂ ಆತನ ಗೆಳೆಯರಾದ ಬೆಂಗಳೂರಿನ ಜಿಗಣಿ ಮೂಲದ ವೆಂಕಟ್ ರಾಜ್, ನಾಗರಾಜ್ ಮತ್ತು ಭರತ ಎಂಬವರು ಸೇರಿ ವಯೋವೃದ್ಧರ ಬರ್ಬರ ಹತ್ಯೆ ಮಾಡಿದ್ದರು.
ಆದರೆ, ಆರೋಪಿ ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಆರೋಪಿ ಸಹಿತ ಆತನ ಗ್ಯಾಂಗ್ ಪೊಲೀಸರ ಬಲೆಗೆ ಸಿಲುಕಿ ಬಿದ್ದಿತ್ತು. ಪ್ರಕರಣ ಸಂಬಂಧಿಸಿ ಅಂದಿನ ಸರಕಾರಿ ಅಭಿಯೋಜಕಾಗಿದ್ದ ತನುಜಾ ಹೊಸಪಟ್ಟಣ ಹೋರಾಟ ನಡೆಸಿದ್ದರು. ಬಳಿಕ ಪ್ರಕರಣವನ್ನು ವಿಶೇಷ ಸರಕಾರಿ ಅಭಿಯೋಜಕರಾದ ಶಿವಪ್ರಸಾದ್ ಆಳ್ವ ಕೆ. ವಾದಿಸಿ ಆರೋಪಿಗಳಿಗೆ ಶಿಕ್ಷೆ ದೊರಕಿಸುವಲ್ಲಿ ಸಫಲರಾಗಿದ್ದಾರೆ. ಪ್ರಕರಣವನ್ನು ಅಲಿಸಿದ ಉತ್ತರ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ನಗದು ದಂಡ ಪಾವತಿಯ ಆದೇಶ ನೀಡಿ ತೀರ್ಪು ಪ್ರಕಟಿಸಿದ್ದು, ಕೊನೆಗೂ ಹಳೇ ಪ್ರಕರಣಕ್ಕೆ ನ್ಯಾಯ ದೊರಕಿದೆ.
ಅಂದಹಾಗೆ, ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿಗಳನ್ನು ಹಿಡಿಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಗೆಳೆಯರೊಂದಿಗೆ ಸೇರಿ ಆರೋಪಿ ಸುಕೇಶ್ ಕೊಲೆ ನಡೆಸಿದ್ದರೂ ತನ್ನ ಮನೆಯಲ್ಲೇ ಇದ್ದು ಎಲ್ಲಿಗೂ ಹೋಗದೆ ಸುಮ್ಮನೆ ಕುಳಿತಿದ್ದ. 14ನೇ ದಿನ ಉತ್ತರಕ್ರಿಯೆಯಂದು ಪೊಲೀಸರು ತನಿಖೆಗೆ ಬರುತ್ತಾರೆ. ಕುಟುಂಬದವರೆಲ್ಲರ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸ್ತಾರೆ ಎಂಬ ವಿಚಾರ ದೊರೆಯುತ್ತಿದ್ದಂತೆ ತನ್ನ ಅಣ್ಣನ ಬೈಕ್‌ನಲ್ಲಿ ಈತ ಪರಾರಿಯಾಗಿದ್ದ.
ತೆನಬೋಳೆ ಎಂಬಲ್ಲಿ ಬೈಕ್ ಬಿಟ್ಟು ತಲೆ ಮರೆಸಿಕೊಂಡಿದ್ದ ಈತ ಮೊಬೈಲ್ ಬಿಸಾಕಿ ಸಿಮ್ ಹಿಡಿದುಕೊಂಡು ಕಾಡಿನಲ್ಲೇ ಅವಿತುಕುಳಿತಿದ್ದ. ಸುಕೇಶ್ ಕಾಣೆಯಾಗಿದ್ದಾನೆ ಎಂದು ಆತನ ಪತ್ನಿ ಹಾಗೂ ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆ ಪೊಲೀಸರು ಹುಡುಕಾಟ ನಡೆಸಿದ್ದು, ಆತ ಸೂಸೈಡ್ ಮಾಡಿಕೊಂಡಿರಬಹುದಾ ಎಂದು ಪಾತಾಳ ಗರಡಿ ಹಾಕಿ ಹೊಳೆಯಲ್ಲೆಲ್ಲಾ ತಡಕಾಡಿದ್ದರು.
ಆದರೆ, ಎರಡು ದಿನಗಳ ಬಳಿಕ ಶಾಂತಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಈತ ಸಿಕ್ಕಾಗ ಸಂಶಯದಿಂದ ಪೊಲೀಸರು ಆತನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ತಾನೇ ಗೆಳೆಯರ ಜತೆ ಸೇರಿ ಕೊಲೆ ಮಾಡಿದ್ದ ನೈಜ ವಿಚಾರವನ್ನೆಲ್ಲಾ ಕಕ್ಕಿದ್ದ. ಉಳಿದವರನ್ನು ಬಂಧಿಸಿದ ಪೊಲೀಸರು ಮೊಬೈಲ್ ಡಿಟೇಲ್ಸ್ ಪರಿಶೀಲಿಸಿದಾಗ ನಾಲ್ವರು ಆರೋಪಿಗಳು ಬೆಂಗಳೂರಿನಿಂದ ಹಾವೇರಿಗೆ ಬಂದಿದ್ದು, ಅಲ್ಲಿಂದ ಮೊಬೈಲ್ ಸ್ವಿಚ್‌ಆಫ್ ಆಗಿ ಘಟನೆಯ ಬಳಿಕ ಮತ್ತೆ ಹಾವೇರಿಯಲ್ಲಿ ಆನ್ ಆಗಿ ಬೆಂಗಳೂರಿಗೆ ಪ್ರಯಾಣಿಸಿದ್ದ ಮಾಹಿತಿ ದೊರಕಿತ್ತು. ಅಲ್ಲದೇ, ಟೋಲ್‌ಗೇಟ್‌ನಲ್ಲೂ ಎರಡನೇ ಆರೋಪಿಯ ವಾಹನದಲ್ಲಿ ಮಾಸ್ಕ್ ಹಾಕಿಕೊಂಡು ಸಾಗಿದ್ದ ವಿಡಿಯೋ ಕೂಡಾ ಸಿಕ್ಕಿತ್ತು. ಪೊಲೀಸರು ಆರೋಪಿಗಳು ಕದ್ದ 160 ಗ್ರಾಂ ಚಿನ್ನ ಹಾಗೂ 2 ಲಕ್ಷ ರೂ. ನಗದಿನ ಪೈಕಿ 70 ಸಾವಿರ ರೂ. ವಶಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧಿಸಿ ನ್ಯಾಯ ದೊರಕಿರುವುದಕ್ಕೆ ಮೃತರ ಪುತ್ರರು ಸಮಾಧಾನಗೊಂಡಿದ್ದಾರೆ.
ಒಟ್ಟಿನಲ್ಲಿ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನುವಂತೆ ಅನ್ನ ಕೊಟ್ಟವರನ್ನೇ ಕೊಲೆ ಮಾಡಿದ ಆರೋಪಿ ತಾನು ಮಾಡಿದ ಸಣ್ಣ ತಪ್ಪಿನಿಂದಾಗಿ ಉಳಿದ ಮೂವರು ಆರೋಪಿಗಳ ಜತೆ ಕೊನೆಗೂ ಶಾಶ್ವತವಾಗಿ ಸೆರೆ ಮನೆ ಸೇರಿದ್ದಾನೆ. ಈ ಮೂಲಕ ಮೃತ ವೃದ್ಧ ದಂಪತಿಗಳ ಆತ್ಮಕ್ಕೂ ಶಾಂತಿ ದೊರಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ